ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹25 ಸಾವಿರ ಕೋಟಿ ಮೌಲ್ಯದ ಜಾಗ ಒತ್ತುವರಿ

ಬಿಡಿಎಗೆ ಸೇರಿದ 5 ಸಾವಿರ ಎಕರೆ: ಸಕ್ರಮವೋ, ತೆರವೋ ತೀರ್ಮಾನವಾಗಿಲ್ಲ–ಸಚಿವ ಜಿ. ಪರಮೇಶ್ವರ
Last Updated 19 ಜೂನ್ 2018, 10:27 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ₹25 ಸಾವಿರ ಕೋಟಿ ಮೌಲ್ಯದ 5 ಸಾವಿರ ಎಕರೆ ಜಾಗ ಒತ್ತುವರಿಯಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಡಾ. ಜಿ.ಪರಮೇಶ್ವರ ತಿಳಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ನಡೆದ ನಗರದ ಶಾಸಕರು, ಸಂಸದರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಒತ್ತುವರಿ ‍ಪ್ರಕರಣ ನ್ಯಾಯಾಲಯದಲ್ಲಿದೆ. ಅದನ್ನು ತೆರವು ಮಾಡುವ ಪ್ರಯತ್ನದಲ್ಲಿದ್ದೇವೆ. ಈ ಜಾಗವನ್ನು ಸಕ್ರಮ ಮಾಡಬೇಕೇ ಅಥವಾ ಒತ್ತುವರಿ ತೆರವು ಮಾಡಬೇಕೇ ಎಂಬ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ’ ಎಂದರು.

‘ಸ್ವಲ್ಪ ಮಳೆ ಬಂದರೂ ತಗ್ಗು ಪ್ರದೇಶಗಳು ಮುಳುಗುತ್ತವೆ. ಪ್ರವಾಹಪೀಡಿತ ಪ್ರದೇಶಗಳನ್ನು ಗುರುತಿಸಲಾಗಿದೆ. ರಾಜಕಾಲುವೆ ಒತ್ತುವರಿಯಿಂದ ಪ್ರವಾಹ ಉಂಟಾಗುತ್ತಿದೆ. ಮಳೆಗಾಲ ಮುಗಿದ ಬಳಿಕ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತೇವೆ’ ಎಂದು ಅವರು ಹೇಳಿದರು.

‘ಕಸದ ಸಮಸ್ಯೆಯಿಂದಾಗಿ ನಗರಕ್ಕೆ ಅಪಕೀರ್ತಿ ಬಂದಿದೆ. ನೀತಿಸಂಹಿತೆ ಕಾರಣದಿಂದ ಗುತ್ತಿಗೆದಾರರಿಗೆ 4–5 ತಿಂಗಳಿಂದ ಹಣ ಪಾವತಿ ಆಗಿರಲಿಲ್ಲ. ಹಣ ಪಾವತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಪಾವತಿ ಮಾಡಲು ಸೂಚನೆ ನೀಡಿದ್ದೇನೆ. ಈಗ ಅವರು ಕಸ ವಿಲೇವಾರಿ ಮಾಡುತ್ತಿದ್ದಾರೆ. 8–10 ದಿನಗಳಲ್ಲಿ, ಬಾಕಿ ಉಳಿದಿರುವ ಕಸ ವಿಲೇವಾರಿ ಮಾಡಲಿದ್ದಾರೆ’ ಎಂದರು.

‘ನಗರದಲ್ಲಿ ಆರು ಕಸ ಸಂಸ್ಕರಣಾ ಘಟಕಗಳು ಇವೆ. ಈ ಘಟಕಗಳಿಂದ ದುರ್ವಾಸನೆ ಬರುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಕಸದಿಂದ ವಿದ್ಯುತ್‌ ಉತ್ಪಾದನೆ ಮಾಡಿದರೆ ಈ ಸಮಸ್ಯೆ ಬಗೆಹರಿಯಲಿದೆ. ಸದ್ಯ 2 ಘಟಕಗಳಿಂದ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲ ಘಟಕಗಳಲ್ಲೂ ಈ ಯಂತ್ರಗಳನ್ನು ಅಳವಡಿಸುತ್ತೇವೆ’ ಎಂದು ಅವರು ತಿಳಿಸಿದರು.

‘ನಗರದ ಕೆರೆಗಳು ಮಲಿನಗೊಂಡಿವೆ. ಕೆಲವು ಕೆರೆಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಅವುಗಳ ಪುನರುಜ್ಜೀವನಕ್ಕೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯನ್ನು ಪಾಲಿಕೆ ನಿಧಾನಗತಿಯಲ್ಲಿ ಮಾಡುತ್ತಿದೆ ಎಂದು ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದರು. ಜತೆಗೆ, ಮೇಯರ್‌ ಆರ್‌.ಸಂಪತ್‌ರಾಜ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಎಲ್ಲ ಗುಂಡಿಗಳನ್ನು ಕಾಲಮಿತಿಯಲ್ಲಿ ಮುಚ್ಚುವಂತೆ ಸೂಚಿಸಿದ್ದೇನೆ. ಇಲ್ಲದಿದ್ದರೆ ವಲಯಗಳ ಮುಖ್ಯಸ್ಥರನ್ನು ಹೊಣೆ ಮಾಡುತ್ತೇನೆ’ ಎಂದು ಪರಮೇಶ್ವರ ಎಚ್ಚರಿಸಿದರು.

ಸಭೆಗೆ ಸಚಿವ ಕೆ.ಜೆ.ಜಾರ್ಜ್‌ ಹಾಗೂ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ಗೈರುಹಾಜರಾಗಿದ್ದರು.

ಲಿಂಗನಮಕ್ಕಿಯಿಂದ ನೀರು: ಡಿಪಿಆರ್‌ಗೆ ಸೂಚನೆ
ನಗರಕ್ಕೆ ಲಿಂಗನಮಕ್ಕಿ ಜಲಾಶಯದಿಂದ ನೀರು ಪೂರೈಸುವ ಬಗ್ಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಸೂಚಿಸಿದ್ದೇನೆ ಎಂದು ಜಿ.ಪರಮೇಶ್ವರ ತಿಳಿಸಿದರು.

‘ಲಿಂಗನಮಕ್ಕಿ ಜಲಾಶಯದಲ್ಲಿ ಸರಾಸರಿ 151 ಟಿಎಂಸಿ ಅಡಿ ನೀರಿನ ಸಂಗ್ರಹವಿರುತ್ತದೆ. ನಗರದ ನೀರಿನ ಬೇಡಿಕೆ ಪೂರೈಸಲು ಈ ಜಲಾಶಯದ ನೀರು ಬಳಸಬಹುದು ಎಂದು ಜಲಮಂಡಳಿ ರಚಿಸಿದ್ದ ಬಿ.ಎನ್‌.ತ್ಯಾಗರಾಜ ಸಮಿತಿ 2015ರಲ್ಲಿ ಶಿಫಾರಸು ಮಾಡಿತ್ತು.

‘ಕಾವೇರಿ ಐದನೇ ಹಂತದ ಯೋಜನೆ ಅನುಷ್ಠಾನ ಮಾಡುತ್ತಿದ್ದೇವೆ. ಅಲ್ಲಿಗೆ ನಗರಕ್ಕೆ ಕಾವೇರಿ ನೀರಿನ ಪಾಲು ಮುಗಿದು ಹೋಗುತ್ತಿದೆ. ಬಳಿಕ ಪರ್ಯಾಯ ಮೂಲಗಳತ್ತ ಗಮನ ಹರಿಸಬೇಕಿದೆ. ಲಿಂಗನಮಕ್ಕಿ, ಎತ್ತಿನ ಹೊಳೆಯಿಂದ ನೀರು ತರಲು ಯೋಜಿಸಲಾಗಿದೆ. ಎತ್ತಿನಹೊಳೆಯ 2 ಟಿಎಂಸಿ ಅಡಿ ನೀರನ್ನು ಎತ್ತಿನಹೊಳೆಗೆ ಹರಿಸಲಾಗುತ್ತದೆ. ಬಳಿಕ ನಗರಕ್ಕೆ ಪೂರೈಕೆ ಮಾಡಲಾಗುತ್ತದೆ’ ಎಂದೂ ಅವರು ಹೇಳಿದರು.

‘ಕೇಕ್‌ ರೀತಿ ಕಟ್‌ ಮಾಡಲು ಆಗದು’
‘ಕೇಕ್‌ ರೀತಿಯಲ್ಲಿ ನಗರವನ್ನು ಕಟ್‌ ಮಾಡಲು ಸಾಧ್ಯವಿಲ್ಲ’ ಎಂದು ಜಿ.ಪರಮೇಶ್ವರ ಮಾರ್ಮಿಕವಾಗಿ ಹೇಳಿದರು.

ಬಿಬಿಎಂಪಿ ವಿಭಜನೆ ಸಂಬಂಧ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಬಿ.ಎಸ್‌.ಪಾಟೀಲ ನೇತೃತ್ವದ ತಜ್ಞರ ಸಮಿತಿ ರಚಿಸಿತ್ತು. ಸುಗಮ ಆಡಳಿತದ ದೃಷ್ಟಿಯಿಂದ ವಿಭಜನೆ ಅನಿವಾರ್ಯ ಎಂದು ಪಾಟೀಲ ಸಮಿತಿ ವರದಿ ಸಲ್ಲಿಸಿತ್ತು.

‘ಪಾಟೀಲರ ವರದಿಯನ್ನು ಓದಿದ್ದೇನೆ. ಆದರೆ, ಆಡಳಿತಾತ್ಮಕವಾಗಿ ವಿಭಜನೆ ಮಾಡಬೇಕು ಎಂದು ಅವರು ಹೇಳಿದ್ದಾರೆ. ಬೆಂಗಳೂರು ವಿಭಜನೆ ಬಗ್ಗೆ ವಿಸ್ತೃತ ಚರ್ಚೆ ನಡೆಸಬೇಕಿದೆ’ ಎಂದು ಅವರು ಹೇಳಿದರು.

‘ಗೊರಗುಂಟೆ ಪಾಳ್ಯದಲ್ಲಿ ಮೇಲ್ಸೇತುವೆ’
ಸಂಚಾರ ದಟ್ಟಣೆ ತಡೆಯಲು ಗೊರಗುಂಟೆ ಪಾಳ್ಯದಲ್ಲಿ ಆರು ಪಥದ ಫ್ಲೈ ಓವರ್‌ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಪರಮೇಶ್ವರ ತಿಳಿಸಿದರು.

ಇದಕ್ಕಾಗಿ ರಕ್ಷಣಾ ಇಲಾಖೆಯ 16 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ಈ ಸಂಬಂಧ ರಕ್ಷಣಾ ಇಲಾಖೆ ಅಧಿಕಾರಿಗಳ ಜತೆಗೆ ಸಮಾಲೋಚನೆ ನಡೆಸುತ್ತೇನೆ ಎಂದು ಅವರು ಹೇಳಿದರು.

ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕೆ.ಆರ್‌.ಪುರದಲ್ಲಿ ಸಂಚಾರ ದಟ್ಟಣೆ ತಡೆಯಲು ಪರ್ಯಾಯ ಮಾರ್ಗ ನಿರ್ಮಾಣಕ್ಕೆ ಯೋಜಿಸಲಾಗಿದೆ ಎಂದರು.

ಬಿಬಿಎಂಪಿ ಬಜೆಟ್‌ಗೆ ಅನುಮೋದನೆ
ಬಿಬಿಎಂಪಿಯ 2018–19ನೇ ಸಾಲಿನ ಬಜೆಟ್‌ಗೆ ನಗರಾಭಿವೃದ್ಧಿ ಇಲಾಖೆ ಕೊನೆಗೂ ಅನುಮೋದನೆ ನೀಡಿದೆ.

₹9,325 ಕೋಟಿ ಮೊತ್ತದ ಬಜೆಟ್‌ ಅನ್ನು ಫೆಬ್ರುವರಿ 28ರಂದು ಮಂಡಿಸಲಾಗಿತ್ತು. ಕಲ್ಯಾಣ ಕಾರ್ಯಕ್ರಮಗಳಿಗೆ ಇನ್ನಷ್ಟು ಅನುದಾನ ನೀಡುವಂತೆ ಪಾಲಿಕೆ ಸದಸ್ಯರು ಪಟ್ಟು ಹಿಡಿದಿದ್ದರು. ಮಾರ್ಚ್‌ 12ರ ವೇಳೆಗೆ ಅದರ ಗಾತ್ರ ₹10,208 ಕೋಟಿಗೆ ಹಿಗ್ಗಿತ್ತು. ‘ಬಜೆಟ್‌ ಮೊತ್ತ ಕಡಿತ ಮಾಡಿಲ್ಲ. ಪಾಲಿಕೆಗೆ ಎಲ್ಲ ಅಗತ್ಯ ನೆರವು ನೀಡುತ್ತೇವೆ’ ಎಂದು ಪರಮೇಶ್ವರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT