ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಕ್ಕಾಗಿ ಅಭ್ಯರ್ಥಿಗಳ ಬರಿಗಾಲ ಓಟ!

ಪಿಎಸ್ಐ. ಅರಣ್ಯ ವೀಕ್ಷಕ ಹುದ್ದೆಗಳ ದೈಹಿಕ ಕ್ಷಮತೆ ಪರೀಕ್ಷೆ; ಮೊದಲ ಸುತ್ತಿನಲ್ಲೇ ಸುಸ್ತು
Last Updated 19 ಜೂನ್ 2018, 11:07 IST
ಅಕ್ಷರ ಗಾತ್ರ

ಬಳ್ಳಾರಿ: ಪಿಎಸ್‌ಐ ಮತ್ತು ಅರಣ್ಯ ವೀಕ್ಷಕರ ಹುದ್ದೆಗಳ ಭರ್ತಿಗಾಗಿ ನಗರದ ಎರಡು ಕಡೆ ಸೋಮವಾರ ನಡೆದ ದೈಹಿಕ ಕ್ಷಮತೆ ಪರೀಕ್ಷೆಯಲ್ಲಿ ಪಾಲ್ಗೊಂಡ ಬಹುತೇಕ ಅಭ್ಯರ್ಥಿಗಳು ಮೊದಲ ಅರ್ಹತೆಯ ಓಟದ ಸ್ಪರ್ಧೆಯಲ್ಲಿ ಬರಿಗಾಲಿನಲ್ಲೇ ಓಡಿ ಗಮನ ಸೆಳೆದರು. ವಿಶೇಷ ಎಂದರೆ ಬರಿಗಾಲಿನಲ್ಲಿ ಓಡಿದ ಕೆಲವರು ಶೂ ಧರಿಸಿ ಓಡಿದವರನ್ನೂ ಹಿಂದಿಕ್ಕಿದ್ದರು.

ಬರಿಗಾಲಿನಲ್ಲಿ ಓಡಿದ ಬಹುತೇಕರು ಮೊದಲ ಸುತ್ತಿನಲ್ಲೇ ಸುಸ್ತಾದರು. ನಂತರದ ಸ್ಪರ್ಧೆಗಳಿಗೆ ಅರ್ಹತೆ ಪಡೆಯುವಲ್ಲಿಯೂ ವಿಫಲರಾದರು. ಶೂಗಳನ್ನು ಕಡ್ಡಾಯವಾಗಿ ಧರಿಸಿ ಬರಬೇಕು ಎಂಬ ಸೂಚನೆಯನ್ನು ಹಲವರು ನಿರ್ಲಕ್ಷ್ಯಿಸಿದ್ದರು.

ಅರಣ್ಯ ವೀಕ್ಷಕ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅರಣ್ಯ ವೀಕ್ಷಕರ ಹುದ್ದೆಯ ಪರೀಕ್ಷೆಗೆ ಬಳ್ಳಾರಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಸುಮಾರು 400 ಅಭ್ಯರ್ಥಿಗಳು ಪಾಲ್ಗೊಂಡಿದ್ದರು.

ಪುರುಷ ಅಭ್ಯರ್ಥಿಗಳು 1600 ಮೀಟರ್‌ ದೂರವನ್ನು ಏಳು ನಿಮಿಷಗಳ ಅವಧಿಯಲ್ಲಿ, ಮಹಿಳೆಯರು ಮತ್ತು ಮಾಜಿ ಸೈನಿಕರು 1000 ಮೀಟರ್‌ ದೂರವನ್ನು ಆರು ನಿಮಿಷಗಳ ಅವಧಿಯಲ್ಲಿ ಕ್ರಮಿಸಬೇಕಾಗಿತ್ತು. ಈ ಸ್ಪರ್ಧೆಯಲ್ಲಿ ವಿಜೇತರಾದವರು ಮಾತ್ರ ಎರಡನೇ ಹಂತದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅವಕಾಶವಿತ್ತು.

ಬೆಳಿಗ್ಗೆ 7.30ರ ವೇಳೆಗೆ ಆರಂಭವಾದ ಮೊದಲ ಹಂತದ ಪರೀಕ್ಷೆಯಲ್ಲಿ ಮೊದಲು ಪಾಲ್ಗೊಂಡ ಮಹಿಳೆಯರಲ್ಲಿ ಹಲವರು ಅರ್ಧ ದೂರವನ್ನೂ ಕ್ರಮಿಸಲಾಗದೆ ಸ್ಪರ್ಧೆ ಯಿಂದ ಹಿಂದೆ ಸರಿದರು. ಅವರಲ್ಲಿ ಬಹುತೇಕರು ಬರಿಗಾಲಿನಲ್ಲೇ ಓಡಿದರು.

ಪಿಎಸ್‌ಐ: ಪಿಎಸ್‌ಐ ಹುದ್ದೆಗಳ ಭರ್ತಿಗಾಗಿ ನಗರದ ವಿಮ್ಸ್‌ ಮೈದಾನದಲ್ಲಿ ನಡೆದ ದೈಹಿಕ ಕ್ಷಮತೆ ಪರೀಕ್ಷೆಯ ಓಟದ ಸ್ಪರ್ಧೆಯಲ್ಲೂ ಬಹಳಷ್ಟು ಅಭ್ಯರ್ಥಿಗಳು ಬರಿಗಾಲಿನಲ್ಲೇ ಓಡಿದ್ದು ಗಮನ ಸೆಳೆಯಿತು.

ಕೌಶಲ ಕಲಿಯದೇ ವಯಸ್ಸಾಯಿತು: ‘ಓಟದ ಕೌಶಲವನ್ನು ಕಲಿಯದೇ ಇವರಿಗೆಲ್ಲ ವಯಸ್ಸಾಯಿತು. ಇದು ದುರಂತ’ ಎಂದು ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ಅಭಿಪ್ರಾಯಪಟ್ಟರು.

‘ಪ್ರಾಥಮಿಕ ತಿಳಿವಳಿಕೆ ಇಲ್ಲದೆ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಹಾಜರಾಗಿರುವುದನ್ನು ನೋಡಿದರೆ ದೈಹಿಕ ಕ್ಷಮತೆಗೆ ನಮ್ಮ ಶಾಲೆ–ಕಾಲೇಜುಗಳಲ್ಲಿ ದಕ್ಕಿರುವ ಆದ್ಯತೆ ಎಷ್ಟರ ಮಟ್ಟಿನದು ಎಂದು ಗೊತ್ತಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬರಿಗಾಲಿನಲ್ಲಿ ಮತ್ತು ಅಭ್ಯಾಸವಿಲ್ಲದೆ ಓಡುವುದು ಕಷ್ಟ. ಮನೋಬಲವಿದ್ದರೆ ಮಾತ್ರ ಓಡಿ ನಿಗದಿತ ಸಮಯದಲ್ಲಿ ಗುರಿ ಮುಟ್ಟಬಹುದು
ಕೆ.ಎನ್‌.ರಾಮಸ್ವಾಮಿ, ಜಿಲ್ಲಾ ಅಥ್ಲೆಟಿಕ್ಸ್‌ ತರಬೇತುದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT