ಸೋಲಿಗೆ ಹೆದರುವುದಿಲ್ಲ: ಮಧು ಬಂಗಾರಪ್ಪ

7

ಸೋಲಿಗೆ ಹೆದರುವುದಿಲ್ಲ: ಮಧು ಬಂಗಾರಪ್ಪ

Published:
Updated:
ಸೋಲಿಗೆ ಹೆದರುವುದಿಲ್ಲ: ಮಧು ಬಂಗಾರಪ್ಪ

ಸೊರಬ: ಅಧಿಕಾರವಿರುವಾಗ ಜನರ ಭಾವನೆಗಳನ್ನು ಅರಿತು ಉತ್ತಮ ಕೆಲಸ ಮಾಡಿದವರು ಚುನಾವಣೆಯಲ್ಲಿ ಸೋಲುವುದು ಹೊಸತೇನಲ್ಲ ಎಂದು ಜೆಡಿಎಸ್‌ ಮುಖಂಡ ಮಧು ಬಂಗಾರಪ್ಪ ಹೇಳಿದರು. ಸೋಮವಾರ ಪಟ್ಟಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಸೋಲಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಂಬಿದ ಜನರನ್ನು ಹಾಗೂ ಕಾರ್ಯಕರ್ತರನ್ನು ಎಂದಿಗೂ ಕೈ ಬಿಡುವುದಿಲ್ಲ. ಮತದಾರರ ತೀರ್ಪನ್ನು ಗೌರವಿಸಬೇಕಾಗಿರುವುದು ಧರ್ಮ. ಚುನಾವಣೆಯಲ್ಲಿ ಎಡವಲು ಕಾರಣವಾಗಿರುವ ವಿಷಯಗಳ ಬಗ್ಗೆ ಬೂತ್ ಮಟ್ಟದಲ್ಲಿ ವಿಮರ್ಶೆ ಮಾಡಿಕೊಳ್ಳಬೇಕು ಎಂದರು.

ಈ ಬಾರಿ ಹಿಂದುತ್ವದ ಅಲೆ ಕೆಲಸ ಮಾಡಿದೆ. ಪಕ್ಷ ಮತ್ತು ಅಭ್ಯರ್ಥಿಯನ್ನು ನೋಡಿ ಮತದಾರರು ಆಯ್ಕೆ ಮಾಡಬೇಕು. ಉತ್ತಮ ಕೆಲಸ ಮಾಡುವ ಮನೋಭಾವ ಹೊಂದಿರುವ ವ್ಯಕ್ತಿಯನ್ನು ತಿರಸ್ಕರಿಸುವುದರಿಂದ ಕ್ಷೇತ್ರಕ್ಕೆ ಅನ್ಯಾಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

‘ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುವುದರಿಂದ ಕ್ಷೇತ್ರಕ್ಕೆ ಅನುದಾನ ತರುವುದು ಕಷ್ಟದ ಕೆಲಸವಲ್ಲ. ಕ್ಷೇತ್ರದ ಜನರ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ. ಕಾರ್ಯಕರ್ತರು ಎದೆಗುಂದಬಾರದು’ ಎಂದು ಧೈರ್ಯ ತುಂಬಿದರು.

‘ಪಕ್ಷದ ವರಿಷ್ಠರು ಹಾಗೂ ಕ್ಷೇತ್ರದ ಜನರಿಂದ ರಾಜ್ಯಮಟ್ಟದಲ್ಲಿ ನಾಯಕನಾಗಿ ಬೆಳೆಯಲು ಸಾಧ್ಯವಾಗಿದೆ. ಈ ಬಾರಿ ಶಾಸಕನಾಗಿ ಆಯ್ಕೆಯಾಗದಿರಬಹುದು. ಆದರೆ ಮುಂದಿನ ದಿನಗಳಲ್ಲಿ ಜನರ ಜೊತೆಗಿದ್ದು ಉತ್ತಮ ಕೆಲಸ ಮಾಡುವೆ’ಎಂದರು.

ಜೆಡಿಎಸ್ ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಕೆ.ಪಿ. ರುದ್ರಗೌಡ, ವಕ್ತಾರ ಎಂ.ಡಿ. ಶೇಖರ್, ಎಪಿಎಂಸಿ ಅಧ್ಯಕ್ಷ ರಾಜಶೇಖರ್, ಮೋಹನಕುಮಾರ್ ಜಡ್ಡಿಹಳ್ಳಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಲಿಂಗಗೌಡ, ವೀರೇಶ್ ಕೊಟಗಿ, ತಾರಾ ಶಿವಾನಂದಪ್ಪ, ರಾಜೇಶ್ವರಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಾಗರಾಜ್, ಸುರೇಶ್ ಹಾವಣ್ಣನವರ್, ಕೆ. ಅಜ್ಜಪ್ಪ, ಮೋಹನ್ ಕುಪ್ಪೆ ಇದ್ದರು.

‘ಸೋತರೂ ಅಭಿವೃದ್ಧಿಗೆ ಒತ್ತು’

‘ಎರಡು ಬಾರಿ ಸೋತು ಅನುಭವ ಇರುವ ನನಗೆ ಈ ಸೋಲನ್ನೂ ಒಪ್ಪಿಕೊಂಡು ಕ್ಷೇತ್ರದ ಜನರ ಜೊತೆಗೆ ಇರುವೆ’ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೋಲನ್ನು ಅರಗಿಸಿಕೊಳ್ಳುವ ಶಕ್ತಿ ಇದೆ. ತಂದೆ ಎಸ್. ಬಂಗಾರಪ್ಪ ಅವರನ್ನೂ ಜನರು ಸೋಲಿಸಿದ ಇತಿಹಾಸವಿದೆ. ಜನರ ತೀರ್ಮಾನವನ್ನು ಸ್ವೀಕರಿಸುತ್ತೇನೆ. ರಾಜ್ಯದ ಜನರ ಕನಸಿನಂತೆ ರಾಜ್ಯದಲ್ಲಿ ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದು, ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಹೆಚ್ಚು ಅಭಿವೃದ್ಧಿ ಕೆಲಸಗಳು ನಡೆಯಲಿವೆ. ನನ್ನ ಪರವಾಗಿ ಮತದಾನ ಮಾಡಿದ ತಾಲ್ಲೂಕಿನ ಜನರಿಗೂ, ಶ್ರಮಿಸಿದ ಮುಖಂಡರಿಗೂ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

‘ರೈತರ ಪರವಾಗಿ, ನೀರಾವರಿ ಪರವಾಗಿ ಹೋರಾಟಗಳನ್ನು ನಡೆಸಿದ್ದು, ಶಾಸಕನಾಗಿ ತಾಲ್ಲೂಕಿನಲ್ಲಿ ಹೆಚ್ಚಿನ ಕೆಲಸ ಮಾಡಿದ ತೃಪ್ತಿ ಇದೆ. ಮತದಾರರು ಪಕ್ಷ ನೋಡದೆ ವ್ಯಕ್ತಿಯನ್ನು ಗುರುತಿಸಿ ಮತ ಚಲಾಯಿಸುವಲ್ಲಿ ಹಿಂದುಳಿದಿದ್ದರಿಂದ ನನಗೆ ಸೋಲಾಗಿದೆ’ ಎಂದರು.

ನೈರುತ್ಯ ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಅವರನ್ನು ಬಹುಮತದಿಂದ ಗೆಲ್ಲಿಸಲು ಶ್ರಮಿಸಿದ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry