‘ಬೆಳಗಾವಿಗೆ ಇನ್ನೊಂದು ಸಚಿವ ಸ್ಥಾನಕ್ಕಾಗಿ ಬೇಡಿಕೆ’

7

‘ಬೆಳಗಾವಿಗೆ ಇನ್ನೊಂದು ಸಚಿವ ಸ್ಥಾನಕ್ಕಾಗಿ ಬೇಡಿಕೆ’

Published:
Updated:
‘ಬೆಳಗಾವಿಗೆ ಇನ್ನೊಂದು ಸಚಿವ ಸ್ಥಾನಕ್ಕಾಗಿ ಬೇಡಿಕೆ’

ಬೆಳಗಾವಿ: ‘ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್‌ ಮುಂದೆ ಬೇಡಿಕೆ ಇಡಲಾಗಿದೆ’ ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿ, ‘ಯಾರಿಗೆ ಕೊಡಬೇಕು ಎನ್ನುವುದನ್ನು ವರಿಷ್ಠರು ತೀರ್ಮಾನಿಸುತ್ತಾರೆ. ಹೋದ ಚುನಾವಣೆಯಲ್ಲಿ 6 ಸ್ಥಾನಗಳನ್ನು ಗೆದ್ದಿದ್ದೆವು. ಈ ಬಾರಿ 8 ಸ್ಥಾನ ಗಳಿಸಿದ್ದೇವೆ. ಹೀಗಾಗಿ, ಹೆಚ್ಚಿನ ಆದ್ಯತೆ ಕೊಡುವಂತೆ ಕೋರಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

‘ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷವು, ಕನಿಷ್ಠ 10 ಕ್ಷೇತ್ರಗಳಲ್ಲಿ ಗೆಲ್ಲದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಹೇಳಿದ್ದದ್ದು ನಿಜ. ಇದರೊಂದಿಗೆ ನಾನು ಕೇಳಿದವರಿಗೆ ಟಿಕೆಟ್‌ ಕೊಡಬೇಕು ಎನ್ನುವ ಬೇಡಿಕೆಯನ್ನೂ ಇಟ್ಟಿದ್ದೆ. ಸವದತ್ತಿ ಹಾಗೂ ಕುಡಚಿ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯಲ್ಲಿ ಬೇರೆಯವರ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಯಿತು.

ಇದರಿಂದಾಗಿ ಅಲ್ಲಿ ನಮಗೆ ಸೋಲಾಯಿತು. ರಾಯಬಾಗದಲ್ಲೂ ಗೆಲ್ಲಲು ಅವಕಾಶವಿತ್ತು. ಆದರೆ, ಬಂಡಾಯ ತೊಡಕಾಯಿತು. ಸವದತ್ತಿಯಲ್ಲಿ ಆನಂದ ಚೋಪ್ರಾಗೆ ಟಿಕೆಟ್‌ ಕೊಟ್ಟಿದ್ದರೆ ಕ್ಷೇತ್ರ ನಮ್ಮ ಪಾಲಾಗುತ್ತಿತ್ತು. ಇದೆಲ್ಲ ಕಾರಣದಿಂದ 10 ಸ್ಥಾನ ಪಡೆಯಲಾಗಲಿಲ್ಲ. ಇದನ್ನು ಹೈಕಮಾಂಡ್‌ ಗಮನಕ್ಕೂ ತಂದಿದ್ದೇನೆ. ಫಲಿತಾಂಶ ಸುಧಾರಿಸಿರುವುದು ನಮ್ಮ ಬಲ ಹೆಚ್ಚಿಸಿದೆ’ ಎಂದು ಸಮರ್ಥಿಸಿಕೊಂಡರು.

‘ಅಥಣಿ ಹಾಗೂ ಕಾಗವಾಡ ಕ್ಷೇತ್ರಗಳನ್ನು ಸವಾಲಾಗಿ ಸ್ವೀಕರಿಸಿದ್ದೆ. ಅಲ್ಲಿ ಗೆಲುವು ಸಾಧಿಸಿದ್ದು ಹೆಚ್ಚಿನ ಖುಷಿ ತಂದಿದೆ. ಇದರಿಂದಾಗಿಯೇ ನನಗೆ ಸಚಿವ ಸ್ಥಾನ ದೊರೆತಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕೊಟ್ಟ ಮಾತು ಉಳಿಸಿಕೊಂಡರು’ ಎಂದರು.

‘ಯಾವ ಖಾತೆ ಸಿಕ್ಕಿದೆ ಎನ್ನುವುದು ಮುಖ್ಯವಲ್ಲ. ಚೆನ್ನಾಗಿ ಕೆಲಸ ನಿರ್ವಹಿಸುವುದು ಹಾಗೂ ಜನರಿಗೆ ಅನುಕೂಲ ಕಲ್ಪಿಸುವುದು ಮುಖ್ಯವಾಗುತ್ತದೆ. ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು, ಗ್ರಾಮೀಣ ಜನರಿಗೆ ಸ್ಪಂದಿಸುತ್ತೇನೆ. ನಿರ್ದಿಷ್ಟ ಖಾತೆಗೆ ಪಟ್ಟು ಹಿಡಿಯುವುದಿಲ್ಲ’ ಎಂದು ‍ಪ್ರತಿಕ್ರಿಯಿಸಿದರು.

‘ಸಹೋದರ ಸತೀಶ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವಂತೆ ಅವರ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಳುವುದು, ಪ್ರತಿಭಟಿಸುವುದು ಅವರ ಹಕ್ಕು. ಹಿಂದಿನ ಸರ್ಕಾರದಲ್ಲಿ ಸತೀಶ ಸಚಿವನಾಗಿದ್ದಾಗ ನಾನು ಸುಮ್ಮನಿರಲಿಲ್ಲವೇ?’ ಎಂದು ಕೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry