7
60 ಮಂದಿಯಿದ್ದ ಉಪವಿಭಾಗದಲ್ಲಿ ಈಗ ಇಬ್ಬರು ಮಾತ್ರ, ನೇಮಕಾತಿ ಸ್ಥಗಿತ

ಗ್ಯಾಂಗ್‌ಮನ್ ರದ್ದು; ರಸ್ತೆಗಳ ದುಃಸ್ಥಿತಿ

Published:
Updated:
ಗ್ಯಾಂಗ್‌ಮನ್ ರದ್ದು; ರಸ್ತೆಗಳ ದುಃಸ್ಥಿತಿ

ಪುತ್ತೂರು: ರಸ್ತೆಗಳ ನೈರ್ಮಲ್ಯ ಕಾಪಾ ಡಲು 'ಗ್ಯಾಂಗ್ ಮನ್' ಎಂಬ ತಂಡ ಲೋಕೋಪಯೋಗಿ ಇಲಾಖೆ ಯಲ್ಲಿತ್ತು. ಪುತ್ತೂರು ಉಪವಿಭಾಗದಲ್ಲಿ  60 ಮಂದಿ ಗ್ಯಾಂಗ್‌ಮನ್‌ಗಳಿದ್ದರು. ಪ್ರಸ್ತುತ ಇರುವುದು ಬರೀ ಇಬ್ಬರು ಮಾತ್ರ.

ಲೋಕೋಪಯೋಗಿ ಇಲಾಖೆಯ ಡಿಯಲ್ಲಿ ಬರುವ ಪ್ರತಿಯೊಂದು ರಸ್ತೆಗೂ 4 ರಿಂದ 5 ಮಂದಿ ಗ್ಯಾಂಗ್‌ಮನ್‌ಗಳಿದ್ದು, ಮಳೆಗಾಲ ಆರಂಭವಾದರೆ ಸಾಕು ಹಾರೆ ಪಿಕ್ಕಾಸು ಹಿಡಿದುಕೊಂಡು ರಸ್ತೆಯ ಎರಡೂ ಭಾಗದ ಚರಂಡಿಗಳನ್ನು ರಿಪೇರಿ ಮಾಡುತ್ತಿದ್ದರು. ಮಳೆ ನೀರು ಹರಿದುಹೋಗುವಂತೆ  ಮಾಡುವ ಜವಾಬ್ದಾರಿ ಅವರದ್ದಾಗಿತ್ತು. ನೀರು ನಿಂತು ರಸ್ತೆ ಹಾಳಾಗದಂತೆ  ಗಮನಿಸುವ ಅವರ ಕಾಳಜಿಯಿಂದಾಗಿ ರಸ್ತೆಗಳು ಹಾಳಾಗುತ್ತಿರಲಿಲ್ಲ. ಆದರೆ ಈಗಿನ ನಿಯಮದಂತೆ ಗ್ಯಾಂಗ್‌ಮನ್‌ಗಳು ಹುದ್ದೆಯಿಂದ ನಿವೃತ್ತಿಗೊಂಡರೆ ಆ ಹುದ್ದೆಯೇ ರದ್ದುಗೊಳ್ಳುತ್ತದೆ. ವ್ಯವಸ್ಥೆ ಇಲಾಖೆಯಿಂದ ದೂರವಾಗಿದ್ದು, ಇದರಿಂದಾಗಿ ರಸ್ತೆ ಪರಿಸ್ಥಿತಿ ಬದಲಾಗಿದೆ.

ಬಹುತೇಕ ರಸ್ತೆಯ ಎರಡೂ ಬದಿಗಳಲ್ಲಿರುವ ಚರಂಡಿಗಳು ಕಸ ತುಂಬಿ ಪೊದರು ಬೆಳೆದು ಚರಂಡಿಯೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಉಪ್ಪಿನಂಗಡಿ–ಪುತ್ತೂರು ನಡುವಣ ರಸ್ತೆ ಇದಕ್ಕೆ  ಉದಾಹರಣೆ. 13 ಕಿ.ಮೀ ಉದ್ದವಿರುವ ಈ ರಸ್ತೆಯ ಇಕ್ಕೆಲಗಳಲ್ಲೂ ಚರಂಡಿ ಸಮರ್ಪಕವಾಗಿಲ್ಲದೆ ರಸ್ತೆಯಲ್ಲಿಯೇ ಮಳೆ ನೀರು ಹರಿದು ಕೃತಕ ನೆರೆ ಸೃಷ್ಟಿಯಾಗುತ್ತದೆ.

ವಾಹನ ಚಾಲಕರಿಗೆ ಮಾತ್ರವಲ್ಲ ರಸ್ತೆ ಬದಿಯಲ್ಲಿ ಸಂಚರಿಸುವ ಶಾಲಾ ಮಕ್ಕಳು ಸೇರಿದಂತೆ ಪಾದಚಾರಿಗಳಿಗೆ ಕೆಸರು ನೀರು ಸಿಡಿಯುವುದು ಸಾಮಾನ್ಯವಾಗಿದೆ.

ಈಗ ರಸ್ತೆ ಬದಿಯಲ್ಲಿ ಚರಂಡಿ ದುರಸ್ತಿಗೂ ಟೆಂಡರ್ ಕರೆಯಬೇಕು. ಗುತ್ತಿಗೆದಾರರು ಈ ಕಾಮಗಾರಿ ನಡೆಸಬೇಕು. ಮಳೆಗಾಲದ ಮೊದಲು ಮಾಡಬೇಕಾದ ಕಾಮಗಾರಿಯನ್ನು ಗುತ್ತಿಗೆದಾರರಿಗೆ ಸಮಯ ಸಿಕ್ಕಾಗ ನಡೆಸುವ ಕಾರಣದಿಂದಾಗಿ ರಸ್ತೆಗಳು ಹಾಳಾಗುವುದನ್ನು ತಡೆಯುವಲ್ಲಿ ಲೋಕೋಪಯೋಗಿ ಇಲಾಖೆಯ ಅಭಿವೃದ್ಧಿ ಕಾರ್ಯಗಳು ವಿಫಲವಾಗುತ್ತಿವೆ.

ಪುತ್ತೂರು–ಉಪ್ಪಿನಂಗಡಿ ರಸ್ತೆಯ ಎರಡೂ ಬದಿಗಳಲ್ಲಿ ಸಮರ್ಪಕವಾದ ಚರಂಡಿ ನಿರ್ಮಾಣ ಕಾರ್ಯ ಹಲವು ವರ್ಷಗಳಿಂದಲೂ ನನೆಗುದಿಗೆ ಬಿದ್ದಿದೆ. ಕಳೆದ ವಾರ ಧಾರಾಕಾರವಾಗಿ ಸುರಿದ ಅಬ್ಬರಕ್ಕೆ ಅಲ್ಲೊಂದು ಇಲ್ಲೊಂದು ಕಡೆಯಲ್ಲಿ ಚರಂಡಿಯ ಸ್ಥಿತಿಯನ್ನು ಇಲಾಖೆ ಸಮರ್ಪಕಗೊಳಿಸಿದ್ದರೂ ರಸ್ತೆಯುದ್ದಕ್ಕೂ ಚರಂಡಿ ನಿರ್ಮಾಣವಾಗಿಲ್ಲ. ಬರೆ ಕುಸಿದು ಬಿದ್ದ ಕಡೆಯಲ್ಲಿ ಚರಂಡಿ ಸಂಪೂರ್ಣ ಮುಚ್ಚಿಹೋಗಿದೆ. ಚರಂಡಿಯಲ್ಲಿ ಪೊದೆಗಳು ಬೆಳೆದು ನೀರು ಹರಿದುಹೋಗಲು ಸಾಧ್ಯವಿಲ್ಲದ ಪರಿಸ್ಥಿತಿ ಇಲ್ಲಿದೆ.

‘ಚರಂಡಿ ದುರಸ್ತಿಗೆ ಮರಗಳೇ ಅಡ್ಡಿ’

ಉಪ್ಪಿನಂಗಡಿ ರಸ್ತೆಯ ಕೆಲವು ಭಾಗದಲ್ಲಿ ಈಗಾಗಲೇ ಚರಂಡಿಯನ್ನು ಸಮರ್ಪಕಗೊಳಿಸುವ ಕೆಲಸ ಮಾಡಲಾಗಿದೆ. ಆದರೆ ಕೆಲವು ಭಾಗಗಳಲ್ಲಿ ಮರಗಳಿಂದಾಗಿ ಚರಂಡಿ ದುರಸ್ತಿಗೆ ತೊಂದರೆಯಾಗಿದೆ. ಈಗ ಗುತ್ತಿಗೆದಾರರೇ ಈ ಕೆಲಸ ಮಾಡಬೇಕಾಗಿರುವುದರಿಂದ ಒಂದಷ್ಟು ಅನನುಕೂಲತೆ ಉಂಟಾಗುತ್ತದೆ. ತಕ್ಷಣ ಈ ರಸ್ತೆ ಬದಿಯಲ್ಲಿ ಚರಂಡಿ ದುರಸ್ತಿಮಾಡುವ ಕೆಲಸ ಮಾಡಲಾಗುವುದು’ ಎಂದು  ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಪ್ರಮೋದ್ ತಿಳಿಸಿದರು.

‘ಗ್ಯಾಂಗ್‌ಮನ್ ಅಗತ್ಯ’

‘ಲೋಕೋಪಯೋಗಿ ಇಲಾಖೆಯಲ್ಲಿ ಹಿಂದೆ ಇದ್ದಂತೆ ಗ್ಯಾಂಗ್‌ಮನ್ ವ್ಯವಸ್ಥೆಯ ಮೂಲಕ ರಸ್ತೆ ಸಮರ್ಪಕಗೊಳಿಸಲು ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ರಸ್ತೆಗಳ ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದು. ಕನಿಷ್ಠ ಹೊರಗುತ್ತಿಗೆ ಆಧಾರದಲ್ಲಿಯಾದರೂ ಗ್ಯಾಂಗ್‌ಮನ್ ನೇಮಕಾತಿ ನಡೆಯಬೇಕು. ಸರ್ಕಾರ ಮತ್ತು ಲೋಕೋಪಯೋಗಿ ಇಲಾಖೆ ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತನೆ ನಡೆಸಬೇಕು’ ಎಂಬುವುದು ಅಂಬೇಡ್ಕರ್ ತತ್ವರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಬಾಲಚಂದ್ರ ಸೊರಕೆ ಅವರ ಆಗ್ರಹ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry