ಮಂಗಳವಾರ, ಜೂನ್ 22, 2021
28 °C

ವೈಯಕ್ತಿಕ ಮಾಹಿತಿ ಮಾರುಕಟ್ಟೆಯ ಸರಕಲ್ಲ

ಎನ್.ಎ.ಎಂ. ಇಸ್ಮಾಯಿಲ್ Updated:

ಅಕ್ಷರ ಗಾತ್ರ : | |

ವೈಯಕ್ತಿಕ ಮಾಹಿತಿ ಮಾರುಕಟ್ಟೆಯ ಸರಕಲ್ಲ

ಮೇ ತಿಂಗಳ ಕೊನೆಯ ಹೊತ್ತಿಗೆ ‘ಪ್ರೈವಸಿ ಪಾಲಿಸಿ ಅಪ್‌ಡೇಟ್’ ಎಂಬ ವಿಷಯಕ್ಕೆ ಸಂಬಂಧಿಸಿದ ಇ-ಮೇಲ್‌ಗಳು ಎಲ್ಲಾ ಇ-ಮೇಲ್ ಬಳಕೆದಾರರ ಇನ್‌ಬಾಕ್ಸ್‌ಗೆ ಬಂದು ಬೀಳತೊಡಗಿದ್ದವು. ಹೆಚ್ಚು ಕಡಿಮೆ ಇದೇ ಹೊತ್ತಿಗೆ ಹೆಚ್ಚಿನ ಎಲ್ಲಾ ಜಾಲತಾಣಗಳು ತಮ್ಮ ಪ್ರೈವಸಿ ಪಾಲಿಸಿ ಅಥವಾ ಬಳಕೆದಾರರ ಖಾಸಗಿ ಮಾಹಿತಿಯನ್ನು ಹೇಗೆ ಸಂಗ್ರಹಿಸುತ್ತೇವೆ, ಸಂಗ್ರಹಿಸಿದ್ದನ್ನು ಏನು ಮಾಡುತ್ತೇವೆ ಎಂಬುದನ್ನು ವಿವರಿಸುವ ‘ಪ್ರೈವಸಿ ಪಾಲಿಸಿ’ಯ ಕುರಿತ ಹೊಸ ಪ್ರಕಟಣೆಗಳು ಕಾಣಿಸಿಕೊಂಡವು. ಹೆಚ್ಚಿನ ಬಳಕೆದಾರರು ಇವುಗಳನ್ನು ಓದದೆಯೇ ಒಪ್ಪಿರುವ ಸಾಧ್ಯತೆ ಹೆಚ್ಚು. ಹಾಗೆಯೇ ಇದೇಕೆ ಬರುತ್ತಿದೆ ಎಂಬುದನ್ನು ಯೋಚಿಸದೇ ಇರುವವರ ಸಂಖ್ಯೆಯೂ ಸಾಕಷ್ಟು ದೊಡ್ಡದೇ.

ಈ ಬಗೆಯ ಪ್ರಕಟಣೆಗಳು ಕಾಣಿಸಿಕೊಳ್ಳುವುದಕ್ಕೆ ಒಂದು ಕಾರಣವಿದೆ. ಅದುವೇ ಯುರೋಪಿಯನ್ ಒಕ್ಕೂಟ ಜಾರಿಗೆ ತಂದ ‘ಜಿಡಿಪಿಆರ್’ ಅಥವಾ ಜನರಲ್ ಡೇಟಾ ಪ್ರೊಟೆಕ್ಷನ್ ರೆಗ್ಯುಲೇಷನ್ ಎಂಬ ಹೊಸ ಕಾಯ್ದೆ. ಪರಿಣಾಮವಾಗಿ ಎಲ್ಲಾ ವೆಬ್‌ಸೈಟ್‌ಗಳೂ ತಾವು ಸಂಗ್ರಹಿಸುವ ಬಳಕೆದಾರರ ಮಾಹಿತಿಯನ್ನು ಹೇಗೆ ಬಳಸುತ್ತೇವೆ ಎಂಬುದನ್ನು ವಿವರಿಸಿ ಬಳಕೆದಾರರಿಂದ ಅದಕ್ಕೆ ಒಪ್ಪಿಗೆ ಪಡೆಯಲೇಬೇಕಾಗಿತ್ತು. ಒಂದು ವೇಳೆ ಇದಕ್ಕೆ ತಪ್ಪಿದರೆ ಈ ಸೇವೆಗಳನ್ನು ನೀಡುವವರು ತಮ್ಮ ವಾರ್ಷಿಕ ವ್ಯವಹಾರದ ಒಟ್ಟು ಮೊತ್ತದ ಶೇಕಡಾ ನಾಲ್ಕರಷ್ಟು ದಂಡವಾಗಿ ಪಾವತಿಸಬೇಕಾಗಿತ್ತು.

ಇಷ್ಟಕ್ಕೂ ಈ ಜಿಡಿಪಿಆರ್ ಏನು? ನಾವು ಅಂತರ್ಜಾಲದಲ್ಲಿ ಬಳಸುವ ಪ್ರತಿಯೊಂದು ಸೇವೆಯೂ ಕೆಲಮಟ್ಟಿಗೆ ನಮ್ಮ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸುತ್ತಲೇ ಇರುತ್ತದೆ. ಸಾಮಾಜಿಕ ಜಾಲತಾಣದ ಖಾತೆ ಹೊಂದಲು ನಾವು ವೈಯಕ್ತಿಕ ಮಾಹಿತಿಗಳನ್ನು ಒದಗಿಸಲೇ ಬೇಕಾಗುತ್ತದೆ. ಇ-ಕಾಮರ್ಸ್ ತಾಣಗಳಿಂದ ಖರೀದಿಸುವಾಗ ಈ ಎಲ್ಲಾ ಮಾಹಿತಿಗಳನ್ನು ನಾವು ನೀಡಲೇಬೇಕು. ನೋಂದಣಿ ಇಲ್ಲದೆ ನೋಡುವ ತಾಣ ಗಳೂ ಕೂಡಾ ನಮ್ಮ ಮಾಹಿತಿಗಳನ್ನು ಪರೋಕ್ಷವಾಗಿ ಸಂಗ್ರಹಿಸುತ್ತವೆ. ‘ಕುಕೀಸ್’ ಎಂದು ತಾಂತ್ರಿಕವಾಗಿ ಗುರುತಿಸಲಾಗುವ ಸಣ್ಣಸಣ್ಣ ತಂತ್ರಾಂಶ ತುಣುಕುಗಳು ನಮ್ಮ ಬ್ರೌಸರ್‌ನಲ್ಲಿ ಕುಳಿತು ನಾವು ಮಾಡುವ ಕೆಲಸವನ್ನೆಲ್ಲಾ ದಾಖಲಿಸಿ ಅದರ ಮಾತೃ ಸರ್ವರ್‌ಗೆ ಕಳುಹಿಸುತ್ತದೆ. ನೀವು ಒಮ್ಮೆ ಅಮೆಜಾನ್ ತಾಣದಲ್ಲಿ ನಿರ್ದಿಷ್ಟ ವಸ್ತುವೊಂದನ್ನು ಖರೀದಿಸುವುದಕ್ಕಾಗಿ ಪರಿಶೀಲಿಸಿದ್ದರೆ ಮುಂದೆ ನೀವು ಭೇಟಿ ನೀಡುವ ತಾಣಗಳಲ್ಲೆಲ್ಲಾ ಅದರ ಜಾಹೀರಾತು ಕಾಣಿಸುವುದೇ ಇದೇ ಕಾರಣದಿಂದ.

ಸೈಬರ್ ಲೋಕದಲ್ಲಿ ನಿಮ್ಮ ಹೆಜ್ಜೆಜಾಡನ್ನು ಹಿಂಬಾಲಿಸುವ ಈ ಕ್ರಿಯೆ ಒಂದರ್ಥದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದೇ ಆಗಿರುತ್ತದೆ. ಇನ್ನು ಫೇಸ್‌ಬುಕ್, ಗೂಗಲ್‌ ಮತ್ತು ಅಮೆಜಾನ್‌ನಂಥ ಇಂಟರ್ನೆಟ್ ದೈತ್ಯರು ಬಳಕೆದಾರರ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಕಟ್ಟಿಕೊಳ್ಳುವ ಕೆಲಸವನ್ನೂ ಮಾಡುತ್ತಿರುತ್ತಾರೆ. ಈ ಎಲ್ಲದರ ಮೂಲಕ ಅವರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೆ ಅಥವಾ ನಿರ್ದಿಷ್ಟ ಉತ್ಪನ್ನಗಳನ್ನು ಖರೀದಿಸುವಂತೆ ಮಾಡುವುದಕ್ಕೆ ಪ್ರಯತ್ನಿಸುತ್ತಿರುತ್ತಾರೆ.

ಇದು ಕೇವಲ ನಿರ್ದಿಷ್ಟ ಉತ್ಪನ್ನವೊಂದನ್ನು ಮಾರಾಟ ಮಾಡುವ ವಿಷಯವಷ್ಟೇ ಅಲ್ಲ ಎಂಬುದು ಈಗ ಎಲ್ಲರಿಗೂ ಅರ್ಥವಾಗಿದೆ. ಚುನಾವಣಾ ಫಲಿತಾಂಶಗಳನ್ನು ತಮಗೆ ಬೇಕಾದಂತೆ ತಿರುಗಿಸಿಕೊಳ್ಳುವುದಕ್ಕೆ ಅಗತ್ಯವಿರುವ ‘ಒಮ್ಮತದ ಉತ್ಪಾದನೆ’ ಕೂಡಾ ಈ ಬಗೆಯ ‘ಜಾಡು ಹಿಡಿಯುವ’ ಕ್ರಿಯೆಯಲ್ಲಿ ಸಾಧ್ಯ ಎಂಬುದು ಸಾಬೀತಾಗಿದೆ. ಇಷ್ಟಕ್ಕೂ ಬಳಕೆದಾರನ ಅರಿವಿಲ್ಲದೆ ಅವನ ಆಸಕ್ತಿಗಳನ್ನು ದಾಖಲಿಸುವುದು ಅದನ್ನು ಮಾರುಕಟ್ಟೆ ವಿಸ್ತರಿಸುವುದಕ್ಕೆ ಬಳಸುವುದು ಅನೈತಿಕ ಎಂಬ ವಾದ ಬಹಳ ಹಳೆಯದು. ಅದಕ್ಕಿಂತ ಹೆಚ್ಚಿನದ್ದು ಈ ಮಾಹಿತಿಗಳು ಅಪಾತ್ರರ ಕೈಗೆ ಸಿಕ್ಕರೆ ಎಷ್ಟು ಅಪಾಯಕಾರಿಯಾಗಿ ಪರಿಣಮಿಸಬಹುದು ಎಂಬುದಕ್ಕೂ ಸಾಕಷ್ಟು ಉದಾಹರಣೆಗಳಿವೆ. ವ್ಯಕ್ತಿಯ ಅಂತರ್ಜಾಲ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದರೆ ಅವನ ಬದುಕಿನ ಮೇಲೊಂದು ಆಕ್ರಮಣ ನಡೆಸುವುದಕ್ಕೂ ಸುಲಭ. ಪಾಸ್‌ವರ್ಡ್‌ ಕಳ್ಳತನಗಳನ್ನು ನಡೆಸುವವರೂ ಬಳಸುವುದು ಇದೇ ಬಗೆಯ ತಂತ್ರಜ್ಞಾನವನ್ನೇ.

ಖಾಸಗಿತನದ ವಿಚಾರದಲ್ಲಿ ಹೆಚ್ಚು ಸೂಕ್ಷ್ಮವಾಗಿರುವ ಯೂರೋಪಿಯನ್ ಒಕ್ಕೂಟ ಕಳೆದ ಎರಡು ವರ್ಷಗಳಿಂದಲೂ ಇಂಟರ್ನೆಟ್ ದೈತ್ಯರ ಬೇಹುಗಾರಿಕೆಗೆ ನಿಯಂತ್ರಣವೊಡ್ಡಿ ವ್ಯಕ್ತಿಯ ಖಾಸಗಿತನವನ್ನು ಉಳಿಸುವುದಕ್ಕೊಂದು ಕಾನೂನು ರೂಪಿಸುತ್ತಿತ್ತು. ಅದು ಈಗ ಜಾರಿಗೊಂಡಿದೆ. ಅದನ್ನೇ ಜಿಡಿಪಿಆರ್ ಎಂದು ಕರೆಯಲಾಗುತ್ತದೆ.

ಜಿಡಿಪಿಆರ್‌ನ ಪರಿಣಾಮ ಈಗ ವಿಶ್ವವ್ಯಾಪಿಯಾಗಿ ಕಾಣಿಸುತ್ತಿದೆ. ಇದು ವ್ಯಕ್ತಿಯ ಖಾಸಗಿತನಕ್ಕೆ ಮತ್ತು ಖಾಸಗಿ ಸಂಸ್ಥೆಗಳು ಸಂಗ್ರಹಿಸುವ ಬಳಕೆದಾರರ ಮಾಹಿತಿಯ ಸುರಕ್ಷತೆಗೆ ಅಗತ್ಯವಿರುವ ಒಂದು ಕಾನೂನಿನ ಚೌಕಟ್ಟನ್ನು ಒದಗಿಸಿದೆ. ಒಂದರ್ಥದಲ್ಲಿ ಇದು ವಿಶ್ವದ ಇತರ ರಾಷ್ಟ್ರಗಳಿಗೆ ಮಾದರಿಯಾಗುವಂಥ ಕಾನೂನು ಇದು.

ಯೂರೋಪಿನಲ್ಲಿ ಇದೆಲ್ಲವೂ ನಡೆಯುತ್ತಿದ್ದಾಗ ಭಾರತದಲ್ಲಿ ಒಂದು ಬೆಳವಣಿಗೆ ನಡೆಯಿತು. ಕಳೆದ ವರ್ಷ ‘ದತ್ತಾಂಶ ಸುರಕ್ಷೆ’ಯನ್ನು ಖಾತರಿ ಪಡಿಸುವುದು ಹೇಗೆ ಎಂಬುದನ್ನು ಪರಿಶೀಲಿಸುವುದಕ್ಕೆ ನ್ಯಾಯಮೂರ್ತಿ ಶ್ರೀಕೃಷ್ಣ ಅವರ ನೇತೃತ್ವದ ಸಮಿತಿಯೊಂದನ್ನು ಕೇಂದ್ರ ಸರ್ಕಾರ ನೇಮಿಸಿತ್ತು. ಅದು ತನ್ನ ಅಂತಿಮ ವರದಿಯನ್ನು ನೀಡುವುದಕ್ಕೆ ಸಿದ್ಧವಾಗಿದೆ. ಇದೇ ಹೊತ್ತಿನಲ್ಲಿ ‘ಸೇವ್ ಅವರ್ ಪ್ರೈವಸಿ’ ಎಂಬ ಜನಾಂದೋಲನವೊಂದು ಯೂರೋಪಿನ ಜಿಡಿಪಿಆರ್‌ ಅನ್ನು ಹೋಲುವ ಮಾದರಿ ಮಸೂದೆಯೊಂದನ್ನು ಶ್ರೀಕೃಷ್ಣ ಸಮಿತಿಗೆ ನೀಡಿ ಭಾರತದಲ್ಲಿ ದತ್ತಾಂಶ ಸುರಕ್ಷೆಯ ಜೊತೆಗೆ ಖಾಸಗಿತನದ ಸಂರಕ್ಷಣೆಯೂ ಅಗತ್ಯವಿದೆ ಎಂದು ಹೇಳಿತು.

ಭಾರತದಲ್ಲಿ ಸರ್ಕಾರದಿಂದ ಹಿಡಿದ ಖಾಸಗಿ ಸಂಸ್ಥೆಗಳ ತನಕ ಸಂಗ್ರಹಿಸುವ ಖಾಸಗಿ ಮಾಹಿತಿಯ ನಿರ್ವಹಣೆಗೆ ಸಂಬಂಧಿಸಿದಂತೆ ಈ ತನಕವೂ ಒಂದು ಸ್ಪಷ್ಟ ಕಾನೂನಿಲ್ಲ. ‘ಆಧಾರ್’ಗೆ ಸಂಬಂಧಿಸಿದ ಮೊಕದ್ದಮೆಗಳ ವಿಚಾರಣೆಯಲ್ಲಿ ಕೇಂದ್ರ ಸರ್ಕಾರ ‘ಖಾಸಗಿತನ ಎಂಬುದು ಮೂಲಭೂತ ಹಕ್ಕಲ್ಲ’ ಎಂದು ವಾದಿಸಿತು. ಆದರೆ ಸುಪ್ರೀಂಕೋರ್ಟ್ ಖಾಸಗಿತನ ಮೂಲಭೂತ ಹಕ್ಕು ಎಂಬ ವಾದವನ್ನು ಎತ್ತಿಹಿಡಿದಿದೆ. ಈ ಹಿನ್ನೆಲೆಯಲ್ಲಿ ಜಿಡಿಪಿಆರ್ ಬಗೆಯ ಒಂದು ಕಾಯ್ದೆಯ ಅಗತ್ಯ ಭಾರತಕ್ಕೂ ಇದೆ. ಶ್ರೀಕೃಷ್ಣ ಸಮಿತಿ ಈ ವಿಷಯದಲ್ಲಿ ‘ಮಧ್ಯಮ ಮಾರ್ಗ’ ತುಳಿಯಲಿದೆ ಎಂದು ಸ್ವತಃ ನ್ಯಾಯಮೂರ್ತಿ ಶ್ರೀಕೃಷ್ಣ ಅವರೇ ಹೇಳಿದ್ದಾರೆ. ಇದರ ಅರ್ಥವೇನು?

‘ಸೇವ್ ಅವರ್ ಪ್ರೈವಸಿ’ ಆಂದೋಲನದಲ್ಲಿ ಇರುವವರು ಎತ್ತುತ್ತಿರುವ ಪ್ರಶ್ನೆಯೂ ಇದುವೇ ಆಗಿದೆ. ಸದ್ಯ ಈ ಸಮಿತಿಯಲ್ಲಿ ಇರುವವರು ಅಂತರ್ಜಾಲಾಧಾರಿತ ಉದ್ಯಮಗಳು ಮತ್ತು ಸರ್ಕಾರಿ ಇಲಾಖೆಗಳ ಪ್ರತಿನಿಧಿಗಳೇ ಹೊರತು ಜನಸಾಮಾನ್ಯರನ್ನು ಅರ್ಥಾತ್ ಬಳಕೆದಾರರನ್ನು ಪ್ರತಿನಿಧಿಸುವವರು ಯಾರೂ ಇಲ್ಲ. ಈ ಸಮಿತಿ ತನ್ನ ವ್ಯಾಪ್ತಿ ‘ದತ್ತಾಂಶ ಸಂರಕ್ಷಣೆ’ ಮಾತ್ರ ಎನ್ನುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದ ಅಂತರ್ಜಾಲಾಧಾರಿತ ಸೇವೆಗಳ ಬಳಕೆದಾರರು ಜಿಡಿಪಿಆರ್ ಅನ್ನು ಒಂದು ಮಾದರಿಯಾಗಿ ಪರಿಗಣಿಸಿ ಕಾರ್ಯಪ್ರವೃತ್ತರಾಗುವ ಅಗತ್ಯವಿದೆ.

ಜಿಡಿಪಿಆರ್ ಸಂಪೂರ್ಣವಾಗಿ ದೋಷಮುಕ್ತವಾಗಿರುವ ಅಥವಾ ಗ್ರಾಹಕನ ಹಿತನವನ್ನು ಸಂಪೂರ್ಣವಾಗಿ ರಕ್ಷಿಸುವ ಕಾಯ್ದೆಯೇನೂ ಅಲ್ಲ. ಆದರೆ ಅಮೆರಿಕ ಅಥವಾ ಭಾರತದಂತೆ ವ್ಯಕ್ತಿಯ ಖಾಸಗಿ ಮಾಹಿತಿಯನ್ನು ಯಾರು ಬೇಕಾದರೂ ಮಾರಾಟ ಮಾಡುವಂಥ ಪರಿಸ್ಥಿತಿಯನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿರುವ ಕಾಯ್ದೆ. ತಂತ್ರಜ್ಞಾನ ಒಡ್ಡುತ್ತಿರುವ ಹೊಸ ಸವಾಲನ್ನು ಎದುರಿಸುವುದಕ್ಕೆ ಸ್ವಲ್ಪ ಮಟ್ಟಿಗಾದರೂ ಶಕ್ತಿ ಇರುವ ಕಾಯ್ದೆ ಎಂಬನದನ್ನಂತೂ ಅಲ್ಲಗಳೆಯಲು ಸಾಧ್ಯವಿಲ್ಲ. ಈ ಬಗೆಯ ಕಠಿಣ ಕಾಯ್ದೆಯಿಂದ ಹೂಡಿಕೆಗೆ ಹಿನ್ನಡೆಯಾಗುತ್ತಿದೆ ಎಂಬ ವಾದ ಈಗಾಗಲೇ ಕೇಳಿಬಂದಿದೆ. ಈ ವಾದವನ್ನು ಯಾವುದೇ ಕಾಯ್ದೆಗೆ ಸಂಬಂಧಿಸಿಯೂ ಹೇಳಬಹುದು. ವಾಹನಗಳು ನಿರ್ದಿಷ್ಟ ವೇಗದ ಮಿತಿಯನ್ನು ಮೀರಬಾರದು ಎಂಬ ಮೋಟಾರು ವಾಹನ ಕಾಯ್ದೆ ಕಾನೂನಿನಿಂದಾಗಿ ಕಾರು ಮಾರುಕಟ್ಟೆ ಕುಸಿಯುತ್ತದೆ ಎಂಬಂಥ ವಾದ ಇದು.

ವಿಶ್ವದ ಎಲ್ಲಾ ಮಾಹಿತಿಯು ಬೆರಳೆಣಿಕೆಯಷ್ಟು ಕಂಪೆನಿಗಳ ಬಳಿಯಲ್ಲಷ್ಟೇ ಇರುತ್ತದೆ ಎಂಬ ವಾಸ್ತವವನ್ನು ಗಮನದಲ್ಲಿಟ್ಟುಕೊಂಡು ಖಾಸಗಿತನ ರಕ್ಷಣೆಗೆ ಸಂಬಂಧಿಸಿದ ಕಾಯ್ದೆಗಳನ್ನು ನೋಡುವ ಅಗತ್ಯವಿದೆ. ಈ ಕಂಪೆನಿಗಳ ಗಾತ್ರ ಮತ್ತು ವಹಿವಾಟಿನ ಪ್ರಮಾಣ ಅನೇಕ ದೇಶಗಳ ಬಜೆಟ್‌ನಷ್ಟು ದೊಡ್ಡದು ಎಂಬ ಅರಿವೂ ನಮಗಿರಬೇಕು. ಎಲ್ಲದಕ್ಕೂ ಮುಖ್ಯವಾಗಿ ವ್ಯಕ್ತಿಯ ವೈಯಕ್ತಿಕ ಮಾಹಿತಿ ಮತ್ತು ಖಾಸಗಿತನ ಎಂಬುದು ಅವನ ಹಕ್ಕು. ಅದನ್ನೊಂದು ಮಾರುಕಟ್ಟೆಯ ಸರಕು ಎಂದು ಭಾವಿಸುವುದೇ ಅಸಂಗತ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.