ಕೂಟಗಲ್ -ಯರೇಹಳ್ಳಿ ಸೇತುವೆ ಕುಸಿತ

7
ವಾಹನ ಸಂಚಾರಕ್ಕೆ ತೊಂದರೆ l ಶಾಸಕರ ಭೇಟಿ l ತಡೆಗೋಡೆ ನಿರ್ಮಿಸಲು ಸೂಚನೆ

ಕೂಟಗಲ್ -ಯರೇಹಳ್ಳಿ ಸೇತುವೆ ಕುಸಿತ

Published:
Updated:
ಕೂಟಗಲ್ -ಯರೇಹಳ್ಳಿ ಸೇತುವೆ ಕುಸಿತ

ಕೂಟಗಲ್ (ರಾಮನಗರ) : ಇಲ್ಲಿನ ಕೂಟಗಲ್–ಯರೇಹಳ್ಳಿ ನಡುವೆ ಸೀತನ ತೊರೆಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಸೋಮವಾರ ಬೆಳಗ್ಗೆ ಕುಸಿದಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ವೈ.ಜಿ.ಗುಡ್ಡ ಜಲಾಶಯದ ನೀರಿನ ಹೊರ ಹರಿವಿನ ಪ್ರಮಾಣ ಹೆಚ್ಚಾಗಿರುವುದು ಹಾಗೂ ಯರೇಹಳ್ಳಿ, ಅಂಕನಹಳ್ಳಿ ಸೇರಿದಂತೆ ಸುತ್ತಲಿನ  ಗ್ರಾಮಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ತೊರೆಯಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣವೂ ಹೆಚ್ಚಾಗಿದೆ.

ಜತೆಗೆ ಸೇತುವೆ ಅಕ್ಕಪಕ್ಕ ಹಾಗೂ ತೊರೆಯಲ್ಲಿ ಮರಳು ಗಣಿಗಾರಿಕೆಯೂ ನಡೆದಿದೆ. ಸೇತುವೆ ಪಕ್ಕದಲ್ಲಿ ಅವೈಜ್ಞಾನಿಕವಾಗಿ ತಡೆ ಗೋಡೆ ನಿರ್ಮಾಣ ಮಾಡಿರುವುದರಿಂದ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ.

1984-–85ರಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ಲೋಕೋಪಯೋಗಿ ಸಚಿವರಾಗಿದ್ದ ಅವಧಿಯಲ್ಲಿ ಕೂಟಗಲ್ -–ಯರೇಹಳ್ಳಿ ಸೇತುವೆ ನಿರ್ಮಾಣಗೊಂಡಿದ್ದು, ಈಗ ಈ ಸೇತುವೆ ಸ್ವಲ್ಪಮಟ್ಟಿಗೆ ಶಿಥಿಲಗೊಂಡಿತ್ತು.

ತೊರೆಯಲ್ಲಿ ಹರಿಯುತ್ತಿರುವ ನೀರು ತಡೆಗೋಡೆಗೆ ತಗುಲಿ ವಾಪಸ್ ಅಪ್ಪಳಿಸುತ್ತಿರುವುದರಿಂದ ಸೇತುವೆ ಬುಡವನ್ನು ಕೊರೆಯಲು ಆರಂಭಿ

ಸಿದೆ. ನಾಲ್ಕೈದು ದಿನಗಳಿಂದ ತೊರೆಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದರಿಂದ ಸೇತುವೆ ಕುಸಿದಿದೆ. ಅದೃಷ್ಟ ವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ಕೂಟಗಲ್ –ಯರೇಹಳ್ಳಿ ಸೇತುವೆಯ ರಸ್ತೆಯು ರಾಮನಗರ ಮತ್ತು ಮಾಗಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಯರೇಹಳ್ಳಿ, ಅಂಕನಹಳ್ಳಿ, ಅಜ್ಜನಹಳ್ಳಿ, ಗವಿನಾಗಮಂಗಲ, ಗೇರಳ್ಳಿ ಹಾಗೂ ಮಾಗಡಿಗೆ ಈ ರಸ್ತೆಯಲ್ಲಿಯೇ ವಾಹನಗಳು ಸಂಚರಿಸುತ್ತವೆ.

ಸೇತುವೆ ಕುಸಿದಿರುವುದರಿಂದ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಸಮೀಪದ ಗ್ರಾಮಗಳ ಮೂಲಕ ಪರ್ಯಾಯವಾಗಿ ದ್ವಿಚಕ್ರ ವಾಹನಗಳು ಸಂಚರಿಸುತ್ತಿವೆ. ಬಸ್ ಗಳು, ಲಾರಿ, ಟ್ರಾಕ್ಟರ್ ಗಳು ಸಂಚಾರ ಮಾಡಲು ಆಗುತ್ತಿಲ್ಲ.

ಶಾಲಾ - ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳು ಹಾಗೂ ಜನಸಾಮಾನ್ಯರು ವಾಹನಗಳಲ್ಲಿ ರಾಮನಗರಕ್ಕೆತೆರಳಲು ತೊಂದರೆ ಉಂಟಾಗುತ್ತಿದ್ದು, ಕೂಡಲೇ ಪರ್ಯಾಯ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಶಾಸಕರು ಮತ್ತು ಅಧಿಕಾರಿಗಳ ಭೇಟಿ: ಕೂಟಗಲ್ –ಯರೇಹಳ್ಳಿ ಸಂಪರ್ಕ ಸೇತುವೆ ಕುಸಿದಿರುವ ವಿಚಾರ ತಿಳಿಯುತ್ತಿದ್ದಂತೆ ಮಾಗಡಿ ಶಾಸಕ ಎ.ಮಂಜುನಾಥ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಸಕರ ಸೂಚನೆ ಮೇರೆಗೆ ಸೇತುವೆಯ ಎರಡು ಬದಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಯಿತು.

ಹಳೆಯ ಸೇತುವೆಯಾಗಿರುವ ಕಾರಣ ತೊರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಕುಸಿದಿದೆ. ಕೂಡಲೇ ತಾತ್ಕಾಲಿಕ ಸೇತುವೆ ನಿರ್ಮಿಸಿ, ಆನಂತರ ಹೊಸ ಸೇತುವೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಶಾಸಕ ಎ. ಮಂಜುನಾಥ್‌ ತಿಳಿಸಿದರು. ಲೋಕೋಪಯೋಗಿ ಇಲಾಖೆ ಇಇ ಪ್ರಕಾಶ್ , ಎಇಇ ಎಚ್ .ಎಲ್ .ನಾಗೇಂದ್ರಪ್ಪ, ಎಇ ಕೃಷ್ಣಯ್ಯಶೆಟ್ಟಿ, ಸಾರಿಗೆ ಸಂಸ್ಥೆ ಡಿಟಿಒ ಪುರುಷೋತ್ತಮ್ ,ಡಿಎಸ್ ಐ ಸಂಜೀವ್ ಕುಮಾರ್ ,ಬೆಸ್ಕಾಂ ಎಇಇ ರಮೇಶ್ ,ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್.ಪಿ. ಜಗದೀಶ್ , ಎಪಿಎಂಸಿ ಅಧ್ಯಕ್ಷ ಪುಟ್ಟರಾಮಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಮಂಚೇಗೌಡ, ಮುಖಂಡರಾದ ಕೂಟಗಲ್ ದೇವರಾಜು, ಲಕ್ಷ್ಮಿನಾರಾಯಣ್ ಇದ್ದರು.

ಸಂಚಾರಕ್ಕೆ ಪರ್ಯಾಯ ಕ್ರಮ

ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಗಳು ಸ್ಥಳ ಪರಿಶೀಲನೆ ನಡೆಸಿ ನಾಳೆ ವರದಿ ನೀಡುವರು. ಆನಂತರ ಹೊಸ ಸೇತುವೆ ನಿರ್ಮಾಣಕ್ಕೆ ಬೇಕಾದ ಕ್ರಮ ಕೈಗೊಳ್ಳುತ್ತೇವೆ. ಅಲ್ಲಿವರೆಗೆ ಜನಸಾಮಾನ್ಯರ ಸಂಚಾರಕ್ಕೆ ಪರ್ಯಾಯ ಕ್ರಮ ಕೈಗೊಳ್ಳಲಾಗುವುದು ಎಂದು ಎ.ಮಂಜುನಾಥ್‌ ತಿಳಿಸಿದರು

ಸೇತುವೆ ಶಿಥಿಲಗೊಂಡು ಕುಸಿದಿರುವುದರಿಂದ ವಾಹನಗಳು ಸಂಚರಿಸುವುದು ಅಪಾಯಕಾರಿ. ಹೀಗಾಗಿ ರಾಮನಗರದಿಂದ ಮಾಗಡಿಯತ್ತ ತೆರಳುವ ಪ್ರಯಾಣಿಕರನ್ನು ಸೇತುವೆ ಬಳಿ ಇಳಿಸುವುದು. ಸೇತುವೆಯ ಮತ್ತೊಂದು ಬದಿಯಿಂದ ಸಾರಿಗೆ ಬಸ್ಸಿನ ಸೌಲಭ್ಯ ಮುಂದುವರೆಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry