7
‘ಥರ್ಡ್‌ ಪಾರ್ಟಿ’ ವಿಮೆ ಕಂತು ಹೆಚ್ಚಳಕ್ಕೆ ಸರಕು ವಾಹನ ಮಾಲೀಕರ ವಿರೋಧ

ಲಾರಿ ಮುಷ್ಕರ ನೀರಸ ಆರಂಭ

Published:
Updated:
ಲಾರಿ ಮುಷ್ಕರ ನೀರಸ ಆರಂಭ

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್‌ ದರ ಹಾಗೂ ವಾಹನಗಳ ‘ಥರ್ಡ್‌ ಪಾರ್ಟಿ’ ವಿಮೆ ಕಂತು ಹೆಚ್ಚಿಸಿರುವುದನ್ನು ಖಂಡಿಸಿ ಅಖಿಲ ಭಾರತೀಯ ಸರಕು ಸಾಗಣೆ ವಾಹನಗಳ ಮಾಲೀಕರ ಒಕ್ಕೂಟ ಕರೆ ನೀಡಿದ್ದ ಅನಿರ್ದಿಷ್ಟ ಅವಧಿಯ ಮುಷ್ಕರಕ್ಕೆ ರಾಜ್ಯದಲ್ಲಿ ಸೋಮವಾರ ನೀರಸ ಬೆಂಬಲ ವ್ಯಕ್ತವಾಗಿದೆ.

ರಾಜ್ಯದಲ್ಲಿ ಶೇ 40ರಷ್ಟು ವಾಹನಗಳ ಓಡಾಟ ಸ್ಥಗಿತವಾಗಿತ್ತು. ಹಣ್ಣು–ತರಕಾರಿ, ಹಾಲು ಮುಂತಾದ ಅಗತ್ಯ ವಸ್ತುಗಳ ಸಾಗಣೆಗೆ ಯಾವುದೇ ಅಡ್ಡಿ ಉಂಟಾಗಲಿಲ್ಲ.

ಬೆಂಗಳೂರಿನ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯ ಕೆಲವು ಮಳಿಗೆಗಳಲ್ಲಿ ವ್ಯಾಪಾರ– ವಹಿವಾಟು ಬಂದ್‌ ಆಗಿತ್ತು. ಬಹುಪಾಲು ಮಳಿಗೆಗಳಲ್ಲಿ ವಹಿವಾಟು ಯಥಾಸ್ಥಿತಿಯಲ್ಲಿ ನಡೆಯಿತು. ತುಮಕೂರು ರಸ್ತೆ, ಮೈಸೂರು ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಲಾರಿಗಳು ಸಾಲುಗಟ್ಟಿ ನಿಂತಿದ್ದು ಕಂಡುಬಂತು.

ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲೂ ಮುಷ್ಕರಕ್ಕೆ ಬೆಂಬಲ ವ್ಯಕ್ತವಾಗಿದೆ. ಆ ರಾಜ್ಯಗಳಿಂದ ನಿತ್ಯವೂ ಸಾವಿರಾರು ವಾಹನಗಳು ಕರ್ನಾಟಕಕ್ಕೆ ಬರುತ್ತಿದ್ದವು. ಅಂತಹ ವಾಹನಗಳ ಸಂಚಾರ ಸೋಮವಾರ ವಿರಳವಾಗಿತ್ತು.

ಡೀಸೆಲ್ ಸರಬರಾಜು ಮಾಡುವ ಟ್ಯಾಂಕರ್‌ಗಳ ಚಾಲಕರು ಹಾಗೂ ಮಾಲೀಕರು ಕೂಡಾ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಹಲವು ಬಂಕ್‌ಗಳಿಗೆ ತೈಲ ಪೂರೈಕೆ ಆಗಿಲ್ಲ. ಹೀಗಾಗಿ ಗ್ರಾಹಕರಿಗೆ ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

‘ದಕ್ಷಿಣ ಕರ್ನಾಟಕದಲ್ಲಿ ಮುಷ್ಕರಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಉತ್ತರ ಕರ್ನಾಟಕದಲ್ಲಿ ನೀರಸ ಬೆಂಬಲ ಸಿಕ್ಕಿದೆ. ಶನಿವಾರ ಮತ್ತು ಭಾನುವಾರ ಸಾಗಣೆಯಾಗಬೇಕಾಗಿದ್ದ ಸರಕುಗಳನ್ನು ಕೆಲವರು ಸೋಮವಾರ ಸಾಗಣೆ ಮಾಡಿದ್ದಾರೆ. ಸೋಮವಾರ ಹಲವೆಡೆ ಸರಕುಗಳ ಸಾಗಣೆ ಆಗಿಲ್ಲ’ ಎಂದು ಅಖಿಲ ಭಾರತೀಯ ಸರಕು ಸಾಗಣೆ ವಾಹನಗಳ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಿ. ಚನ್ನಾರೆಡ್ಡಿ ತಿಳಿಸಿದರು.

‘ಕೇಂದ್ರ ಸರ್ಕಾರ ಹಾಗೂ ವಿಮಾ ಕ್ಷೇತ್ರ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ವಿರುದ್ಧ ಹಮ್ಮಿಕೊಂಡಿರುವ ಮುಷ್ಕರವನ್ನು ಬೇಡಿಕೆ ಈಡೇರುವವರೆಗೂ ಕೈಬಿಡುವುದಿಲ್ಲ’ ಎಂದರು.

*

ಎರಡು ಬಣ; ಮುಷ್ಕರ ಗೊಂದಲ

ಸರಕು ಸಾಗಣೆ ವಾಹನಗಳ ಮಾಲೀಕರು, ಎರಡು ಬಣಗಳಲ್ಲಿ ಗುರುತಿಸಿಕೊಂಡಿದ್ದಾರೆ. ಬಿ. ಚನ್ನಾರೆಡ್ಡಿ ನೇತೃತ್ವದ ಬಣ ಕರೆ ನೀಡಿರುವ ಮುಷ್ಕರಕ್ಕೆ, ‘ದಕ್ಷಿಣ ವಲಯ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ’ದ ಪ್ರಧಾನ ಕಾರ್ಯದರ್ಶಿ ಜಿ.ಆರ್‌. ಷಣ್ಮುಗಪ್ಪ ನೇತೃತ್ವದ ಬಣ ಬೆಂಬಲ ನೀಡಿಲ್ಲ.

‘ಲಾರಿಗಳು ಯಥಾಸ್ಥಿತಿಯಲ್ಲಿ ಸಂಚಾರ ನಡೆಸುತ್ತಿವೆ. ಚನ್ನಾರೆಡ್ಡಿ ಅವರು ತಮ್ಮಿಷ್ಟದಂತೆ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಅದಕ್ಕೆ ನಮ್ಮ ಬೆಂಬಲವಿಲ್ಲ. ಜುಲೈ 20ರಂದು ಪ್ರತ್ಯೇಕವಾಗಿ ಮುಷ್ಕರ ನಡೆಸಲಿದ್ದೇವೆ’ ಎಂದು ಷಣ್ಮುಗಪ್ಪ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry