ಮಳೆ ಅಭಾವ; ಬಿತ್ತನೆ ಕಾರ್ಯ ಸ್ಥಗಿತ

7
ಮುನಿಸಿಕೊಂಡ ಮಿರ್ಗಾ; ಮುಗಿಲು ನೋಡುತ್ತಿರುವ ರೈತರು

ಮಳೆ ಅಭಾವ; ಬಿತ್ತನೆ ಕಾರ್ಯ ಸ್ಥಗಿತ

Published:
Updated:
ಮಳೆ ಅಭಾವ; ಬಿತ್ತನೆ ಕಾರ್ಯ ಸ್ಥಗಿತ

ಚಿಂಚೋಳಿ: ತಾಲ್ಲೂಕಿನಲ್ಲಿ ಮಳೆಯ ಅಭಾವ ಎದುರಾಗಿದೆ. ತೇವಾಂಶದ ಕೊರತೆಯಿಂದ ಮುಂಗಾರು ಬಿತ್ತನೆಯನ್ನು ರೈತರು ಸ್ಥಗಿತಗೊಳಿಸುತ್ತಿದ್ದಾರೆ.

‘ಸದ್ಯ ಜಮೀನಿನಲ್ಲಿ ತೇವಾಂಶ ಕುಸಿಯುತ್ತಿದೆ. ತಾಲ್ಲೂಕಿನ ಪಟಪಳ್ಳಿ, ಯಂಪಳ್ಳಿ, ಶಿಕಾರ ಮೋತಕಪಳ್ಳಿ, ತಿರುಮಲಾಪುರ, ಚಂದ್ರಂಪಳ್ಳಿ, ಐನೋಳ್ಳಿ ಮೊದಲಾದ ಕಡೆಗಳಲ್ಲಿ ರೈತರು ಬಿತ್ತನೆ ಸ್ಥಗಿತಗೊಳಿಸಿದ್ದಾರೆ. ಇನ್ನು ಕೆಲವೆಡೆ ರೈತರು ದೇವರ ಮೇಲೆ ಭಾರ ಹಾಕಿ ಅರೆ ಮನಸ್ಸಿನಿಂದಲೇ ಬಿತ್ತನೆಯಲ್ಲಿ ತೊಡಗಿದ್ದಾರೆ’ ಎಂದು ಯುವ ರೈತ ರಾಜು ಪಾಟೀಲ ಪಟಪಳ್ಳಿ ತಿಳಿಸಿದ್ದಾರೆ.

ಐನಾಪುರ, ಚಿಂಚೋಳಿ ಹಾಗೂ ಕುಂಚಾವರಂ ಸುತ್ತಮುತ್ತ ಮಳೆಯ ತುರ್ತು ಅಗತ್ಯವಿದೆ. ನಿಡಗುಂದಾ ಮತ್ತು ಕೋಡ್ಲಿ ಸುತ್ತ ಕಳೆದ 13ರಂದು ಮಳೆಯಾಗಿದ್ದರಿಂದ ಅಲ್ಲಿ ಬಿತ್ತನೆ ಭರದಿಂದ ಸಾಗಿದೆ.

ರೋಹಿಣಿ ಮಳೆ ಸಕಾಲದಲ್ಲಿ ಸುರಿದಿದ್ದರಿಂದ ರೈತರು ಅವಧಿಗಿಂತಲೂ ಮೊದಲೇ ಬಿತ್ತನೆ ಕಾರ್ಯ ಆರಂಭಿಸಿದ್ದರು. ಬೇಗ ಬಿತ್ತನೆ

ನಡೆಸಿದ ಹೊಲಗಳಲ್ಲಿ ಮೊಳಕೆಯ ಸಾಲುಗಳು ಚೆನ್ನಾಗಿ ಗೋಚರಿಸುತ್ತಿವೆ. ಐನಾಪುರ, ಚಿಮ್ಮನಚೋಡ್‌ ಸುತ್ತ ಬೆಳೆ ಚೆನ್ನಾಗಿದೆ.

ಚಿಂಚೋಳಿಯಲ್ಲಿ ಜೂನ್‌ 7ರ ನಂತರ ಮತ್ತೆ ಮಳೆಯಾಗಿಲ್ಲ. 11 ದಿನಗಳಿಂದ ಮಳೆ ಸುರಿಯದ ಕಾರಣ ಭೂಮಿಯಲ್ಲಿ ತೇವಾಂಶ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

ಕೃಷಿ ಇಲಾಖೆಯು ತಾಲ್ಲೂಕಿನಲ್ಲಿ 84,427 ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿ ಹಾಕಿಕೊಂಡಿದೆ. ಸದ್ಯ ಸುಮಾರು 28ರಿಂದ30 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry