ಚನ್ನಮ್ಮ ಪೂಜಿಸಿದ ಬಾವಿಯಿಂದ ದುರ್ನಾತ

7
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಗ್ರಹಣ

ಚನ್ನಮ್ಮ ಪೂಜಿಸಿದ ಬಾವಿಯಿಂದ ದುರ್ನಾತ

Published:
Updated:
ಚನ್ನಮ್ಮ ಪೂಜಿಸಿದ ಬಾವಿಯಿಂದ ದುರ್ನಾತ

ಬೈಲಹೊಂಗಲ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ವೀರಮರಣ ಹೊಂದಿದ ರಾಣಿ ಕಿತ್ತೂರು ಚನ್ನಮ್ಮ ಅವರನ್ನು 1824ರಲ್ಲಿ ಅಂದಿನ ಬ್ರಿಟಿಷ್ ಕಂಪನಿ ಸರ್ಕಾರ ಗೃಹ ಬಂಧನದಲ್ಲಿ ಇರಿಸಿತ್ತು. ಆಗ ಚನ್ನಮ್ಮ ಶ್ರದ್ಧೆ, ಭಕ್ತಿಯಿಂದ ನಿತ್ಯ ಪೂಜೆಗೆ ಬಳಸುತ್ತಿದ್ದ ಬಾವಿ ಈಗ ದುನಾರ್ತ ಬಿರುತ್ತಿದೆ. ಅಶುದ್ಧತೆಯಿಂದ ಕೂಡಿರುವ ಬಾವಿ ಶುಚಿ ಮಾಡಲು ಕಿತ್ತೂರು ಚನ್ನಮ್ಮ ಪ್ರಾಧಿಕಾರದ ಆಡಳಿತಾಧಿಕಾರಿಗಳು, ಪುರಸಭೆಯವರು, ಜನಪ್ರತಿನಿಧಿಗಳು ಮುಂದಾಗದಿರುವುದು ನೋವಿನ ಸಂಗತಿಯಾಗಿದೆ.

ಪಟ್ಟಣದ ಕೇಂದ್ರ ಬಸ್ ನಿಲ್ದಾಣ ಹಿಂದೆ ಇರುವ ಪಾಟೀಲ ಗಲ್ಲಿ ಹುಡೇದ ಬಾವಿ ಹತ್ತಿರದ ಓಣಿಯಲ್ಲಿ ಬಾವಿ ಇದೆ. ಈ ಬಾವಿ ನೀರನ್ನು ಹಿಂದೆ ರಾಜ ಮನೆತನದವರು ಕುಡಿಯಲು ಉಪಯೋಗಿಸುತ್ತಿದ್ದರು. ಅಧಿಕಾರಿಗಳ, ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ಬಾವಿ ಈಗ ಅನಾಥವಾಗಿ ಕಸದ ತೊಟ್ಟಿಯಂತಾಗಿದೆ. ಅಂತಹ ಪವಿತ್ರ ಬಾವಿ ಪಾಳು ಬಿದ್ದು ಪುರಾತನ ಇತಿಹಾಸ ಕಣ್ಮರೆಯಾಗುವಂತೆ ಆಗಿದೆ.

ಕಿತ್ತೂರು ಪ್ರಾಧಿಕಾರ ಮೌನ: ಕಿತ್ತೂರು ಸಂಸ್ಥಾನದ ಕುರುಹುಗಳನ್ನು ಪತ್ತೆ ಮಾಡಿ ಅವುಗಳನ್ನು ಜೀರ್ಣೋದ್ಧಾರಗೊಳಿಸಿ ಸಮಗ್ರ ಅಭಿವೃದ್ಧಿಗೊಳಿಸಬೇಕೆಂಬ ಮಹದಾಸೆಯಿಂದ ಹುಟ್ಟುಕೊಂಡಿರುವ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಗ್ರಹಣ ಹಿಡಿದಿದೆ. ಕಾಗದದಲ್ಲಿ ಮಾತ್ರ ಅಭಿವೃದ್ಧಿ ಎನ್ನುವಂತಾಗಿದೆ. ಪ್ರತಿವರ್ಷ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಉದ್ದೇಶ ಮಾತ್ರ ಈಡೇರಿಲ್ಲ.

ಚನ್ನಮ್ಮನಿಗೆ ಸಂಬಂಧಪಟ್ಟ ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಚೆನ್ನಾಗಿ ಇಟ್ಟುಕೊಳ್ಳುವ ಜವಾಬ್ದಾರಿ ಪ್ರಾಧಿಕಾರದ್ದಾಗಿದೆ. ಆ ಪ್ರಾಧಿಕಾರದ ಆಡಳಿತಾಧಿಕಾರಿ ಆಗಿರುವ ಬೈಲಹೊಂಗಲ ಉಪವಿಭಾಗಾಧಿಕಾರಿಗಳು ಬೈಲಹೊಂಗಲ, ಕಿತ್ತೂರು ನಾಡಿನ ಜನರ ಮನಸ್ಥಿತಿ ಅರಿತು ಕೆಲಸ ಮಾಡಬೇಕಿದೆ. ಆಡಳಿತಾಧಿಕಾರಿಗಳ ಜಾಣ ಕುರುಡು ಜನರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.

ಪುರಸಭೆ ಅಧಿಕಾರಿಗಳು ಚನ್ನಮ್ಮನ ಪೂಜಾ ಸ್ಥಳದ ಬಾವಿ ತಮಗೇನೂ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಚನ್ನಮ್ಮನ ಬಾವಿ ನೋಡಲು ಬಂದವರಿಗೆ ಮಾತ್ರ ದುರ್ನಾತದಿಂದಾಗಿ ಅಸಹ್ಯ ಎನ್ನಿಸುತ್ತಿದೆ. ಇದನ್ನು ಈ ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಚನ್ನಮ್ಮ ಅಭಿವೃದ್ಧಿ ಪ್ರಾಧಿಕಾರ ಸರಿಪಡಿಸದೇ ಇದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮಾನವ ಹಕ್ಕುಗಳ ತಾಲ್ಲೂಕು ಘಟಕದ ಅಧ್ಯಕ್ಷ ರಫೀಕ್ ಬಡೇಘರ್ ತಾಲ್ಲೂಕು ಆಡಳಿತವನ್ನು ಎಚ್ಚರಿಸಿದ್ದಾರೆ.

ಚುನಾವಣೆ ವೇಳೆ ಬೇರೆ ಕ್ಷೇತ್ರಕ್ಕೆ ಹೋಗಿದ್ದೆ. ಈಗ ಮರು ನಿಯುಕ್ತಿಗೊಂಡಿರುವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲಿಸಿ ಬಾವಿ ಶುಚಿಗೊಳಿಸುವೆ

ಡಾ.ವಿಜಯಕುಮಾರ ಹೊನಕೇರಿ, ಉಪವಿಭಾಗಾಧಿಕಾರಿ, ಬೈಲಹೊಂಗಲ

ರವಿ ಹುಲಕುಂದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry