ಕೌಶಿಕ್ ಮುಖರ್ಜಿ ಮನೆಯಲ್ಲಿ ₹ 25 ಲಕ್ಷ ಕಳವು

7
ಐದು ದಿನಗಳಲ್ಲಿ ಇಬ್ಬರು ನಿವೃತ್ತ ಅಧಿಕಾರಿಗಳ ಮನೆಗಳಲ್ಲಿ ಕಳ್ಳತನ

ಕೌಶಿಕ್ ಮುಖರ್ಜಿ ಮನೆಯಲ್ಲಿ ₹ 25 ಲಕ್ಷ ಕಳವು

Published:
Updated:

ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಎಂ.ವಿ.ಮೂರ್ತಿ ಅವರ ಮನೆಯಲ್ಲಿ ಕಳ್ಳತನ ನಡೆದ ಬೆನ್ನಲ್ಲೇ, ನಿವೃತ್ತ ಐಎಎಸ್ ಅಧಿಕಾರಿ ಕೌಶಿಕ್ ಮುಖರ್ಜಿ (ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದರು) ಅವರ ಮನೆಯಲ್ಲೂ ಕಳ್ಳರು ₹ 25 ಲಕ್ಷ ಮೌಲ್ಯದ ಆಭರಣ ದೋಚಿ ಪರಾರಿಯಾಗಿದ್ದಾರೆ.

ಮುಖರ್ಜಿ ಅವರು ಪತ್ನಿ ಜತೆ ಎಚ್‌ಎಸ್‌ಆರ್ ಲೇಔಟ್ 6ನೇ ಹಂತದ ಎಂಸಿಎಚ್‌ಎಸ್‌ ಲೇಔಟ್‌ನಲ್ಲಿ ನೆಲೆಸಿದ್ದಾರೆ. ಶನಿವಾರ ಬೆಳಿಗ್ಗೆ 11 ಗಂಟೆಗೆ ದಂಪತಿ ಮನೆಗೆ ಬೀಗ ಹಾಕಿಕೊಂಡು ಸ್ನೇಹಿತರ ಮನೆಗೆ ತೆರಳಿದ್ದರು. ನಂತರ ಸಿನಿಮಾ ಹಾಗೂ ಶಾಪಿಂಗ್ ಮುಗಿಸಿ ರಾತ್ರಿ 11 ಗಂಟೆಗೆ ಮನೆಗೆ ಮರಳಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಆ ಕೂಡಲೇ ಅವರು ಎಚ್‌ಎಸ್‌ಆರ್ ಲೇಔಟ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಮನೆಯ ಹಿಂಭಾಗದಲ್ಲಿ ಸಣ್ಣದೊಂದು ಕೈತೋಟವಿದೆ. ಕಾಂಪೌಂಡ್ ಜಿಗಿದು ಅಲ್ಲಿಂದ ಬಂದಿರುವ ಕಳ್ಳರು, ಮೊದಲು ಕಿಟಕಿ ಗಾಜನ್ನು ಒಡೆದಿದ್ದಾರೆ. ನಂತರ ಕಿಟಕಿಯಿಂದ ಒಳಗೆ ಕೈ ಹಾಕಿ, ಹಿಂಬಾಗಿಲ ಚಿಲಕ ತೆಗೆದು ಒಳನುಗ್ಗಿದ್ದಾರೆ. ಹಾರೆಯಿಂದ ಅಲ್ಮೆರಾದ ಬಾಗಿಲನ್ನು ಮೀಟಿ, ಒಡವೆಗಳನ್ನು ದೋಚಿದ್ದಾರೆ ಎಂದು ಪೊಲೀಸರು ಹೇಳಿದರು.

‘ದುಬಾರಿ ಮೌಲ್ಯದ ಆರು ವಾಚ್‌ಗಳು, 20 ಚಿನ್ನದ ಓಲೆಗಳು, ಆರು ಚಿನ್ನದ ಬಳೆಗಳು, ಮೂರು ವಜ್ರದ ಓಲೆಗಳು, ವಜ್ರದ ಉಂಗುರ ಹಾಗೂ ಬೆಲೆಬಾಳುವ 10 ಪೆನ್ನುಗಳು ಕಳವಾಗಿವೆ. ಇನ್ನೊಮ್ಮೆ ಇಡೀ ಮನೆಯನ್ನು ಪರಿಶೀಲಿಸಿ ಕಳವಾಗಿರುವ ವಸ್ತುಗಳ ವಿವರವನ್ನು ಖಚಿತಪಡಿಸುತ್ತೇನೆ’ ಎಂದು ಮುಖರ್ಜಿ ದೂರಿನಲ್ಲಿ ತಿಳಿಸಿದ್ದಾರೆ.

ಮುಖರ್ಜಿ ಅವರ ಮನೆ ಹಾಗೂ ಆ ರಸ್ತೆಯಲ್ಲಿರುವ ಎಲ್ಲ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನೂ ಪರಿಶೀಲಿಸುತ್ತಿದ್ದೇವೆ. ಜೂನ್ 15 ಹಾಗೂ 16ರಂದು ಮನೆ ಸಮೀಪ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಎಚ್‌ಎಸ್‌ಆರ್ ಲೇಔಟ್ 4ನೇ ಹಂತದಲ್ಲಿರುವ ನಿವೃತ್ತ ಐಜಿಪಿ ಎಂ.ವಿ.ಮೂರ್ತಿ ಅವರ ಮನೆಯಲ್ಲಿ ಜೂನ್ 11ರಂದು ಕಳ್ಳತನ ನಡೆದಿತ್ತು. ಒಂದೇ ತಂಡದ ಸದಸ್ಯರು ಎರಡೂ ಕಡೆ ಕೃತ್ಯ ಎಸಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಮಡಿವಾಳ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry