ಡ್ರಾಪಿನ್‌ ವಾರಿಯರ್ಸ್‌ ಚಾಂಪಿಯನ್‌

7
ಜೂನಿಯರ್‌ ಎಚ್‌ಪಿಎಲ್‌: ಪ್ರಶಸ್ತಿ ಹೊಸ್ತಿಲಲ್ಲಿ ಮುಗ್ಗರಿಸಿದ ಸ್ಮಾರ್ಟ್‌ ವಿಷನ್ ತಂಡ

ಡ್ರಾಪಿನ್‌ ವಾರಿಯರ್ಸ್‌ ಚಾಂಪಿಯನ್‌

Published:
Updated:
ಡ್ರಾಪಿನ್‌ ವಾರಿಯರ್ಸ್‌ ಚಾಂಪಿಯನ್‌

ಹುಬ್ಬಳ್ಳಿ: ಮಹತ್ವದ ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ಧಾರವಾಡದ ಡ್ರಾಪಿನ್‌ ವಾರಿಯರ್ಸ್ ತಂಡ ಜೂನಿಯರ್‌ ಎಚ್‌ಪಿಎಲ್‌ ಕ್ರಿಕೆಟ್‌ ಟೂರ್ನಿಯ ಎರಡನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

ರಾಜನಗರದಲ್ಲಿರುವ ಕೆ.ಎಸ್‌.ಸಿ.ಎ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಫೈನಲ್‌ನಲ್ಲಿ ಡ್ರಾಪಿನ್‌ ತಂಡ 31 ರನ್‌ಗಳಿಂದ ಬೆಳಗಾವಿಯ ಬಿಎಸ್‌ಸಿ ಸ್ಮಾರ್ಟ್‌ ವಿಷನ್‌ ಎದುರು ಜಯ ಸಾಧಿಸಿತು.

ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಡ್ರಾಪಿನ್‌ ತಂಡ ನಿಗದಿತ 30 ಓವರ್‌ಗಳಲ್ಲಿ 8 ವಿಕೆಟ್‌ಗೆ 174 ರನ್‌ ಕಲೆ ಹಾಕಿತು. ಚಿರಾಗ ನಾಯಕ (76, 80ಎಸೆತ, 9ಬೌಂಡರಿ) ಮತ್ತು ಆದಿತ್ಯ ಹಿರೇಮಠ (31, 28ಎ., 2 ಬೌಂ., 1ಸಿ.,) ಸೊಗಸಾದ ಇನಿಂಗ್ಸ್‌ ಕಟ್ಟಿದರು.

ಸವಾಲಿನ ಗುರಿ ಬೆನ್ನು ಹತ್ತಿದ ಬೆಳಗಾವಿ ತಂಡ ಆರಂಭದಲ್ಲಿ ಉತ್ತಮ ಹೋರಾಟ ತೋರಿತು. ಮೊದಲ 22 ಓವರ್‌ಗಳು ಮುಕ್ತಾಯವಾದಾಗ ತಂಡ ನಾಲ್ಕು ವಿಕೆಟ್‌ ಕಳೆದುಕೊಂಡು 114 ರನ್‌ ಗಳಿಸಿತ್ತು. ಆದರೆ, ಕೊನೆಯಲ್ಲಿ ಮೇಲಿಂದ ಮೇಲೆ ವಿಕೆಟ್‌ಗಳನ್ನು ಕಳೆದುಕೊಂಡು ಕಾರಣ ಗೆಲುವಿನ ಹಾದಿ ದುರ್ಗಮವಾಯಿತು. ಕೊನೆಯ ಐದು ಓವರ್‌ಗಳಲ್ಲಿ 52 ರನ್‌ ಗಳಿಸಬೇಕಾದ ಸವಾಲು ತಂಡದ ಮುಂದಿತ್ತು. ಆದರೆ, ತಂಡ 143 ರನ್‌ ಗಳಿಸಿ ತನ್ನ ಹೋರಾಟ ಮುಗಿಸಿತು.

ಬೆಳಗಾವಿ ತಂಡದ ಕೊನೆಯ ವಿಕೆಟ್‌ ಪತನವಾಗುತ್ತಿದ್ದಂತೆ ಡ್ರಾಪಿನ್‌ ತಂಡದ ಆಟಗಾರರು ಕ್ರೀಡಾಂಗಣದಲ್ಲಿಯೇ ಕುಣಿದು ಸಂಭ್ರಮಿಸಿದರು. ಧಾರವಾಡ ವಲಯದ ವ್ಯಾಪ್ತಿಯಲ್ಲಿ ಬರುವ ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ ಮತ್ತು ಹಾವೇರಿ ಜಿಲ್ಲೆಗಳ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆಎಸ್‌ಸಿಎ ಧಾರವಾಡ ವಲಯದ ನಿಮಂತ್ರಕ ಬಾಬಾ ಭೂಸದ, ಧಾರವಾಡ ಜಿಲ್ಲೆಯ ಅಧ್ಯಕ್ಷ ವೀರಣ್ಣ ಸವಡಿ, ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ಕಾರ್ಯದರ್ಶಿ ಪಂಕಜ್ ಮುನಾವರ, ಪ್ರಾಯೋಜಕರಾದ ರಾಜೇಶ ಜೈನ್‌, ವಿ.ಟಿ. ಕರಿಸಕ್ರಣ್ಣವರ, ಮಧೂರಕರ, ಶೇಖ್‌,ಟೂರ್ನಿ ಸಂಘಟನಾ ಸಮಿತಿ ಮುಖ್ಯಸ್ಥ ಶಿವಾನಂದ ಗುಂಜಾಳ, ಸದಸ್ಯ ಅಮಿತ್‌ ಭೂಸದ ಇದ್ದರು.

ಸಂಕ್ಷಿಪ್ತ ಸ್ಕೋರ್: ಡ್ರಾಪಿನ್‌ ವಾರಿಯರ್ಸ್‌ 30 ಓವರ್‌ಗಳಲ್ಲಿ 8ಕ್ಕೆ174 (ಚಿರಾಗ ನಾಯಕ 76, ಅಮೇಯ ಡಿ. ಅದ್ಕೂರಕರ 27, ಆದಿತ್ಯ ಹಿರೇಮಠ 31; ಯಶ್ ಎಸ್‌.ಎಚ್‌. 30ಕ್ಕೆ2, ಅನೀಶ ಆರ್‌. ಕಬಾಡಿ 25ಕ್ಕೆ1, ವೆಂಕಟೇಶ ಶಿರಾಳಕರ 39ಕ್ಕೆ1, ಸಾಯಿ ಕರೇಕರ 26ಕ್ಕೆ2). ಬಿಎಸ್‌ಸಿ ಸ್ಮಾರ್ಟ್ ವಿಷನ್‌, ಬೆಳಗಾವಿ 28.3 ಓವರ್‌ಗಳಲ್ಲಿ 143 (ಕೇದಾರನಾಥ ಉಸುಲಕರ 22, ಕಮೀಲ್ ಎಂ. ಬೊಂಬಾಯಿವಾಲ 26, ಸೌರವ್‌ ಪಿ. ಸಮಂತ 38; ಮೊಹಮ್ಮದ್‌ ಕೈಫ್‌ ಮುಲ್ಲಾ 32ಕ್ಕೆ1, ಆದಿತ್ಯ ಹಿರೇಮಠ 24ಕ್ಕೆ2, ಚಿರಾಗ ನಾಯಕ 22ಕ್ಕೆ1, ಅಮೇಯ ಡಿ. ಅದ್ಕೂರಕರ 29ಕ್ಕೆ4). ಫಲಿತಾಂಶ: ಡ್ರಾಪಿನ್‌ ವಾರಿಯರ್ಸ್‌ ತಂಡಕ್ಕೆ 31 ರನ್ ಗೆಲುವು. ಪಂದ್ಯ ಶ್ರೇಷ್ಠ: ಚಿರಾಗ್‌ ನಾಯಕ.

ಟೂರ್ನಿಯಲ್ಲಿ ಒಟ್ಟು ಹೆಚ್ಚು ರನ್‌ ಗಳಿಸಿದ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಎನ್‌.ಕೆ. ವಾರಿಯರ್ಸ್ ತಂಡದ ರೋಹನ ಯರೇಸೀಮಿ (ಒಟ್ಟು 251 ರನ್) ಉತ್ತಮ ಬ್ಯಾಟ್ಸ್‌ಮನ್ ಗೌರವ ಪಡೆದರು. ಡ್ರಾಪಿನ್‌ ತಂಡದ ಅಮೇಯಿ ಅದ್ಕೂರಕರ ಉತ್ತಮ ಬೌಲರ್‌ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಒಟ್ಟು 191 ರನ್‌ ಕಲೆ ಹಾಕಿ, 10 ವಿಕೆಟ್‌ ಪಡೆದ ಚಿರಾಗ್‌ ನಾಯಕ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು. 14 ವರ್ಷದ ಒಳಗಿನವರ ವಿಭಾಗದಲ್ಲಿ ಎನ್‌.ಕೆ. ವಾರಿಯರ್ಸ್‌ ತಂಡದ ಮಾಧವ ಧಾರವಾಡಕರ ಉತ್ತಮ ಬ್ಯಾಟ್ಸ್‌ಮನ್‌, ಬಿಜಾಪುರ ಬುಲ್ಸ್‌ ತಂಡದ ಬಾಬು ಗದ್ದಮ್‌ ಉತ್ತಮ ಬೌಲರ್‌ ಪ್ರಶಸ್ತಿ ಪಡೆದರು. ಇದೇ ವಯೋಮಾನದ ಫೈನಲ್‌ ಪಂದ್ಯದ ಉತ್ತಮ ಬ್ಯಾಟ್ಸ್‌ಮನ್‌ ಗೌರವ ಸ್ಮಾರ್ಟ್‌ ವಿಷನ್‌ ತಂಡದ ಸಾಯಿ ಕರ್ಕೇರಾ ಪಡೆದರು.

ತಂಡದ ಎಲ್ಲ ಆಟಗಾರರ ಸಂಘಟಿತ ಹೋರಾಟದಿಂದ ಪ್ರಶಸ್ತಿ ಗೆಲ್ಲಲು ಸಾಧ್ಯವಾಯಿತು. ಇದರಲ್ಲಿ ಕೋಚ್‌ಗಳು, ತಂಡದ ಸಿಬ್ಬಂದಿಯ ಕೊಡುಗೆಯೂ ಇದೆ

- ಚಿರಾಗ ನಾಯಕ, ನಾಯಕ, ಡ್ರಾಪಿನ್‌ ವಾರಿಯರ್ಸ್‌ ತಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry