ಮುಖ ತೋರಿಸಿ ಮರೆಯಾದ ಮಳೆ

7
ಬಿತ್ತನೆಗಾಗಿ ಕಾದು ಕುಳಿತ ಜಿಲ್ಲೆಯ ರೈತ ಸಮೂಹ; ಭೂಮಿಯಲ್ಲಿ ತೇವಾಂಶ ಕುಸಿತ

ಮುಖ ತೋರಿಸಿ ಮರೆಯಾದ ಮಳೆ

Published:
Updated:
ಮುಖ ತೋರಿಸಿ ಮರೆಯಾದ ಮಳೆ

ರಾಯಚೂರು: ಜೂನ್‌ ಸಾತ್‌ (7ರಂದು) ಭರವಸೆ ಹುಟ್ಟಿಸಿದ್ದ ಮುಂಗಾರು ಮಳೆಯು, ಆನಂತರ ಎರಡು ವಾರ ಕಳೆದರೂ ಸುರಿದಿಲ್ಲ. ಇದರಿಂದ ಜಿಲ್ಲೆಯ ರೈತ ಸಮೂಹ ಮುಗಿಲ ಕಡೆಗೆ ಮಳೆ ಎದುರು ನೋಡುತ್ತಿದೆ.

ಜೂನ್‌ 7 ಹಾಗೂ 8 ರಂದು ಜಿಲ್ಲೆಯ ವಿವಿಧ ಭಾಗದಲ್ಲಿ ರಭಸವಾಗಿ ಮಳೆ ಸುರಿದಿತ್ತು. ಇದೇ ಮಳೆಯನ್ನು ನೆಚ್ಚಿಕೊಂಡು ಲಿಂಗಸುಗೂರು, ಮಾನ್ವಿ ಹಾಗೂ ಮಸ್ಕಿ ತಾಲ್ಲೂಕುಗಳಲ್ಲಿ ಬೆರಳೆಣಿಕೆಯಷ್ಟು ರೈತರು ಹೆಸರು ಮತ್ತು ಉದ್ದು ಬಿತ್ತನೆ ಮಾಡಿದ್ದಾರೆ. ಆದರೆ ಬೀಜ ಮೊಳಕೆ ಒಡೆಯುವುದಕ್ಕೆ ಬೇಕಾದ ಅಗತ್ಯ ತೇವಾಂಶ ಇಲ್ಲದೆ ಇರುವುದರಿಂದ ಬಿತ್ತನೆ ಬೀಜವು ನಷ್ಟವಾಗುವ ಆತಂಕ ರೈತರನ್ನು ಈಗ ಕಾಡಲಾರಂಭಿಸಿದೆ.

ಈ ವರ್ಷವಾದರೂ ಮುಂಗಾರು ಸಕಾಲಕ್ಕೆ ಬಂದಿದೆ ಎಂದು ಬಿತ್ತನೆ ಮಾಡಲು ತಯಾರಿ ಮಾಡಿಕೊಂಡು ಕುಳಿತಿದ್ದ ರೈತರೆಲ್ಲ ನಿರಾಸೆಗೆ ಒಳಗಾಗಿದ್ದಾರೆ. ಮಳೆ ಸಮರ್ಪಕವಾಗಿ ಬರುತ್ತದೆಯೋ ಅಥವಾ ಇಲ್ಲವೋ ಎನ್ನುವ ದ್ವಂದ್ವ ಶುರುವಾಗಿದೆ.

ಕಳೆದ ಮೂರು ವರ್ಷಗಳಿಂದ ಅನಾವೃಷ್ಟಿ ಹಾಗೂ ಅತಿವೃಷ್ಟಿ ಹೊಡೆತದಿಂದ ಜಿಲ್ಲೆಯ ರೈತರು ನಷ್ಟ ಅನುಭವಿಸಿದ್ದಾರೆ. ಈ ವರ್ಷ ಈಗಾಗಲೇ ನೇಗಿಲು ಹೊಡೆದು ಮಣ್ಣು ಹದಗೊಳಿಸುವುದಕ್ಕೆ ಹಾಗೂ ಬೀಜ, ಗೊಬ್ಬರ ಖರೀದಿಸಲು ಸಾಕಷ್ಟು ವೆಚ್ಚ ಮಾಡಿಕೊಂಡಿರುವ ರೈತರು ಮಳೆರಾಯನ ದಾರಿ ಕಾಯುತ್ತಿದ್ದಾರೆ. ಹವಾಮಾನ ಇಲಾಖೆಯು ನೀಡಿದ್ದ ಮನ್ಸೂಚನೆ ಪ್ರಕಾರ, ಜೂನ್‌ 12ರೊಳಗಾಗಿ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಮಳೆ ಸುರಿಯಬೇಕಿತ್ತು. ಆದರೆ, ಅಂದುಕೊಂಡಿದ್ದು ರೈತರ ಪಾಲಿಗೆ ಯಾವುದೂ ಈಡೇರುತ್ತಿಲ್ಲ. ಹವಾಮಾನ ಇಲಾಖೆಯ ಮನ್ಸೂಚನೆಯು ವಾಸ್ತವವಲ್ಲ ಎನ್ನುವ ಚರ್ಚೆ ರೈತರಲ್ಲಿ ಶುರುವಾಗಿದೆ.

ಜೂನ್‌ 11 ರವರೆಗಿನ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತಲೂ ಶೇ 90 ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿತ್ತು. ಜೂನ್‌ 18 ರ ಹೊತ್ತಿಗೆ ಶೇ 19 ರಷ್ಟು ಮಳೆ ಕೊರತೆ ದಾಖಲಾಗಿದೆ. ರಾಯಚೂರು ತಾಲ್ಲೂಕಿನಲ್ಲಿ ಶೇ 45ರಷ್ಟು ಅತಿಹೆಚ್ಚು ಮಳೆ ಕೊರತೆ ಇದೆ. ಆನಂತರದ ಸ್ಥಾನದಲ್ಲಿರುವ ದೇವದುರ್ಗದಲ್ಲಿ ಶೇ 23 ರಷ್ಟು ಹಾಗೂ ಸಿಂಧನೂರಿನಲ್ಲಿ ಶೇ 20 ರಷ್ಟು ಮಳೆ ಕೊರತೆ ಕಂಡು ಬಂದಿದೆ. ವಾಡಿಕೆಯ ಪ್ರಕಾರ ಜನವರಿ 1 ರಿಂದ ಜೂನ್‌ 18 ರ ಅವಧಿಯಲ್ಲಿ ಜಿಲ್ಲೆಯಲ್ಲಿ 114.5 ಮಿಲಿ ಮೀಟರ್‌ನಷ್ಟು ವಾಡಿಕೆ ಮಳೆ ಸುರಿಯಬೇಕಿತ್ತು.

ಜಿಲ್ಲೆಯ ಎಲ್ಲ ಭಾಗದಲ್ಲೂ ಮಳೆ ಸುರಿಯುತ್ತಿಲ್ಲ. ಕೆಲವು ಭಾಗದಲ್ಲಿ ಮಾತ್ರ ತುಂತುರು ಮಳೆ ಮುಖ ತೋರಿಸಿ ಮಾಯವಾಗುತ್ತಿದೆ. ರೌಡಲಬಂಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಲ್ಲಿ ಮಾತ್ರ ಅತಿಹೆಚ್ಚಿನ ಪ್ರಮಾಣದ ಮಳೆ ಸುರಿದಿರುವುದು ದಾಖಲಾಗಿದೆ. ಅತನೂರ, ಜಂಬಲದಿನ್ನಿ, ಹೀರಾಪುರ, ಹಿರೇ ಬಾಡೂರ, ಹುಡಗಬಾಳ, ಬಿಚ್ಚಾಲಿ, ಸಂಗಾಪುರ, ಕಲ್ಮಲ, ಶಾವಂತಗೇರಾ, ಮನ್ಸಲಾಪುರ, ಕಮಲಾಪುರ, ಜೆರಾಬಂಡಿ, ಸಿಂಗನೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದೆ.

‘ರಾಯಚೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಸುರಿಯುವ ಕ್ರಮಾನುಣಿಕೆ ಹಲವು ವರ್ಷಗಳಿಂದ ಬದಲಾವಣೆ ಆಗಿದೆ. ಈ ಭಾಗದಲ್ಲಿ ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ನಲ್ಲಿ ಹೆಚ್ಚು ಮಳೆ ಸುರಿಯುತ್ತದೆ. ಹಿಂದಿನ ವರ್ಷದ ಅಂಕಿ–ಅಂಶಗಳನ್ನು ಪರಿಶೀಲಿಸಿದರೆ ಇದು ಗೊತ್ತಾಗುತ್ತದೆ. ಈ ಬಗ್ಗೆ ರೈತರಿಗೆ ತಿಳಿವಳಿಕೆ ನೀಡುತ್ತಿದ್ದೇವೆ. ಮುಂಗಾರು ಆರಂಭಿಕ ಮಳೆಯನ್ನು ಮೆಚ್ಚಿಕೊಂಡು ಬಿತ್ತನೆ ಮಾಡಬಾರದು; ಸ್ವಲ್ಪ ದಿನಗಳವರೆಗೆ ಕಾಯುವಂತೆ ಸೂಚಿಸಲಾಗಿದೆ. ಜೂನ್‌ನಲ್ಲಿ ಸಮರ್ಪಕವಾಗಿ ಮಳೆ ಬಿದ್ದರೆ ಮಾತ್ರ ಹೆಸರು ಅಥವಾ ಉದ್ದು ಬಿತ್ತನೆಗೆ ಉತ್ತಮ. ಮಳೆ ನೋಡಿಕೊಂಡು ಜುಲೈ ಅಂತ್ಯದಲ್ಲಿ ತೊಗರಿ ಬಿತ್ತನೆ ಮಾಡಿದರೆ, ಮುಂದಿನಗಳಲ್ಲಿ ಹೆಚ್ಚು ನಷ್ಟವಾಗುವುದನ್ನು ತಪ್ಪಿಸಬಹುದು’ ಎನ್ನುವುದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ನೀಡುವ ಸಲಹೆ.

‘ಮಳೆಯನ್ನು ನಂಬಿಕೊಂಡು ಬಹಳಷ್ಟು ಕಡೆಗಳಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ಮೊಳಕೆ ಎದ್ದಿರುವ ಬೆಳೆ ಗಾಳಿಗೆ ಹಾರಿಕೊಂಡು ಹೋಗುತ್ತಿದೆ. ಮಳೆಯಿಲ್ಲದೆ ರೈತರ ಜೀವನ ಮತ್ತೆ ಸಂಕಷ್ಟ ಎದುರಿಸುವಂತಾಗಿದೆ. ರಾಯಚೂರು ತಾಲ್ಲೂಕಿನ ಗ್ರಾಮಗಳಲ್ಲಿ ಹೆಚ್ಚಾಗಿ ತರಕಾರಿ ಬೆಳೆಯುತ್ತಾರೆ. ಮಳೆಯಿಲ್ಲದೆ ಬರೀ ಗಾಳಿ ಬೀಸುತ್ತಿರುವುದರಿಂದ ವಿದ್ಯುತ್‌ ಸಂಪರ್ಕ ಇರುವುದಿಲ್ಲ. ಸದ್ಯ, ನೀರಾವರಿ ಸೌಲಭ್ಯ ಹೊಂದಿರುವ ರೈತರು ಕೂಡಾ ವಿದ್ಯುತ್ ಇಲ್ಲದೆ ಸಮಸ್ಯೆಗೀಡಾಗಿದ್ದಾರೆ’ ಎಂದು ಕಡ್ಗಂ ದೊಡ್ಡಿ ಗ್ರಾಮದ ರೈತ ಲಕ್ಷ್ಮಣಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ವರ್ಷ ಮುಂಗಾರು ಸರಿಯಾದ ಸಮಯಕ್ಕೆ ಆರಂಭವಾಗಿದೆ ಎಂದು ರೈತರೆಲ್ಲ ಸಂತೋಷಪಟ್ಟಿದ್ದರು. ಆದರೆ, ಈಗ ಎಲ್ಲರಿಗೂ ಆತಂಕ ಶುರುವಾಗಿದೆ

ಲಕ್ಷ್ಮಣಗೌಡ, ಕಡ್ಗಂದೊಡ್ಡಿ ಗ್ರಾಮ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry