ರೈತರ ಸಾಲ ಮನ್ನಾಕ್ಕೆ ಆಗ್ರಹ

7
ಜಿಲ್ಲೆಯ ರೈತರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ರೈತರ ಸಾಲ ಮನ್ನಾಕ್ಕೆ ಆಗ್ರಹ

Published:
Updated:
ರೈತರ ಸಾಲ ಮನ್ನಾಕ್ಕೆ ಆಗ್ರಹ

ಬೀದರ್: ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಹಾಗೂ ಕಬ್ಬಿನ ಬಾಕಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸದ ಸ್ಯರು ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ರಾಜ್ಯ ವಿಧಾನಸಭೆ ಚುನಾವಣೆಯ ಪೂರ್ವದಲ್ಲಿ ಜೆಡಿಎಸ್ ಹಿರಿಯ ಮುಖಂಡರು ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯ ಪುನರಾರಂಭಕ್ಕೆ ಆರ್ಥಿಕ ನೆರವು ಒದಗಿಸುವ ಭರವಸೆ ನೀಡಿದ್ದರು. ಎಚ್‌.ಡಿ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗಿರುವ ಕಾರಣ ಕಾರ್ಖಾನೆ ಆರಂಭವಾಗುವ ಆಸೆ ಚಿಗುರೊಡೆದಿದೆ. ಜೆಡಿಎಸ್‌–ಕಾಂಗ್ರೆಸ್‌ ಸರ್ಕಾರ ಆದಷ್ಟು ಬೇಗ ಕಾರ್ಖಾನೆ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕುಮಾರಸ್ವಾಮಿ ಅವರು ಚುನಾವಣೆಗೆ ಮುನ್ನ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದರು. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಉಳಿದ ರಾಜಕಾರಣಿಗಳಂತೆ ನಾನು ಇಲ್ಲ ಎನ್ನುವುದನ್ನು ಸಾಬೀತು ಪಡಿಸಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ರಾಜ್ಯದ ರೈತ ಮುಖಂಡರ ಸಭೆ ಕರೆದು ಸಾಲ ಮನ್ನಾಕ್ಕೆ 15 ದಿನಗಳ ಕಾಲಾವಕಾಶ ಕೇಳಿದ್ದರು. ಪರಮೇಶ್ವರ ಅವರೂ ಇದಕ್ಕೆ ಒಪ್ಪಿಗೆ ಸೂಚಿಸಿದ್ದರು. ಈಗ ಸಮನ್ವಯ ಸಮಿತಿ ಸಭೆಯ ಹೆಸರಲ್ಲಿ ಸಾಲ ಮನ್ನಾಕ್ಕೆ ಹಿಂದೇಟು ಹಾಕುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಜನತೆ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ತಿರಸ್ಕರಿಸಿದ್ದಾರೆ. ಕುಮಾರಸ್ವಾಮಿಯವರು ವಿವೇಚನೆಯಿಂದ ನಿರ್ಧಾರ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.

ಬಿಎಸ್‌ಎಸ್‌ಕೆ ಆಡಳಿತ ಮಂಡಳಿಯು ಕಬ್ಬು ಪೂರೈಸಿದ ರೈತರಿಗೆ ಹಣ ಪಾವತಿಸಿಲ್ಲ. ಹೀಗಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಜಿಲ್ಲಾ ಆಡಳಿತ ಮಧ್ಯ ಪ್ರವೇಶಿಸಿ ರೈತರ ಬಾಕಿ ಹಣ ಕೊಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಶ್ರೀಮಂತ ಬಿರಾದಾರ, ಸಿದ್ರಾಮಪ್ಪ ಆಣದೂರೆ, ಮಲ್ಲಯ್ಯ ಸ್ವಾಮಿ, ಸೋಮನಾಥ ಏಣಕೂರ, ಖಾಸಿಂ ಅಲಿ, ವೈಜಿನಾಥ ನೌಬಾದೆ, ವೈಜಿ ನಾಥ ಬುಯ್ಯಾ, ಅಮೃತಪ್ಪ ಎಂ.ಡಿ, ದಯಾನಂದ ಸ್ವಾಮಿ, ಶಿವಾ ನಂದ ಹುಡಗಿ, ಕಾಶೀನಾಥ ನಿಡೋದಾ, ಜೋರಗೆಪ್ಪ ಜೋಜನಾ, ರಮೇಶ ಖಾನಾಪುರ, ಬಸವರಾಜ ಗಡಿ ಕುಶನೂರ್, ಶೋಭಾವತಿ ಕಾರಭಾರಿ, ಪ್ರಭಾವತಿ ಸ್ವಾಮಿ ಪ್ರಕಾಶಬಾವಗೆ, ಶಾಮಣ್ಣ ಬಾವಗಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !