ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸಜ್ಜಿತ ತಾಲ್ಲೂಕು ಕಚೇರಿ ನಿರ್ಮಾಣ

ಶಾಸಕ ಮೊದಲ ಜನತಾ ದರ್ಶನದಲ್ಲಿ ಸಮಸ್ಯೆಗಳ ಮಹಾಪೂರ, ಅನೇಕ ದೂರಿಗೆ ಸ್ಥಳದಲ್ಲೇ ಪರಿಹಾರ, ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ
Last Updated 19 ಜೂನ್ 2018, 11:38 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ನಗರದ ವ್ಯಾಪ್ತಿಯಲ್ಲಿ ನಾಲ್ಕು ಎಕರೆ ಸ್ಥಳದಲ್ಲಿ ಸುಸಜ್ಜಿತವಾದ ತಾಲ್ಲೂಕು ಕಚೇರಿ ಕಟ್ಟಡ ನಿರ್ಮಿಸಿ, ತಾಲೂಕು ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಒಂದೇ ಸೂರಿನಡಿ ಕಾರ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಡಾ.ಕೆ.ಸುಧಾಕರ್ ಭರವಸೆ ನೀಡಿದರು.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಿಲ್ಲಾ ಕೇಂದ್ರದಲ್ಲಿ ಮಿನಿ ವಿಧಾನಸೌಧ ಕಟ್ಟಡವನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಉಪ ವಿಭಾಗಾಧಿಕಾರಿಗಳ ಕಚೇರಿ, ತಾಲ್ಲೂಕು ಕಚೇರಿ, ಶಾಸಕರ ಕಚೇರಿಗೆ ಸರಿಯಾದ ಸ್ಥಳಾವಕಾಶವಿಲ್ಲ. ಹೀಗಾಗಿ ಎಲ್ಲ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇವತ್ತಿನ ದಿನಗಳಲ್ಲಿ ಒಂದೇ ಸೂರಿನಡಿ ಎಲ್ಲ ಇಲಾಖೆಗಳು ಕಾರ್ಯನಿರ್ವಹಿಸಲು ಸುಸಜ್ಜಿತ ಕಟ್ಟಡ ನಿರ್ಮಾಣದ ಅವಶ್ಯಕತೆ ಇದೆ’ ಎಂದು ತಿಳಿಸಿದರು.

‘ಎಲ್ಲ ಇಲಾಖೆಯ ಅಧಿಕಾರಿಗಳು ಜನರ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸುವ ಜತೆಗೆ ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ಸಕಾಲಕ್ಕೆ ತಲುಪಿಸಬೇಕು. ಇದರಿಂದ ಸಾರ್ವಜನಿಕರ ದಿನ ನಿತ್ಯ ಸರ್ಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ’ ಎಂದು ಹೇಳಿದರು.

ದೂರುಗಳ ಮಹಾಪೂರ:

ಜನತಾ ದರ್ಶನದಲ್ಲಿ ಸಾರ್ವಜನಿಕರು ಮಾಸಾಶನ ಸಮಸ್ಯೆ, ಸ್ಮಶಾನ ಮತ್ತು ರಾಜ ಕಾಲುವೆ ಒತ್ತುವರಿ, ಪೋಡಿ, ಪಹಣಿ ವಿತರಣೆ, ಖಾತೆ ತಿದ್ದುಪಡಿ, ಬಗರ್‌ ಹುಕ್ಕುಂ ಸಾಗುವಳಿ ಚೀಟಿ ವಿತರಣೆ ವಿಳಂಬ ಸೇರಿದಂತೆ ಅನೇಕ ಸುಮಾರು 70ಕ್ಕೂ ಅಧಿಕ ಅಹವಾಲುಗಳು ಶಾಸಕರಿಗೆ ಕೇಳಿ ಬಂದವು.

ತಾಲ್ಲೂಕಿನ ಅಂಗರೇಖನಹಳ್ಳಿ ನಿವಾಸಿಗಳಾದ ಎ.ಎಂ.ಮಂಜುನಾಥ್, ಕೃಷ್ಣಪ್ಪ ಅವರು, ‘ಗ್ರಾಮದಲ್ಲಿ ನೂರಾರು ಹಸುಗಳಿವೆ. ಅವುಗಳಿಗೆ ರೋಗ ಕಾಣಿಸಿಕೊಂಡರೆ ರೈತರು 8 ಕಿ.ಮೀ. ದೂರದ ದಿಬ್ಬೂರು ಆಸ್ಪತ್ರೆ, 13 ಕಿ.ಮೀ. ದೂರವಿರುವ ಚಿಕ್ಕಬಳ್ಳಾಪುರಕ್ಕೆ ಅಲೆದಾಡಬೇಕಿದೆ. ಆದ್ದರಿಂದ ಗ್ರಾಮಕ್ಕೆ ಪಶು ವೈದ್ಯಕೀಯ ಆಸ್ಪತ್ರೆ ಮಂಜೂರು ಮಾಡಬೇಕು. ಜತೆಗೆ ಸಮರ್ಪಕ ಬಸ್ ಸೌಲಭ್ಯವನ್ನು ಒದಗಿಸಬೇಕು’ ಎಂದು ಶಾಸಕರಿಗೆ ಮನವಿ ಮಾಡಿದರು.

ತಮ್ಮನಾಯಕನಹಳ್ಳಿ ಎಂ.ವೆಂಕಟೇಶ್, ಸಿ.ಜಿ.ದೇವರಾಜ್ ಅವರು, ‘ಗ್ರಾಮದ ಸರ್ವೆ ನಂಬರ್‌ 22ರಲ್ಲಿ ಇರುವ ಜಮೀನಿನಲ್ಲಿ ನಿವೇಶನ ರಹಿತರಿಗೆ ನಿವೇಶನ ವಿತರಿಸಲು ಕ್ರಮಕೈಗೊಳ್ಳಬೇಕು’ ಎಂದು ಬೇಡಿಕೆ ಸಲ್ಲಿಸಿದರು.

‘ಎರಡು ವರ್ಷಗಳಿಂದ ವಿಧವಾ ವೇತನ ಸಿಗುತ್ತಿಲ್ಲ. ಅನೇಕ ಸಲ ಕಚೇರಿಗಳಿಗೆ ಅಲೆದಾಡಿ ಅಧಿಕಾರಿಗಳನ್ನು ವಿಚಾರಿಸಿದರೆ, ಬೇರೆ ಬೇರೆ ಸಬೂಬು ಹೇಳಿ ಕಳುಹಿಸುತ್ತಿದ್ದಾರೆ ವಿನಾ ಪ್ರಯೋಜನವಾಗಿಲ್ಲ’ ಎಂದು ಬಾಪೂಜಿ ನಗರದ ಪದ್ಮಮ್ಮ ಅಳಲು ತೋಡಿಕೊಂಡರು.

ಈ ವೇಳೆ ಮಾತನಾಡಿದ ತಹಶೀಲ್ದಾರ್ ನರಸಿಂಹಮೂರ್ತಿ, ‘ಬೆಂಗಳೂರು ಕೇಂದ್ರ ಕಚೇರಿಯಲ್ಲಿ ತಾಂತ್ರಿಕ ದೋಷದಿಂದ ಅನೇಕ ಫಲಾನುಭವಿಗಳ ಮಾಸಾಶನ ಸ್ಥಗಿತಗೊಂಡಿದೆ. ಶೀಘ್ರದಲ್ಲೇ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಕಾರ್ಯ ನಿರ್ವಹಣಾಧಿಕಾರಿ ಕೆ.ಪಿ.ಸಂಜೀವಪ್ಪ, ನಗರಸಭೆ ಅಧ್ಯಕ್ಷ ಎಂ.ಮುನಿಕೃಷ್ಣ, ಪೌರಾಯುಕ್ತ ಉಮಾಕಾಂತ್, ಮಾಜಿ ಶಾಸಕ ಎಂ.ಶಿವಾನಂದ್, ಮುಖಂಡರಾದ ಕೆ.ವಿ.ನಾಗರಾಜ್, ಮರಳುಕುಂಟೆ ಕೃಷ್ಣಮೂರ್ತಿ ಇದ್ದರು.

ಕಾಲುವೆ ಒತ್ತುವರಿ ತೆರವಿಗೆ ಸೂಚನೆ

ಸಾರ್ವಜನಿಕರೊಬ್ಬರು, ‘ನಗರದಲ್ಲಿ ಪ್ರಭಾವಿ ವ್ಯಕ್ತಿಗಳು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ಕಟ್ಟಿದ ಪರಿಣಾಮ ಮಳೆ ನೀರು ಅಲ್ಲಲ್ಲಿ ಮಡುಗಟ್ಟಿ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನುಗ್ಗಿ ಜನಸಾಮಾನ್ಯರಿಗೆ, ಬಡವರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಕಾಲುವೆಗಳ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಿ’ ಎಂದು ಮನವಿ ಸಲ್ಲಿಸಿದರು.

ಆಗ ಶಾಸಕರು ನಗರಸಭೆ ಆಯುಕ್ತ ಉಮಾಕಾಂತ್ ಅವರನ್ನು ಉದ್ದೇಶಿಸಿ, ‘ನಗರದಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಕಾಂಪ್ಲೆಕ್ಸ್‌ಗಳನ್ನು ಕಟ್ಟುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿದ್ದೀರಾ? ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡವರು ಎಷ್ಟೇ ಭಲಾಢ್ಯರಾದರೂ ಸರಿ ಕೂಡಲೇ ಒತ್ತುವರಿಯನ್ನು ಸಮರೋಪಾದಿಯಲ್ಲಿ ತೆರವುಗೊಳಿಸಿ’ ಎಂದು ಸೂಚಿಸಿದರು.

ಇನ್ನು ಮುಂದೆ ವಾರಕ್ಕೆ ಮೂರು ದಿನ ಕ್ಷೇತ್ರದಲ್ಲಿಯೇ ಇದ್ದು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತ, ಆದಷ್ಟು ಬೇಗ ಪರಿಹಾರ ಒದಗಿಸಿ ಕೊಡುವ ಕೆಲಸ ಮಾಡುವೆ
- ಡಾ.ಕೆ.ಸುಧಾಕರ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT