ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೆಳೆ ಹಾನಿ

7
ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಧ್ರುವನಾರಾಯಣ

ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೆಳೆ ಹಾನಿ

Published:
Updated:
ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೆಳೆ ಹಾನಿ

ನಂಜನಗೂಡು: ಜಲಸಂ‍ಪನ್ಮೂಲ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲ್ಲೂಕಿನ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೂರಾರು ಎಕರೆಯಲ್ಲಿ ಬೆಳೆ ನಾಶವಾಗಿದೆ ಎಂದು ಸಂಸದ ಧ್ರುವನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ವರುಣಾ ವಿಧಾನ ಸಭಾ ಕ್ಷೇತ್ರದ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗೆ ಮುಂಚಿತವಾಗಿ ಮಾಹಿತಿ ನೀಡದೆ ಕಬಿನಿ ಜಲಾಶಯದಿಂದ ಏಕಾಏಕಿ ಕಪಿಲಾ ನದಿಗೆ ಹೆಚ್ಚಿನ ನೀರು ಹರಿಸಿದ್ದರಿಂದ ತಾಲ್ಲೂಕಿನ ಕುಪ್ಪರಹಳ್ಳಿ, ನಗರ್ಲೆ ಸುತ್ತಮುತ್ತಲ ಗ್ರಾಮಗಳ ಜಮೀನಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ಒಂದು ವೇಳೆ ಜನರ ಪ್ರಾಣಹಾನಿಯಾಗಿದ್ದರೆ ಅದಕ್ಕೆ ಯಾರು ಹೊಣೆಯಾಗುತ್ತಿದ್ದರು ಎಂದು ಅವರು ಕಾವೇರಿ ನೀರಾವರಿ ನಿಗಮದ ಎಇಇ ಪ್ರೇಮ್ ಕುಮಾರ್ ಅವರ ವಿರುದ್ಧ ಹಾರಿಹಾಯ್ದರು.

‘ನದಿಯಿಂದ ಹೆಚ್ಚಿಗೆ ನೀರು ಬಿಡುತ್ತಿರುವ ಬಗ್ಗೆ ಒಂದು ದಿನ ಮುಂಚಿತವಾಗಿ ಗ್ರಾಮಗಳಲ್ಲಿ ಟಾಂಟಾಂ ಹೊಡೆಸಿ ಎಚ್ಚರಿಕೆ ನೀಡಿದ್ದರೆ ಕೋಯ್ಲಿಗೆ ಬಂದಿದ್ದ ಬೆಳೆಗಳನ್ನು ಉಳಿಸಿಕೊಳ್ಳಹುದಿತ್ತು ಎಂದು ವಿಷಾದ ವ್ಯಕ್ತಪಡಿಸಿದ ಅವರು, ನದಿ ನೀರು ನುಗ್ಗಿ ಬೆಳೆ ಕಳೆದುಕೊಂಡ ರೈತರ ಜಮೀನುಗಳಿಗೆ ತೆರಳಿ ನಷ್ಟದ ಅಂದಾಜು ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದು, ಪರಿಹಾರ ಸಿಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಶಿಕ್ಷಣ ಇಲಾಖೆಯ ಸಮಸ್ಯೆ ಬಗ್ಗೆ ಮಾಹಿತಿ ಪಡೆಯಲು ಮುಂದಾದಾಗ ಕ್ಷೇತ್ರ ಶಿಕ್ಷಣಾಧಿಕಾರಿ ಸಭೆಯಲ್ಲಿ ಇಲ್ಲದ್ದನ್ನು ಗಮನಿಸಿದ ಧ್ರುವನಾರಾಯಣ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟೀಸ್ ನೀಡುವಂತೆ ಇಒ ರೇವಣ್ಣ ಅವರಿಗೆ ಸೂಚಿಸಿದರು.

ತಾ.ಪಂ.ಸದಸ್ಯ ಸಿ.ಎಂ.ಮಹದೇವಯ್ಯ ಮಾತನಾಡಿ, ಕೊಣನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಥಿಲಗೊಂಡಿದೆ. ಮಕ್ಕಳು ಶಾಲೆಯ ಹೊರಾಂಗಣದಲ್ಲಿ ಕುಳಿತು ಕಲಿಯುವ ಸ್ಥಿತಿ ನಿರ್ಮಾಣವಾ ಗಿದೆ ಎಂದರು.

ಸಿಎಸ್ಆರ್ ನಿಧಿಯಿಂದ ಹಾಗೂ ಟೊಯೋಟಾ ಕಂ‍ಪೆನಿಯ ಸಹಯೋಗದೊಂದಿಗೆ ಕ್ಷೇತ್ರದಲ್ಲಿ 30 ಶಾಲೆಗಳನ್ನು ನಿರ್ಮಿಸಲಾಗಿದೆ. ಶಾಸಕರ ನಿಧಿಯಿಂದ ಶಾಲೆಯ ದುರಸ್ಥಿಕಾರ್ಯ ನಡೆಸಲಾಗುವುದು ಎಂದು ಶಾಸಕ ಯತೀಂದ್ರ ಹೇಳಿದರು.

ಈ ಚರ್ಚೆ ನಡೆಯುತ್ತಿರುವಾಗಲೇ ಸಭೆಗೆ ಬಂದ ಬಿಇಒ ನಾರಾಯಣ್ ಮೇಲೆ ಹರಿಹಾಯ್ದ ಸಂಸದ, ‘ಶಿಸ್ತನ್ನು ಪಾಲಿಸದ ನೀವು ವಿದ್ಯಾರ್ಥಿಗಳಿಗೆ ಏನು ಕಲಿಸುತ್ತೀರಿ. ಸರಿಯಾಗಿ ಕೆಲಸ ಮಾಡುವುದಿದ್ದರೆ ಇರಿ. ಇಲ್ಲದಿದ್ದರೆ ಬೇರೆ ಕಡೆ ವರ್ಗ ಮಾಡಿಸಿಕೊಂಡು ಹೋಗಿ’ ಎಂದು ಎಚ್ಚರಿಕೆ ನೀಡಿದರು.

ಶಾಸಕ ಡಾ.ಯತೀಂದ್ರ ಮಾತನಾಡಿ, ಕ್ಷೇತ್ರದಲ್ಲಿ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳ ಅಪೌಷ್ಟಿಕತೆ ಸಮಸ್ಯೆ ನಿವಾರಣೆಯಾಗಬೇಕು. ಅಧಿಕಾರಿಗಳು ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಯಶಸ್ವಿಯಾಗಿ ತಲುಪಿಸುವ ಕೆಲಸ ಮಾಡಬೇಕು. ಕ್ಷೇತ್ರದಲ್ಲಿ ಸಂಪೂರ್ಣ ಸಾಕ್ಷರತೆ ಸಾಧಿಸಬೇಕು ಎಂದರು.

ಜಿ.ಪಂ.ಸದಸ್ಯೆ ಲತಾ ಸಿದ್ದಶೆಟ್ಟಿ ಮಾತನಾಡಿ, ಹೆಮ್ಮರಗಾಲ ಗ್ರಾಮದ ಸುತ್ತಾಮುತ್ತ ಜನರಿಗೆ ಕಾಲರಾ ಹಾಗೂ ಜ್ವರ ಕಾಣಿಸಿಕೊಂಡಿದೆ. ಪಿ.ಡಿ.ಒಗಳು ಅನಾಹುತ ಸಂಭವಿಸುವ ಮೊದಲು ಎಚ್ಚೆತ್ತುಕೊಂಡು ಸ್ವಚ್ಛತಾ ಕಾರ್ಯ ನಡೆಸಿ ಗ್ರಾಮಗಳಲ್ಲಿ ನೈರ್ಮಲ್ಯ ಕಾಪಾಡಬೇಕು ಎಂದರು.

ಜಿ.ಪಂ.ಸದಸ್ಯ ಸದಾನಂದ ಮಾತನಾಡಿ, ವರುಣಾ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡಬೇಕು ಎಂಬ ಸಿದ್ದರಾಮಯ್ಯ ಅವರ ಕನಸು–ನನಸಾಗಿಲ್ಲ. ಕಾಂಕ್ರೀಟ್ ರಸ್ತೆ, ಚರಂಡಿ ಕಾಮಗಾರಿ ಕಳಪೆಯಿಂದ ಕೂಡಿವೆ. ಒಂದೂವರೆ ತಿಂಗಳು ಕಳೆದರೂ ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ಪುಸ್ತಕ ವಿತರಣೆಯಾಗಿಲ್ಲ. ತಗಡೂರು ಸಮುದಾಯ ಆರೋಗ್ಯ ಕೇಂದ್ರ ಸುಸಜ್ಜಿತ ಕಟ್ಟಡ ಹಾಗೂ ಸೌಲಭ್ಯಗಳನ್ನು ಹೊಂದಿದ್ದರೂ ವೈದ್ಯರ ಕೊರತೆ ಇದೆ ಎಂದು ದೂರಿದರು.

ಸಂಸದ ಧ್ರುವನಾರಾಯಣ ಪ್ರತಿಕ್ರಿಯಿಸಿ, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಲಾಗಿದೆ. ಸರಾಸಗಟಾಗಿ ಅಪಾದನೆ ಮಾಡುವುದು ಬೇಡ. ಕಳಪೆ ಕಾಮಗಾರಿಯ ಬಗ್ಗೆ ನಿರ್ದಿಷ್ಟ ಪ್ರಕರಣವಿದ್ದರೆ ಜನ ಪ್ರತಿನಿಧಿಗಳು ಲಿಖಿತ ದೂರು ನೀಡಬಹುದು. ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಸರ್ಕಾರ ಹೆಚ್ಚಿನ ಸಂಬಳ ನೀಡುವುದಾಗಿ ಆಹ್ವಾನ ನೀಡಿದರೂ ವೈದ್ಯರು ಬರುತ್ತಿಲ್ಲ ಎಂದು ಹೇಳಿದರು.

ಸಭೆಯ ನಂತರ ಶಾಸಕ ಡಾ.ಯತೀಂದ್ರ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಶಾಸಕರ ಕೊಠಡಿಯನ್ನು ಉದ್ಘಾಟಿಸಿದರು.

ಶಾಸಕ ಅನಿಲ್ ಚಿಕ್ಕಮಾಧು, ತಾ.ಪಂ. ಅಧ್ಯಕ್ಷ ಬಿ.ಎಸ್.ಮಹದೇವಯ್ಯ, ಉಪಾಧ್ಯಕ್ಷ ಗೋವಿಂದ ರಾಜನ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಣ್ಣ, ಇಒ ರೇವಣ್ಣ, ವ್ಯವಸ್ಥಾಪಕ ನಂಜುಂಡಸ್ವಾಮಿ, ತಾಲ್ಲೂಕು ಆರೋಗ್ಯಾಧಿಕಾರಿ ಕಲಾವತಿ, ಸಿ.ಡಿ.ಪಿ.ಒ.ಗೀತಾಲಕ್ಷ್ಮಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry