7

ತೈಲ ಸುಂಕ ಕಡಿತ ಇಲ್ಲ: ಕೇಂದ್ರ ಸಚಿವ ಜೇಟ್ಲಿ ಖಚಿತ ನುಡಿ

Published:
Updated:
ತೈಲ ಸುಂಕ ಕಡಿತ ಇಲ್ಲ: ಕೇಂದ್ರ ಸಚಿವ ಜೇಟ್ಲಿ ಖಚಿತ ನುಡಿ

ನವದೆಹಲಿ: ಏರುತ್ತಲೇ ಇರುವ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಕೆಳಗಿಳಿಸುವುದಕ್ಕಾಗಿ ಅವುಗಳ ಮೇಲಿನ ಎಕ್ಸೈಸ್‌ ಸುಂಕವನ್ನು ಕಡಿತ ಮಾಡುವ ಸಾಧ್ಯತೆ ಇಲ್ಲ ಎಂದು ಕೇಂದ್ರ ಸಚಿವ ಅರುಣ್‌ ಜೇಟ್ಲಿ ಖಚಿತವಾಗಿ ಹೇಳಿದ್ದಾರೆ.

ಎಕ್ಸೈಸ್‌ ಸುಂಕ ಕಡಿಮೆ ಮಾಡಿದರೆ ದೇಶವು ‘ನಿರ್ವಹಿಸಲಾಗದ ಸಾಲದ ಸುಳಿಗೆ ಸಿಲುಕಲಿದೆ’ ಎಂದು ಅವರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ಲೇಖನದಲ್ಲಿ ತಿಳಿಸಿದ್ದಾರೆ.

ಸುಂಕ ಕಡಿತ ಮಾಡುವ ಮೂಲಕ ಪೆಟ್ರೋಲ್‌ ಬೆಲೆಯನ್ನು ಲೀಟರ್‌ಗೆ ₹25ರಷ್ಟು ಕಡಿಮೆ ಮಾಡಲು ಸರ್ಕಾರಕ್ಕೆ ಸಾಧ್ಯವಿದೆ ಎಂದು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಮತ್ತು ಇತರರು ಇತ್ತೀಚೆಗೆ ಪ್ರತಿಪಾದಿಸಿದ್ದರು.

ಆದರೆ, ಇದಕ್ಕೆ ಜೇಟ್ಲಿ ತಿರುಗೇಟು ನೀಡಿದ್ದಾರೆ. ಚಿದಂಬರಂ ಅವರದ್ದು ‘ಬಲೆಗೆ ಕೆಡವುವ ಸಲಹೆ’ ಎಂದಿದ್ದಾರೆ.

‘ಹಿಂದೆ ಹಣಕಾಸು ಸಚಿವರಾಗಿದ್ದ ಒಬ್ಬರು ತೈಲ ಬೆಲೆಯನ್ನು ಲೀಟರ್‌ಗೆ ₹25ರಷ್ಟು ಕಡಿತ ಮಾಡಬಹುದು ಎಂದಿದ್ದಾರೆ. ಆದರೆ, ಅವರು ಇದನ್ನು ಎಂದೂ ಮಾಡಿಲ್ಲ. ಇದು ಬಲೆಗೆ ಕೆಡವುವ ಸಲಹೆ. ಭಾರತವನ್ನು ನಿರ್ವಹಿಸಲಾಗದ ಸಾಲದ ಬಲೆಗೆ ತಳ್ಳುವ ಸಲಹೆ ಇದು. ಯುಪಿಎ ಸರ್ಕಾರ ದೇಶವನ್ನು ಇಂತಹ ಸ್ಥಿತಿಗೆ ತಳ್ಳಿ ಹೋಗಿತ್ತು’ ಎಂದು ಜೇಟ್ಲಿ ಹೇಳಿದ್ದಾರೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕ ಕಡಿತ ಹಣಕಾಸು ಕೊರತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಸುಂಕ ಕಡಿತ ಮಾಡುವುದಿದ್ದರೆ ಅದಕ್ಕೆ ಅನುಗುಣವಾಗಿ ವೆಚ್ಚವನ್ನೂ ಕಡಿಮೆ ಮಾಡಲೇಬೇಕಾಗುತ್ತದೆ ಎಂದು ಮಾರುಕಟ್ಟೆ ರೇಟಿಂಗ್‌ ಸಂಸ್ಥೆ ಮೂಡೀಸ್‌ ಇತ್ತೀಚೆಗೆ ಹೇಳಿತ್ತು.

ಪ್ರಾಮಾಣಿಕವಾಗಿ ತೆರಿಗೆ ಕಟ್ಟಿ: ಆದಾಯ ಮೂಲವಾಗಿ ತೈಲದ ಮೇಲಿನ ಅವಲಂಬನೆಯನ್ನು ತಪ್ಪಿಸುವುದಕ್ಕಾಗಿ ಜನರು ಪ್ರಾಮಾಣಿಕವಾಗಿ ತೆರಿಗೆ ಕಟ್ಟಬೇಕು ಎಂದು ಜೇಟ್ಲಿ ಕರೆ ನೀಡಿದ್ದಾರೆ.

ವೇತನದಾರರು ತಮ್ಮ ತೆರಿಗೆ ಪಾವತಿಸುತ್ತಾರೆ. ಇತರ ಎಲ್ಲ ವರ್ಗಗಳು ತೆರಿಗೆ ಕಟ್ಟುವ ಪ್ರವೃತ್ತಿಯನ್ನು ಉತ್ತಮಪಡಿಸಿಕೊಳ್ಳಲೇಬೇಕು. ಈ ವರ್ಗಗಳು ಸರಿಯಾಗಿ ತೆರಿಗೆ ಪಾವತಿಸುವುದಿಲ್ಲವಾದ್ದರಿಂದ ನಾವು ತೆರಿಗೆ ಪಾವತಿ ಬದ್ಧತೆ ಇಲ್ಲದ ಸಮಾಜವಾಗಿದ್ದೇವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವ್ಯವಸ್ಥೆಯಲ್ಲಿನ ಸುಧಾರಣೆಗಳು, ಆರ್ಥಿಕ ವಿವೇಕ ಮತ್ತು ಅರ್ಥವ್ಯವಸ್ಥೆಯ ಸ್ಥಿರತೆಯಿಂದಾಗಿ ಮಾರುಕಟ್ಟೆ ಗಟ್ಟಿಯಾಗುತ್ತಾ ಹೋಗುತ್ತದೆ. ಆರ್ಥಿಕ ಅಶಿಸ್ತು ಮತ್ತು ಬೇಜವಾಬ್ದಾರಿತನಕ್ಕೆ ಮಾರುಕಟ್ಟೆಯ ಹೊಡೆತ ಕಟ್ಟಿಟ್ಟ ಬುತ್ತಿ. ಯುಪಿಎ ಸರ್ಕಾರದ ಅವಧಿಯ ‘ನಿಷ್ಕ್ರಿಯತೆ’ಯಿಂದ ಎನ್‌ಡಿಎ ಅವಧಿಯ ‘ಅತಿ ವೇಗವಾಗಿ ಬೆಳೆಯುವ ಅರ್ಥ ವ್ಯವಸ್ಥೆ’ಯಾಗಿ ಭಾರತದ ಬೆಳವಣಿಗೆ ಇದನ್ನು ಸೂಚಿಸುತ್ತದೆ. ತೆರಿಗೆ ಮತ್ತು ಜಿಡಿಪಿ (ಒಟ್ಟು ದೇಶೀ ಉತ್ಪನ್ನ) ಅನುಪಾತವನ್ನು ಉತ್ತಮಪಡಿಸುವುದು ಸರ್ಕಾರದ ಗುರಿ ಎಂದು ಜೇಟ್ಲಿ ವಿವರಿಸಿದ್ದಾರೆ.

ಭಾರಿ ನಷ್ಟ

ತೈಲದ ಮೇಲಿನ ಎಕ್ಸೈಸ್‌ ಸುಂಕವನ್ನು ಲೀಟರ್‌ಗೆ ₹1ರಷ್ಟು ಕಡಿತ ಮಾಡಿದರೆ ಸರ್ಕಾರಕ್ಕೆ ₹13 ಸಾವಿರ ಕೋಟಿ ನಷ್ಟವಾಗುತ್ತದೆ ಎಂದು ಅಂದಾಜಿಸಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏಪ್ರಿಲ್‌ನಲ್ಲಿ ಒಂದು ಬ್ಯಾರಲ್‌ ಕಚ್ಚಾ ತೈಲದ ದರ 66 ಡಾಲರ್‌ (₹4,490) ಇತ್ತು. ಈಗ ಅದು 74 (₹5,035) ಡಾಲರ್‌ಗೆ ಏರಿಕೆಯಾಗಿದೆ.

ಜಿಎಸ್‌ಟಿ: ರಾಜ್ಯಗಳಿಗೆ ಸಿಂಹಪಾಲು

ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಮೂಲಕ ಸಂಗ್ರಹವಾಗುವ ಒಟ್ಟು ಮೊತ್ತದಲ್ಲಿ ಶೇ 50ರಷ್ಟನ್ನು ರಾಜ್ಯಗಳು ಪಡೆದುಕೊಳ್ಳುತ್ತಿವೆ ಎಂದು ಜೇಟ್ಲಿ ಹೇಳಿದ್ದಾರೆ.

ಜಿಎಸ್‌ಟಿ ಜಾರಿ ಬಳಿಕ ರಾಜ್ಯ ಸರ್ಕಾರಗಳ ಸಂಪನ್ಮೂಲ ಸಂಗ್ರಹದ ಸ್ವಾತಂತ್ರ್ಯವೇ ಮೊಟಕಾಗಿದೆ ಎಂದು ಭಾನುವಾರ ನಡೆದ ನೀತಿ ಆಯೋಗದ ಸಭೆಯಲ್ಲಿ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ನೀಡಿದ ಹೇಳಿಕೆಗೆ ಜೇಟ್ಲಿ ಈ ರೀತಿ ತಿರುಗೇಟು ನೀಡಿದ್ದಾರೆ.

ಜಿಎಸ್‌ಟಿಯಲ್ಲಿನ ಪಾಲಿನ ಜತೆಗೆ, ಕೇಂದ್ರದಿಂದ ಹಂಚಿಕೆಯಾಗುವ ಅನುದಾನ ಮತ್ತು ತೈಲದ ಮೇಲೆ ವಿಧಿಸಲಾಗುವ ಸುಂಕದಿಂದಲೂ ರಾಜ್ಯಗಳು ಆದಾಯ ಪಡೆಯುತ್ತಿವೆ ಎಂದು ಜೇಟ್ಲಿ ವಿವರಿಸಿದ್ದಾರೆ.

ತೈಲದ ಮೇಲೆ ರಾಜ್ಯಗಳು ವಿಧಿಸುವ ತೆರಿಗೆ ಜಿಎಸ್‌ಟಿ ವ್ಯಾಪ್ತಿಗೆ ಬರುವುದಿಲ್ಲ. ಇದಲ್ಲದೆ, ತೈಲದ ಮೇಲೆ ಬೇರೆ ಸುಂಕಗಳನ್ನೂ ರಾಜ್ಯಗಳು ವಿಧಿಸುತ್ತಿವೆ. ಇದಲ್ಲದೆ, ಸರಕುಗಳ ಮೇಲೆ ಸ್ಥಳೀಯ ತೆರಿಗೆಗಳನ್ನೂ ಹಾಕಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

‘ಕೇಂದ್ರವು ಸಂಗ್ರಹಿಸುವ ತೆರಿಗೆಯಲ್ಲಿ ಶೇ 42ರಷ್ಟನ್ನು ರಾಜ್ಯಗಳ ಜತೆಗೆ ಹಂಚಿಕೊಳ್ಳಲಾಗುತ್ತಿದೆ. ರಾಜ್ಯಗಳು ಸ್ಥಳೀಯ ತೆರಿಗೆಗಳಲ್ಲದೆ, ಜಿಎಸ್‌ಟಿಯ ಶೇ 50ರಷ್ಟನ್ನು ಪಡೆದುಕೊಳ್ಳುತ್ತಿವೆ’ ಎಂದು ಜೇಟ್ಲಿ ತಿಳಿಸಿದ್ದಾರೆ.

ಹಣಕಾಸು ಸಚಿವ ಯಾರು: ಕಾಂಗ್ರೆಸ್‌ ಪ್ರಶ್ನೆ

ಅರುಣ್‌ ಜೇಟ್ಲಿ ಅವರು ಹಣಕಾಸು ಸಚಿವಾಲಯದ ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದಾರೆ ಎಂಬ ವರದಿಗಳ ಆಧಾರದಲ್ಲಿ ಕೇಂದ್ರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ. ದೇಶದ ಹಣಕಾಸು ಸಚಿವ ಯಾರು ಎಂಬ ದ್ವಂದ್ವ ಇದೆ. ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದೆ.

‘ಭಾರತದ ಹಣಕಾಸು ಸಚಿವ ಯಾರು? ಪ್ರಧಾನಿ ಕಾರ್ಯಾಲಯದ ವೆಬ್‌ಸೈಟ್‌ ಒಂದನ್ನು ಹೇಳಿದರೆ ಹಣಕಾಸು ಸಚಿವಾಲಯದ ವೆಬ್‌ಸೈಟ್‌ ಬೇರೊಂದನ್ನೇ ಹೇಳುತ್ತಿದೆ. ಖಾತೆರಹಿತ ಸಚಿವ ಎಂದು ಪ್ರಧಾನಿ ಕಾರ್ಯಾಲಯದ ವೆಬ್‌ಸೈಟ್‌ ಹೇಳುತ್ತಿರುವ ವ್ಯಕ್ತಿಯೊಬ್ಬರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ವಕ್ತಾರ ಮನೀಶ್‌ ತಿವಾರಿ ಹೇಳಿದ್ದಾರೆ.

ಕಿಡ್ನಿ ಕಸಿಗೆ ಒಳಗಾಗಿರುವ ಜೇಟ್ಲಿ ಅವರು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಅವರು ಹೊಂದಿದ್ದ ಹಣಕಾಸು ಮತ್ತು ಉದ್ಯಮ ವ್ಯವಹಾರಗಳ ಖಾತೆಗಳನ್ನು ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಅವರಿಗೆ ವಹಿಸಲಾಗಿದೆ. ಹಾಗಾಗಿ ಪ್ರಧಾನಿ ಕಾರ್ಯಾಲಯದ ವೆಬ್‌ಸೈಟ್‌ನಲ್ಲಿ ಜೇಟ್ಲಿ ಅವರು ಖಾತೆರಹಿತ ಸಚಿವ ಎಂದು ಹೇಳಲಾಗಿದೆ.

* ಆರ್ಥಿಕವಾಗಿ ಉತ್ತರದಾಯಿಯಾಗಿರುವ, ಸದೃಢ ಕೇಂದ್ರದಿಂದ ಮಾತ್ರ ಗ್ರಾಹಕರಿಗೆ ಪರಿಹಾರ ನೀಡಲು ಸಾಧ್ಯ. ತೈಲ ಬೆಲೆ ಏರಿಕೆಯಿಂದ ರಾಜ್ಯಗಳ ಆದಾಯ ಹೆಚ್ಚಾಗಿದೆ

-ಅರುಣ್‌ ಜೇಟ್ಲಿ, ಕೇಂದ್ರ ಸಚಿವ 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry