ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹದೇಶ್ವರನ ಮೇಲಾಣೆ, ತಪ್ಪು ಮಾಡಿಲ್ಲ’

ಸಚಿವ ಸಿ.ಪುಟ್ಟರಂಗಶೆಟ್ಟಿಗೆ ಅಭಿನಂದನೆ ಮತ್ತು ಕೃತಜ್ಞತಾ ಸಭೆ
Last Updated 19 ಜೂನ್ 2018, 11:25 IST
ಅಕ್ಷರ ಗಾತ್ರ

ಚಾಮರಾಜನಗರ: ‘ಸಚಿವ ಸ್ಥಾನಕ್ಕೆ ಪೈಪೋಟಿ ಬರಬಹುದು ಎಂದು ಕಾರಣದಿಂದ ಬೇರೆ ಕ್ಷೇತ್ರದಲ್ಲಿ ಉಪ್ಪಾರ ಸಮುದಾಯದವರ ಮತಗಳನ್ನು ಕಾಂಗ್ರೆಸ್‌ಗೆ ಹಾಕಿಸಿಲ್ಲ ಎಂಬ ಆಪಾದನೆ ನನ್ನ ಮೇಲೆ ಇದೆ. ಆದರೆ, ಮಲೆಮಹದೇಶ್ವರನ ಮೇಲೆ ಆಣೆ ಮಾಡಿ ಹೇಳುತ್ತೇನೆ. ನಾನು ಅಂತಹ ಕೆಲಸ ಮಾಡಿಲ್ಲ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ. ಪುಟ್ಟರಂಗಶೆಟ್ಟಿ ಸೋಮವಾರ ಇಲ್ಲಿ ಸ್ಪಷ್ಟಪಡಿಸಿದರು.

ಚಾಮರಾಜನಗರ ಗ್ರಾಮಾಂತರ ಮತ್ತು ಚಾಮರಾಜನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿಗಳು ಪಟ್ಟಣದ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ಅಭಿನಂದನಾ ಮತ್ತು ಕೃತಜ್ಞತಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಾನು ನೇರ ನುಡಿಗೆ ಬದ್ಧನಾಗಿರುವವನು. ಎ.ಆರ್‌.ಕೃಷ್ಣಮೂರ್ತಿ ಒಬ್ಬರು ಬಿಟ್ಟರೆ, ಬೇರೆ ಯಾವ ಕ್ಷೇತ್ರದವರೂ ನನ್ನನ್ನು ಪ್ರಚಾರಕ್ಕೆ ಕರೆದಿರಲಿಲ್ಲ. ಕೊಳ್ಳೇಗಾಲದಲ್ಲಿ ಮತಗಳಿಕೆಯಲ್ಲಿ ಸ್ವಲ್ವ ವ್ಯತ್ಯಾಸ ಆಗಬಹುದು ಎಂಬುದರ ಅರಿವಿತ್ತು. ಹೋದರೆ ತೊಂದರೆ ಆಗಬಹುದು ಎಂಬ ಕಾರಣಕ್ಕೆ ಹೋಗಲಿಲ್ಲ’ ಎಂದು ಹೇಳಿದರು.

ಮತದಾರರೇ ದೇವರು: ‘2008ರಲ್ಲಿ ಅಂದಿನ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮುಖಂಡ ಸಿದ್ದರಾಮಯ್ಯ ಹಾಗೂ ಧ್ರುವನಾರಾಯಣ ಸೇರಿ ನನಗೆ ಟೆಕೆಟ್‌ ಕೊಟ್ಟರು. ಆ ಚುನಾವಣೆಯಲ್ಲಿ ಗೆದ್ದೆ. ಬಿಜೆಪಿ ಅಧಿಕಾರದಲ್ಲಿದ್ದರೂ, ಸಿಕ್ಕ ಅನುದಾನವನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಸಿದೆ. 2013ರಲ್ಲಿ ಮತ್ತೆ ಗೆದ್ದೆ. ನಮ್ಮದೇ ಸರ್ಕಾರ ಬಂತು. ಅನುದಾನವೂ ಸಿಕ್ಕಿತು. ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿದ್ದನ್ನು ನೀವೇ ನೋಡುತ್ತಿದ್ದೀರಿ’ ಎಂದರು.

‘ಮುಖ್ಯಮಂತ್ರಿ ಆದವರು ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಮೂಢನಂಬಿಕೆಯನ್ನು ಸಿದ್ದರಾಮಯ್ಯ ಅವರು ತೊಡೆದು ಹಾಕಿದರು. ಅವರೊಂದಿಗೆ ಸಚಿವರೂ ಬಂದರು. ಇಲ್ಲಿ ಮೂರನೇ ಬಾರಿ ಯಾರೂ ಗೆಲ್ಲುವುದಿಲ್ಲ. ಗೆದ್ದರೂ ಅಧಿಕಾರಕ್ಕೆ ಬರುವುದಿಲ್ಲ ಎಂಬ ನಂಬಿಕೆಯನ್ನು ಚಾಮರಾಜೇಶ್ವರ ಮತ್ತೆ ಸುಳ್ಳು ಮಾಡಿದ. ನಾನು ಮತ್ತೆ ಗೆದ್ದೆ. ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿದೆ. ನಾನು ಮಂತ್ರಿಯೂ ಆದೆ’ ಎಂದರು.

‘ಶಾಸಕ ಆಗುತ್ತೇನೆ ಎಂದು ನಾನು ಕನಸು ಮನಸಿನಲ್ಲಿಯೂ ಅಂದು ಕೊಂಡಿರಲಿಲ್ಲ. ಶಾಸಕ ಆದೆ, ಸಚಿವ ಸ್ಥಾನದ ಕನಸು ಕಂಡಿರಲಿಲ್ಲ. ಈಗ ನೀವು ಆ ಕನಸನ್ನೂ ಈಡೇರಿಸಿದ್ದೀರಿ.  ಕ್ಷೇತ್ರದ ಮತದಾರರಾದ ನಿ‌ಮ್ಮನ್ನು ನಾನು ಯಾವತ್ತೂ ಮರೆಯುವುದಿಲ್ಲ. ನನ್ನ ವಂಶದವರೂ ಮರೆಯುವುದಿಲ್ಲ. ನೀವೆಲ್ಲಾ ನನಗೆ ದೇವರು. ಮತದಾರ ದೇವರು ಇಲ್ಲದಿದ್ದರೆ ರಾಜಕಾರಣಿಗಳು ಯಾರೂ ಇರಲು ಸಾಧ್ಯವಿಲ್ಲ’ ಎಂದು ಪುಟ್ಟರಂಗಶೆಟ್ಟಿ  ಭಾವುಕರಾಗಿ ನುಡಿದರು.

ಸಮಾರಂಭ ಉದ್ಘಾಟಿಸಿದ ಸಂಸದ ಆರ್‌. ಧ್ರುವನಾರಾಯಣ, ‘ಪುಟ್ಟರಂಗ ಶೆಟ್ಟಿ ಅವರು ಈ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ಉಪ್ಪಾರ ಸಮುದಾಯಕ್ಕೆ ಸೇರಿದವರೊಬ್ಬರು ಮಂತ್ರಿ ಆದ ನಿದರ್ಶನ ರಾಜ್ಯದ ಇತಿಹಾಸದಲ್ಲಿ ಇಲ್ಲ’ ಎಂದರು.

‘ರಾಜ್ಯದಲ್ಲಿ ಶೇ 65ರಿಂದ ಶೇ 75ರಷ್ಟು ಹಿಂದುಳಿದ ವರ್ಗಗಳ ಜನರೇ ಇದ್ದಾರೆ. ಹಿಂದುಳಿದ ಸಮುದಾಯದಿಂದ ಬಂದಿರುವಂತಹ ಪುಟ್ಟರಂಗಶೆಟ್ಟಿ ಅವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯೇ ಸಿಕ್ಕಿದೆ. ತಳ ಸಮುದಾಯದಿಂದ ಬಂದ ಅವರಿಗೆ ಸಹಕಾರ ಕ್ಷೇತ್ರದ ಅನುಭವವಿದೆ’ ಎಂದರು.

ಎ‌ಚ್‌.ಡಿ. ಕೋಟೆ ಶಾಸಕ ಅನಿಲ್‌ಕುಮಾರ್‌ ಸಿ., ಮುಖಂಡರಾದ ಎ.ಆರ್‌.ಕೃಷ್ಣಮೂರ್ತಿ, ಬಾಲರಾಜು, ಜಯಣ್ಣ ಅವರು ಮಾತನಾಡಿ ನೂತನ ಸಚಿವರಿಗೆ ಶುಭಹಾರೈಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಕೃಷ್ಣ, ಹಿರಿಯ ಮುಖಂಡ ಎ. ಸಿದ್ದರಾಜು, ಚಾಮರಾಜನಗರ ವಿಧಾನಸಭಾ ಕ್ಷೇತ್ರ ಉಸ್ತುವಾರಿ ಡಾ.ಪುಷ್ಪಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ, ನಗರಸಭೆ ಅಧ್ಯಕ್ಷೆ ಶೋಭಾ, ಎಪಿಎಂಸಿ ಅಧ್ಯಕ್ಷ ಬಿ.ಕೆ. ರವಿಕುಮಾರ್‌, ನಗರಸಭೆ ಉಪಾಧ್ಯಕ್ಷ ಎಂ. ರಾಜಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಲತಾ ಜಯಣ್ಣ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ, ಮುಖಂಡರಾದ ಉಮೇಶ್‌, ಸೈಯದ್‌ರಫಿ, ಸುಹೇಲ್‌ ಆಲಿ ಖಾನ್‌ ಇದ್ದರು.

‘ಉಪ್ಪಾರರು ಕಾಂಗ್ರೆಸ್‌ಗೆ ಮತ ಹಾಕಬೇಕು’

‘ನಾನು ಸಚಿವನಾ ಗಲು ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ಆರ್‌. ಧ್ರುವನಾರಾಯಣ ಅವರು ಕಾರಣೀಭೂತರು. ‌ಉಪ್ಪಾರ ಸಮುದಾಯದವರಿಗೆ ಸ್ಮರಣೆ, ನಿಯತ್ತು ಇದ್ದರೆ ಅವರು ಕಾಂಗ್ರೆಸ್‌ಗೇ ಮತ ಹಾಕಬೇಕು’ ಎಂದು ಪುಟ್ಟರಂಗಶೆಟ್ಟಿ ಹೇಳಿದರು. ಉಪ್ಪಾರ ಸಮುದಾಯದವು ರಾಜಕೀಯವಾಗಿ ಸ್ಥಾನಮಾನ ಪಡೆದಿದ್ದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಎಂದು ಅವರು ಹೇಳಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿರುವ ಸಿ.ಪುಟ್ಟರಂಗಶೆಟ್ಟಿ ಅವರಿಗೆ ತುಂಬಾ ಜವಾಬ್ದಾರಿ ಇದೆ. ಸಮಾಜದ ಏಳಿಗೆಗೆ ಶ್ರಮಿಸುವ ಜೊತೆಗೆ ಅವರಿಗೆಲ್ಲ ನ್ಯಾಯ ಒದಗಿಸುತ್ತಾರೆ ಎಂಬ ವಿಶ್ವಾಸ ಇದೆ
- ಆರ್‌. ಧ್ರುವನಾರಾಯಣ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT