ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚತುಷ್ಪಥ-ರಸ್ತೆ ಅಭಿವೃದ್ಧಿಗೆ ₹4.15 ಕೋಟಿ

9 ಗ್ರಾಮೀಣ ರಸ್ತೆಗಳ ಮೇಲ್ದರ್ಜೆಗೆ ಪ್ರಸ್ತಾವನೆ
Last Updated 19 ಜೂನ್ 2018, 7:09 IST
ಅಕ್ಷರ ಗಾತ್ರ

ಪುತ್ತೂರು: ‘ಪುತ್ತೂರು-ಉಪ್ಪಿನಂಗಡಿ ರಸ್ತೆ ಅಭಿವೃದ್ಧಿಗೆ ₹4.15 ಕೋಟಿ ಅನುದಾನ ಮಂಜೂರು ಗೊಂಡಿದ್ದು, ಮಳೆಗಾಲದ ನಂತರ ಈ ಎರಡೂ ಕಾಮಗಾರಿಗಳನ್ನು ನಡೆಸಲಾಗುವುದು’ ಎಂದು ಪುತ್ತೂರು ಉಪವಿಭಾಗದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗೋಕುಲ್‌ದಾಸ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

‘ಪುತ್ತೂರು– ಉಪ್ಪಿನಂಗಡಿ ರಸ್ತೆಯನ್ನು ಪಡೀಲ್‌ನಿಂದ ಕೆಮ್ಮಾಯಿ ಪೆಟ್ರೋಲ್ ಬಂಕ್‌ ವರೆಗೆ 800 ಮೀ. ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡಲಾಗುವುದು. ದಾರಂದಕುಕ್ಕು ಬಳಿಯಿಂದ ಕೋಡಿಂಬಾಡಿ ಹಿರಿಯ ಪ್ರಾಥಮಿಕ ಶಾಲೆಯ ವರೆಗಿನ ರಸ್ತೆಯನ್ನು ಅಗಲೀಕರಣ ನಡೆಸಿ ಅಭಿವೃದ್ಧಿ ಪಡಿಸಲಾಗುವುದು’ ಎಂದು ತಿಳಿಸಿದ್ದಾರೆ.

‘ಮಾರ್ಚ್‌ ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದ್ದರೂ ತಾಂತ್ರಿಕ ಕಾರಣಗಳಿಂದ ಕಾಮಗಾರಿ ಆರಂಭವಾಗಿರಲಿಲ್ಲ. ಆದರೆ ಒಂದಷ್ಟು ರಸ್ತೆ ವಿಸ್ತರಣೆಯ ಕೆಲಸ ನಡೆಸಲಾಗಿತ್ತು. ಇದೀಗ 2 ತಿಂಗಳಲ್ಲಿ ಈ ಎರಡೂ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.

ಇದಕ್ಕಾಗಿ ರಸ್ತೆ ಬದಿಯಲ್ಲಿರುವ ಸುಮಾರು 85 ಮರಗಳನ್ನು ಕಡಿಯಬೇಕಾಗಿದೆ. ಇದಕ್ಕೆ ಅರಣ್ಯ ಇಲಾಖೆ ಸ್ಪಂದಿಸಿದ್ದು, ಈ ಮರಗಳ ತೆರವು ಕಾರ್ಯದ ನಂತರ ವಿದ್ಯುತ್ ಕಂಬಗಳನ್ನು ತೆರವು ಮಾಡುವ ಪ್ರಕ್ರಿಯೆ ನಡೆಯಲಿದೆ. ನಂತರ ರಸ್ತೆ ಅಭಿವೃದ್ಧಿ ಹಾಗೂ ಚತುಷ್ಪಥ ರಸ್ತೆ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ’ ಎಂದವರು ಮಾಹಿತಿ ನೀಡಿದ್ದಾರೆ.

9 ಗ್ರಾಮೀಣ ರಸ್ತೆ : ಪುತ್ತೂರು ಉಪವಿಭಾಗದ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಪ್ರಸ್ತುತ 13 ರಸ್ತೆಗಳಿದ್ದು, ಇವು ಒಟ್ಟು 106ಕಿಮೀ ಉದ್ದವಿದೆ.

ಗ್ರಾಮೀಣ ಭಾಗದ 9 ರಸ್ತೆಗಳನ್ನು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ತರಲು ಪ್ರಸ್ತಾವನೆ ಕಳುಹಿಸಲಾಗಿದೆ. ಈ ರಸ್ತೆಗಳನ್ನು ಮೇ ಲ್ದರ್ಜೆಗೆ ಏರಿಸಿದ ನಂತರ ಲೋಕೋಪಯೋಗಿ ಇಲಾಖೆ ವತಿಯಿಂದ ಅಭಿವೃದ್ಧಿ ಮಾಡಲು ಉದ್ದೇಶಿಸಲಾಗಿದೆ ಎಂದು ಗೋಕುಲ್‌ ದಾಸ್ ಅವರು ತಿಳಿಸಿದ್ದಾರೆ.

‘ಕೌಡಿಚ್ಚಾರು-ಇಳಂತಾಜೆ- ಕೆಯ್ಯೂರು 23ಕಿಮೀ, ಉಪ್ಪಿನಂಗಡಿ-ಹಿರೇಬಂಡಾಡಿ-ಕೊಲ- ರಾಮಕುಂಜ- ಹಳೆನೇರೆಂಕಿ- ಗೋಳಿತೊಟ್ಟು- ಪಟ್ರಮೆ -ಧರ್ಮಸ್ಥಳ 41.3ಕಿಮೀ, ಮುಡಿಪಿನಡ್ಕ-ಪದಡ್ಕ- ಈಶ್ವರಮಂಗಲ- ಪಂಚೋಡಿ- ಕರ್ನೂರು, ಗಾಳಿಮುಖ 16.5ಕಿಮೀ, ಮುಕ್ರಂಪಾಡಿ- ರೆಂಜಲಾಡಿ- ಭಕ್ತಕೋಡಿ 13.8 ಕಿ.ಮೀ, ಸವಣೂರು-ಹೊಸಗದ್ದೆ-ಮಾಡಾವು- ಸಿದ್ದಮೂಲೆ-ಪಾಂಬಾರು- ಐವರ್ನಾಡು 18ಕಿಮೀ, ಕೋಡಿಂಬಾಡಿ- ದಾರಂದಕುಕ್ಕು- ಸೇಡಿಯಾಪು- ಕಡಂಬು 10.8ಕಿಮೀ, ಬಲ್ಯ-ನೆಲ್ಯಾಡಿ 10ಕಿಮೀ, ಚಾರ್ವಾಕ- ಕೋಡಿಂಬಾಳ -ಐತ್ತೂರು- ಕೋಣಾಜೆ- ನೂಜಿಬಾಳ್ತಿಲ 33.6ಕಿಮೀ ಮತ್ತು ಉದನೆ -ಶಿಬಾಜೆ 11.4ಕಿಮೀ ಇವು ಗ್ರಾಮೀಣ ಭಾಗದ ರಸ್ತೆಗಳಾಗಿದ್ದು, ಈ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಈ ಪ್ರಸ್ತಾವನೆಗೆ ಮಾನ್ಯತೆ ದೊರೆತರೆ ಒಟ್ಟು 175ಕಿಮೀ ಉದ್ದದ ರಸ್ತೆ ಲೋಕೋಪಯೋಗಿ ಇಲಾಖೆಯಡಿ ಬರಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT