ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಗಾರ ವಿಳಂಬದ ಚಿಂತೆ ದೂರ!

ಪಂಚಾಯ್ತಿ ನೌಕರರಿಗೆ ಸರ್ಕಾರದ ನಿಧಿಯಿಂದಲೇ ವೇತನ; ₹ 129 ಕೋಟಿ ಬಿಡುಗಡೆ
Last Updated 19 ಜೂನ್ 2018, 10:54 IST
ಅಕ್ಷರ ಗಾತ್ರ

ಬಾಗಲಕೋಟೆ: ಗ್ರಾಮ ಪಂಚಾಯ್ತಿ ನೌಕರರಿಗೆ ಸಂತಸದ ಸುದ್ದಿ. ತಿಂಗಳ ಸಂಬಳಕ್ಕಾಗಿ ಇನ್ನು ಮುಂದೆ ಗ್ರಾಮ ಪಂಚಾಯ್ತಿಯ ಸಂಪನ್ಮೂಲ ಕ್ರೋಡೀ
ಕರಣ ಕಾಯುತ್ತಾ ಕುಳಿತುಕೊಳ್ಳವ ಅಗತ್ಯವಿಲ್ಲ. ಸರ್ಕಾರದ ನಿಧಿಯಿಂದಲೇ ನೇರವಾಗಿ ವೇತನ ದೊರೆಯಲಿದೆ. ಇನ್ನು 10 ದಿನಗಳಲ್ಲಿ ಅದು ಕಾರ್ಯರೂಪಕ್ಕೆ ಬರಲಿದೆ. ಪಂಚಾಯ್ತಿ ನೌಕರರ ವೇತನ ಪಾವತಿಗಾಗಿ ಹಣಕಾಸು ಇಲಾಖೆ, ಮೊದಲ ಹಂತದಲ್ಲಿ ₹ 129.88 ಕೋಟಿ ಬಿಡುಗಡೆ ಮಾಡಿದೆ.

ನೌಕರರಿಗೆ ತನ್ನ ನಿಧಿಯಿಂದಲೇ ವೇತನ ಪಾವತಿಸುವುದಾಗಿ 2017ರ ಅಕ್ಟೋಬರ್ 31ರಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಘೋಷಿಸಿತ್ತು. ಅದೀಗ ಮೂರ್ತ ರೂಪ ಪಡೆದಿದೆ. ಗ್ರಾಮ ಪಂಚಾಯ್ತಿಗಳಲ್ಲಿ ಕೆಲಸ ಮಾಡುವ ಬಿಲ್‌ ಕಲೆಕ್ಟರ್, ಕ್ಲರ್ಕ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ವಾಟರ್‌ಮನ್/ಪಂಪ್ ಆಪರೇಟರ್, ಪಂಪ್ ಮೆಕ್ಯಾನಿಕ್ ಹಾಗೂ ಸ್ವಚ್ಛತಾಗಾರರು ಇನ್ನು ಮುಂದೆ ಸರ್ಕಾರದ ನಿಧಿಯಿಂದ ವೇತನ ಪಡೆಯಲಿದ್ದಾರೆ. ಮಾರ್ಚ್ 2018ರಿಂದ ಅನ್ವಯವಾಗುವಂತೆ ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ವೇತನ ಈ ನೌಕರರಿಗೆ ಸಿಗಲಿದೆ.

ಪಂಚತಂತ್ರ ತಂತ್ರಾಂಶದ ನೆರವು: ಸರ್ಕಾರದ ನಿಧಿಯಿಂದ ವೇತನ ಪಡೆಯಲು ಅರ್ಹರಾದ ನೌಕರರ ಹೆಸರನ್ನು ಪಂಚತಂತ್ರ ತಂತ್ರಾಂಶ
ದಲ್ಲಿ ತುಂಬಿ ಅದಕ್ಕೆ ಆಯಾ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿಯಿಂದ ಅನುಮೋದನೆ ಪಡೆಯುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಸುತ್ತೋಲೆ ಹೊರಡಿಸಿದೆ. ಒಮ್ಮೆ ತಂತ್ರಾಂಶದಲ್ಲಿ ಹೆಸರು ಅನುಮೋದನೆಗೊಂಡಲ್ಲಿ ಆ ನೌಕರರು ವೇತನ ಪಡೆಯಲು ಅರ್ಹರಾಗುತ್ತಾರೆ.

ಗ್ರಾಚ್ಯುಟಿ, ತುಟ್ಟಿಭತ್ಯೆ: ಸರ್ಕಾರದ ನಿಧಿಯಿಂದ ವೇತನ ಪಡೆಯುವ ನೌಕರರು ಗ್ರಾಚ್ಯುಟಿ ಹಾಗೂ ತುಟ್ಟಿಭತ್ಯೆ ಪಡೆಯಲು ಅರ್ಹರಾಗುತ್ತಾರೆ. ನೌಕರ ತಾನು ಸಲ್ಲಿಸಿದ ಸೇವಾವಧಿಗೆ ಅನುಗುಣವಾಗಿ ಪ್ರತಿ ವರ್ಷ 15 ದಿನದ ವೇತನವನ್ನು ಗ್ರಾಚ್ಯುಟಿ ರೂಪದಲ್ಲಿ ಪಡೆಯಲಿದ್ದಾರೆ.

ಶೇ 100ರಷ್ಟು ಆದಾಯ ಬಳಕೆ: ‘ಈ ಹಿಂದೆ ಗ್ರಾಮ ಪಂಚಾಯ್ತಿಗಳಲ್ಲಿ ನೀರು ಪೂರೈಕೆ ಹಾಗೂ ಮನೆ, ಆಸ್ತಿಗಳಿಂದ ಸಂಗ್ರಹವಾಗುವ ತೆರಿಗೆಯ (ಕರ) ಶೇ 40ರಷ್ಟು ನೌಕರರ ವೇತನಕ್ಕೆ ಉಳಿದ ಶೇ 60ರಷ್ಟು ಗ್ರಾಮದ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತಿತ್ತು. ಕರ ಸಂಗ್ರಹಣೆ ವಿಳಂಬವಾದರೆ ನೌಕರರ ವೇತನ ನೀಡಿಕೆಯೂ ಕಷ್ಟವಾಗುತ್ತಿತ್ತು. ಕೆಲವು ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಕರ ಸಂಗ್ರಹವಾಗದೇ ನೌಕರರಿಗೆ ವೇತನ ಕೊಡುವುದು ಕಷ್ಟಕರವಾಗಿತ್ತು. ಸರ್ಕಾರದ ನಿಧಿಯಿಂದ ಇನ್ನು ವೇತನ ಭರಿಸುವುದರಿಂದ ನೌಕರರಿಗೆ ಆಗುತ್ತಿದ್ದ ತೊಂದರೆಯೂ ತಪ್ಪಲಿದೆ. ಸಂಗ್ರಹವಾಗುವ ಎಲ್ಲ ತೆರಿಗೆಯೂ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗಲಿದೆ’ ಎನ್ನುತ್ತಾರೆ ಬಾಗಲಕೋಟೆ ಜಿಲ್ಲಾ ಪಂಚಾಯ್ತಿಯ ಅಧಿಕಾರಿ ಎ.ಬಿ.ಯರನಾಳ. ‘ಬಾಗಲಕೋಟೆ ಜಿಲ್ಲೆಯ198 ಪಂಚಾಯ್ತಿಗಳಲ್ಲಿ 1500 ನೌಕರರು ಇದ್ದಾರೆ. ಅವರಲ್ಲಿ 1174 ಸಿಬ್ಬಂದಿಯ ಹೆಸರನ್ನು ಈಗಾಗಲೇ ಪಂಚತಂತ್ರಕ್ಕೆ ಅಳವಡಿಸಲಾಗಿದೆ. ಉಳಿದವರ
ಹೆಸರು ಪರಿಶೀಲನೆಯಲ್ಲಿದೆ. ಇನ್ನೊಂದು ವಾರದಲ್ಲಿ ಎಲ್ಲವೂ ಪರಿಹಾರವಾಗಲಿದೆ. ಅರ್ಹ ನೌಕರರು ವೇತನ ಪಡೆಯಲಿದ್ದಾರೆ’ ಎಂದು ಯರನಾಳ
ಹೇಳುತ್ತಾರೆ.

ಹಿಂದಿನ ವೇತನ ಪಾವತಿಸುವಂತಿಲ್ಲ: ಈಗ ಬಿಡುಗಡೆ ಮಾಡಿರುವ ಅನುದಾನವನ್ನು ಯಾವುದೇ ಕಾರಣಕ್ಕೂ ನೌಕರರ ಬಾಕಿ ಇರುವ ವೇತನ ನೀಡಲು ಬಳಕೆ ಮಾಡುವಂತಿಲ್ಲ. ಮಾರ್ಚ್ 1ರ ನಂತರದ ವೇತನ ಮಾತ್ರ ನೀಡತಕ್ಕದ್ದು, ಹಳೆಯ ಬಾಕಿಯನ್ನು ಪಂಚಾಯ್ತಿಯ ಸಂಪನ್ಮೂಲದಿಂದಲೇ ಕೊಡುವಂತೆ’ ಸೂಚಿಸಲಾಗಿದೆ.

ಕೆಲಸದಿಂದ ತೆಗೆದು ಹಾಕುವಂತಿಲ್ಲ...

ರಾಜ್ಯದ 6,024 ಗ್ರಾಮ ಪಂಚಾಯ್ತಿಗಳಲ್ಲಿ 50,114 ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ 35 ಸಾವಿರಕ್ಕೂ ಹೆಚ್ಚು ನೌಕರರ ನೇಮಕ 2014ರ ನವೆಂಬರ್‌ 10ರಂದು ಸಕ್ರಮಗೊಂಡಿದೆ. ಉಳಿದವರು ನಿಗದಿತ ವಿದ್ಯಾರ್ಹತೆ ಇಲ್ಲದಿರುವುದು, ಅಗತ್ಯಕ್ಕಿಂತ ಹೆಚ್ಚಿನ ನೇಮಕ, ಜನ್ಮದಿನಾಂಕ, ನಡಾವಳಿ ಇಲ್ಲದಿರುವುದು ಹಾಗೂ ಮಂಜೂರಾಗದೇ ಇರುವ ಹುದ್ದೆಗಳಿಗೆ ನೇಮಕಗೊಂಡಿದ್ದಾರೆ. ಹಾಗಾಗಿ ಅವರ ಹುದ್ದೆ ಸಕ್ರಮಗೊಂಡಿಲ್ಲ. ಇಂತಹ ನೌಕರರನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆದುಹಾಕುವಂತಿಲ್ಲ ಎಂದು ಸರ್ಕಾರದ ಸುತ್ತೋಲೆ ಸ್ಪಷ್ಟಪಡಿಸಿದೆ.

ಪಂಚತಂತ್ರ ತಂತ್ರಾಂಶದಲ್ಲಿ ಸೇರ್ಪಡೆಯಾಗದ ಈ ನೌಕರರಿಗೆ ಮೊದಲಿನಂತೆ ಗ್ರಾಮ ಪಂಚಾಯ್ತಿಯ ಸಂಪನ್ಮೂಲ ಕ್ರೋಡೀಕರಿಸಿ ಸ್ವಂತ ಬಾಬ್ತಿನಿಂದಲೇ ವೇತನ ನೀಡುವಂತೆ ತಿಳಿಸಲಾಗಿದೆ.

ಹುತಾತ್ಮ ಯೋಧರ ಸ್ಮರಣೆಗೆ ಸೂಚನೆ

ಯುವಜನರಲ್ಲಿ ದೇಶಪ್ರೇಮ ಜಾಗೃತಿಗೊಳಿಸಿ ರಾಷ್ಟ್ರನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ಸರ್ಕಾರ ಗ್ರಾಮ ಪಂಚಾಯ್ತಿಗಳಿಗೂ ಹೊಣೆಗಾರಿಗೆ ನಿಗದಿಪಡಿಸಿದೆ. ಜನವರಿ 26ರಂದು ಗಣರಾಜ್ಯೋತ್ಸವ, ಜನವರಿ 30ರ ಹುತಾತ್ಮರ ದಿನ ಹಾಗೂ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ್ಯ ಯೋಧರು ಹಾಗೂ ವೀರ ಮರಣವನ್ನಪ್ಪಿದ ಸೇನೆಯ ಯೋಧರನ್ನು ಗುರುತಿಸಿ ಅವರ ತ್ಯಾಗ, ಬಲಿದಾನವನ್ನು ಸ್ಮರಿಸುವಂತೆ ಸೂಚಿಸಿದೆ. ಆ ದಿನ ವೀರ ಯೋಧರ ಕುಟುಂಬದವರನ್ನು ಕರೆದು ಗೌರವಿಸುವಂತೆ ಗ್ರಾಮ ಪಂಚಾಯ್ತಿಗಳಿಗೆ ಸರ್ಕಾರ ಸುತ್ತೋಲೆ ಕಳುಹಿಸಿದೆ.

ಗ್ರಾಮ ಪಂಚಾಯ್ತಿಗಳಲ್ಲಿ ಕರ ಸಂಗ್ರಹಣೆ ಬಹಳ ಕಷ್ಟ. ಇದರಿಂದ ನೌಕರರಿಗೆ ಆರು, ಏಳು ತಿಂಗಳಿಗೊಮ್ಮೆ ವೇತನ ಸಿಕ್ಕು ಕುಟುಂಬ ನಿರ್ವಹಣೆ ಕಷ್ಟಕರವಾಗಿತ್ತು. ಸರ್ಕಾರದ ಈ ತೀರ್ಮಾನ ಸ್ವಾಗತಾರ್ಹ
ವೀಣಾ ಕಾಶಪ್ಪನವರ, ಬಾಗಲಕೋಟೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT