ಚಾಲಕರು, ನಿರ್ವಾಹಕರ ನೇಮಕ ಶೀಘ್ರ– ಸಚಿವ

7
ಗಣಂಗೂರು ಬಳಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದ ತಮ್ಮಣ್ಣ

ಚಾಲಕರು, ನಿರ್ವಾಹಕರ ನೇಮಕ ಶೀಘ್ರ– ಸಚಿವ

Published:
Updated:
ಚಾಲಕರು, ನಿರ್ವಾಹಕರ ನೇಮಕ ಶೀಘ್ರ– ಸಚಿವ

ಶ್ರೀರಂಗಪಟ್ಟಣ: ‘ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಅಗತ್ಯ ಇರುವ ಚಾಲಕರು ಮತ್ತು ನಿರ್ವಾಹಕರ ನೇಮಕಾತಿಗೆ ಆನ್‌ಲೈನ್‌ ಮೂಲಕ ಶೀಘ್ರ ಅರ್ಜಿ ಕರೆಯಲಾಗುವುದು’ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.

ಮೈಸೂರಿನಿಂದ ಮಂಡ್ಯಕ್ಕೆ ತೆರಳುವ ಮಾರ್ಗ ಮಧ್ಯೆ ಸೋಮವಾರ ಗಣಂಗೂರು ಬಳಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

‘ಭ್ರಷ್ಟಾಚಾರ ತಡೆಯುವ ಉದ್ದೇಶದಿಂದ ಅರ್ಹತೆ ಆಧರಿಸಿ ಚಾಲಕರು ಮತ್ತು ನಿರ್ವಾಹಕರನ್ನು ಆನ್‌ಲೈನ್‌ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು. ಸಾರಿಗೆ ನಿರೀಕ್ಷಕರ 120 ಹುದ್ದೆಗಳ ನೇಮಕಾತಿ ಪ್ರಕರಣ ನ್ಯಾಯಾಲಯದಲ್ಲಿದ್ದು, ಅದು ಮುಗಿಯುವವರೆಗೆ ಹೊಸ ಇನ್‌ಸ್ಪೆಕ್ಟರ್‌ಗಳ ನೇಮಕ ಪ್ರಕ್ರಿಯೆ ನಡೆಯುವುದಿಲ್ಲ’ ಎಂದು ತಿಳಿಸಿದರು.

‘ಬಸ್‌ಗಳ ಕೊರತೆ ನೀಗಲು 1,200 ಹೊಸ ಬಸ್‌ಗಳನ್ನು ಖರೀಸಲು ಉದ್ದೇಶಿಸಲಾಗಿದೆ. 11 ಲಕ್ಷ ಕಿ.ಮೀ. ದೂರ ಕ್ರಮಿಸಿರುವ 350ಕ್ಕೂ ಹೆಚ್ಚು ಹಳೆಯ ಬಸ್‌ಗಳನ್ನು ಸೇವೆಯಿಂದ ಈಗಾಗಲೇ ವಾಪಸ್‌ ಪಡೆಯಲಾಗಿದೆ. ಗ್ರಾಮೀಣ ಪ್ರದೇಶದ ರಸ್ತೆಗಳ ದುಃಸ್ಥಿತಿಯ ಕಾರಣಕ್ಕೆ ಬಸ್‌ಗಳು ಬೇಗ ಹಾಳಾಗುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಸ್ತೆಗಳ ಸುಧಾರಣೆ ಸಂಬಂಧ ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರ ಜತೆ ಚರ್ಚಿಸುತ್ತೇನೆ’ ಎಂದು ಹೇಳಿದರು.

‘ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡಬೇಕಾದರೆ ಶಿಕ್ಷಣ ಇಲಾಖೆ ಹಣ ತುಂಬಿಕೊಡಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಬಸ್‌ ಪಾಸ್‌ನ ಬಾಬ್ತು ಮಾತ್ರ ಇಲಾಖೆಗೆ ಬರುತ್ತದೆ. ಇತರ ವರ್ಗದ ವಿದ್ಯಾರ್ಥಿಗಳ ಪಾಲಿನ ಹಣ ಬರುತ್ತಿಲ್ಲ. ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್‌ ಪಾಸ್‌ ಒದಗಿಸುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಮೈಸೂರಿನ ಪಡುವಾರಹಳ್ಳಿಯ ವಿದ್ಯಾರ್ಥಿನಿಯೊಬ್ಬರು ಕೋರಿಕೆ ಸಲ್ಲಿಸಿದ ಒಂದೇ ದಿನದಲ್ಲಿ ಆ ಮಾರ್ಗದಲ್ಲಿ ಬಸ್‌ ಸೇವೆ ಕಲ್ಪಿಸಲಾಗಿದೆ. ಸಾರಿಗೆ ಇಲಾಖೆಗೆ ಸಂಬಂಧಿಸಿ ಯಾವುದೇ ದೂರು ಇದ್ದರೂ ಜನರು ನೇರವಾಗಿ ನನ್ನನ್ನು ಭೇಟಿ ಮಾಡಬಹುದು’ ಎಂದು ಸಚಿವರು ಹೇಳಿದರು.

‘ಮಂಡ್ಯ– ಮೈಸೂರು ನಡುವೆ ನಿಲುಗಡೆ ಬಸ್‌ ಓಡಿಸಲು ತಕ್ಷಣದಿಂದಲೇ ಕ್ರಮ ವಹಿಸುತ್ತೇನೆ’ ಎಂದ ಸಚಿವರು ಮಂಡ್ಯ ಜಿಲ್ಲಾ ಸಾರಿಗೆ ಕಂಟ್ರೋಲರ್‌ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕ್ರಮ ವಹಿಸುವಂತೆ ಸೂಚಿಸಿದರು. ‘ಸಾರಿಗೆ ಸಂಪರ್ಕ ಇಲ್ಲದ ಗ್ರಾಮಗಳಿಗೂ ಬಸ್‌ ಸಂಚಾರ ಆರಂಭಿಸಲಾಗುವುದು’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ರಾಮಕೃಷ್ಣ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಸ್‌.ಚಂದ್ರಶೇಖರ್‌, ಹೇಮಂತಕುಮಾರ್‌, ಜಿ.ಬಿ.ಮಂಜುನಾಥ್‌, ಕೃಷ್ಣ, ವಿಜಿ, ಕೃಷ್ಣಮೂರ್ತಿ, ರಾಮಚಂದ್ರು, ವಿ.ಮಹೇಶ್‌, ದೇವರಾಜು ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry