ವರದಿ ಸಲ್ಲಿಕೆ: ವಿಚಾರಣಾ ಕೋರ್ಟ್‌ಗೆ ನಿರ್ದೇಶನ

7
ಗೌರಿ ಲಂಕೇಶ್ ಹತ್ಯೆ ಆರೋಪಿಗಳಿಗೆ ಪೊಲೀಸರ ಕಿರುಕುಳ ಆರೋಪ

ವರದಿ ಸಲ್ಲಿಕೆ: ವಿಚಾರಣಾ ಕೋರ್ಟ್‌ಗೆ ನಿರ್ದೇಶನ

Published:
Updated:
ವರದಿ ಸಲ್ಲಿಕೆ: ವಿಚಾರಣಾ ಕೋರ್ಟ್‌ಗೆ ನಿರ್ದೇಶನ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಾಲ್ವರು ಆರೋಪಿಗಳಿಗೆ ಪೊಲೀಸರು ‘ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್’ ನೀಡಿದ್ದಾರೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆಗೆ ಒಪ್ಪಿಸುವಂತೆ ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

‘ತನಿಖೆ ವೇಳೆ ಪೊಲೀಸರು ನಮಗೆ ಚಿತ್ರಹಿಂಸೆ ನೀಡಿದ್ದು, ಈ ಕುರಿತು ವಿಶೇಷ ವಿಚಾರಣೆ ನಡೆಸಲು ಗೃಹ ಇಲಾಖೆಗೆ ನಿರ್ದೇಶಿಸಬೇಕು’ ಎಂದು ಕೋರಿ ಬಂಧಿತ ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್, ಮನೋಹರ್ ಯಡವೆ, ಅಮೋಲ್ ಕಾಳೆ ಮತ್ತು ಅಮಿತ್ ರಾಮಚಂದ್ರ ದೇಗ್ವೆಕರ್ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಕೀಲ ಎನ್.ಪಿ. ಅಮೃತೇಶ್ ನ್ಯಾಯಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿ, ‘ಅರ್ಜಿದಾರರಿಗೆ ಪೊಲೀಸರು ನೀಡಿರುವ ಚಿತ್ರಹಿಂಸೆಯ ಬಗ್ಗೆ 1 ಹಾಗೂ 3ನೇ ಎಸಿಎಂಎಂ ಕೋರ್ಟ್‌ ಗಮನಕ್ಕೆ ತರಲಾಗಿದೆ. ಆದರೂ, ಕೋರ್ಟ್‌ ಅರ್ಜಿದಾರರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಆದೇಶಿಸಿಲ್ಲ’ ಎಂದು ಆಕ್ಷೇಪಿಸಿದರು.

ಇದನ್ನು ಅಲ್ಲಗಳೆದ ರಾಜ್ಯ ಪ್ರಾಸಿಕ್ಯೂಷನ್‌ ಪರ ವಕೀಲ ಎಸ್‌.ರಾಚಯ್ಯ, ‘ಅರ್ಜಿದಾರರಿಗೆ ಪೊಲೀಸರು ಯಾವುದೇ ರೀತಿ ಚಿತ್ರಹಿಂಸೆ ಅಥವಾ ಕಿರುಕುಳ ನೀಡಿಲ್ಲ. ಈ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ’ ಎಂದರು.

‘ಆರೋಪಿಗಳನ್ನು ಈಗಾಗಲೇ ಹಲವು ಬಾರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆದರೆ, ಒಂದು ಬಾರಿಯೂ ಇವರು ತಮಗಾಗಿರುವ ಚಿತ್ರಹಿಂಸೆಯನ್ನು ನ್ಯಾಯಾಧೀಶರ ಗಮನಕ್ಕೆ ತಂದಿಲ್ಲ’ ಎಂದು ಹೇಳಿದರು.

ನಿರ್ದೇಶನ: ‘ಅರ್ಜಿದಾರರ ಪರ ವಕೀಲರು ಸಲ್ಲಿಸಿರುವ ಪ್ರಮಾಣಪತ್ರದ ಪ್ರತಿಯನ್ನು 1 ಹಾಗೂ 3ನೇ ಎಸಿಎಂಎಂ ಕೋರ್ಟ್‌ಗೆ ಕಳುಹಿಸಬೇಕು. ಅದಕ್ಕೆ ಪ್ರತಿಯಾಗಿ 1 ಮತ್ತು 3ನೇ ಎಸಿಎಂಎಂ ಕೋರ್ಟ್‌ಗಳು 10 ದಿನದೊಳಗೆ ಹೈಕೋರ್ಟ್‌ಗೆ ವರದಿ ಸಲ್ಲಿಸಬೇಕು’ ಎಂದು ನ್ಯಾಯಮೂರ್ತಿಗಳು ನಿರ್ದೇಶಿಸಿದರು.

ಪ್ರಮಾಣ ಪತ್ರದಲ್ಲಿ ಏನಿದೆ?

‘ಪೊಲೀಸರು ಅಮೋಲ್ ಕಾಳೆ ಕೆನ್ನೆಗೆ ಹೊಡೆದಿದ್ದಾರೆ. ಇದರಿಂದ ಗಾಯ ಆಗಿದೆ’ ಎಂಬ ಅಂಶವನ್ನು ಅರ್ಜಿದಾರರ ಪರ ವಕೀಲರು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಕಾಳೆಗೆ ಆಗಿರುವ ಗಾಯವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಗಮನಿಸಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಪೊಲೀಸರು ಹೊಡೆದಿದ್ದಾರೆ ಎಂದೂ ಆತ ಮಾಹಿತಿ ನೀಡಿದ್ದಾನೆ. ಆದರೂ, ನ್ಯಾಯಾಧೀಶರು ಅರ್ಜಿದಾರರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಆದೇಶಿಸಲಿಲ್ಲ’ ಎಂದು ಆಕ್ಷೇಪಿಸಲಾಗಿದೆ.

‘ತನಿಖೆಯ ಹೆಸರಿನಲ್ಲಿ ಆರೋಪಿಗಳಿಗೆ ಚಿತ್ರಹಿಂಸೆ ನೀಡುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಸ್ಪಷ್ಟಪಡಿಸಿದೆ’ಎಂದೂ ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ.

ಬಿಜೆಪಿ ಯುವ ಮೋರ್ಚಾ ಸದಸ್ಯೆ ವಿರುದ್ಧ ದೂರು

ಬೆಂಗಳೂರು
: ‘ಬಿಜೆಪಿ ಯುವ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮಂಚಾಲೇಶ್ವರಿ ತೊಣಶ್ಯಾಳ, ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ’ ಎಂದು ಗದಗದ ಮಂಜುನಾಥ್‌ ಅಣ್ಣಿಗೇರಿ ಎಂಬುವರು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ ಕುಮಾರ್‌ ಅವರಿಗೆ ದೂರು ನೀಡಿದ್ದಾರೆ.

ಕಮಿಷನರ್‌ ಕಚೇರಿಗೆ ಸೋಮವಾರ ಬೆಂಬಲಿಗರ ಸಮೇತ ಹೋಗಿದ್ದ ಮಂಜುನಾಥ್‌, ‘ಮಂಚಾಲೇಶ್ವರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು’ ಎಂದು ಒತ್ತಾಯಿಸಿದರು.

‘ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಉದ್ದೇಶದಿಂದ ಮಂಚಾಲೇಶ್ವರಿ, ’ಈ ದೇಶದ ತಳಹದಿ ಹಿಂದುತ್ವ. ಲದ್ದಿಜೀವಿಗಳು ಹಿಂದೂ ವಿರೋಧಿ ಚಟುವಟಿಕೆ ಮಾಡಿದ್ರೆ ಮನೆ ಮನೆಯಲ್ಲೂ ಪರಶುರಾಮ ವಾಘ್ಮೋರೆ ಹುಟ್ಟುತ್ತಾರೆ’ ಎಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ’ ಎಂದು ದೂರಿನಲ್ಲಿ ಮಂಜುನಾಥ್ ತಿಳಿಸಿದ್ದಾರೆ.

ಜಾಮೀನಿಗೆ ಆಕ್ಷೇಪ ಸಲ್ಲಿಸಲು ಕಾಲಾವಕಾಶ

ಬೆಂಗಳೂರು:
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಮದ್ದೂರಿನ ಕೆ.ಟಿ.ನವೀನ್‌ ಕುಮಾರ್‌ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು 70ನೇ ಸಿಸಿಎಚ್‌ ನ್ಯಾಯಾಲಯವು ಜೂನ್ 21ಕ್ಕೆ ಮುಂದೂಡಿದೆ.

ಆರೋಪಿ ಪರ ವಕೀಲ ವೇದಮೂರ್ತಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಾಲಯವು ಸೋಮವಾರ ಕೈಗೆತ್ತಿಕೊಂಡಿತ್ತು. ‘ಇದು ಗಂಭೀರ ಪ್ರಕರಣ. ಆರೋಪಿಯ ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸಲು ಕಾಲಾವಕಾಶ ನೀಡಬೇಕು’ ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೋರಿದರು. ಅದನ್ನು ನ್ಯಾಯಾಲಯ ಪುರಸ್ಕರಿಸಿತು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 1

  Frustrated
 • 0

  Angry