‘ಸರ್ಕಾರಿ ಶಾಲೆ ಅಭಿವೃದ್ಧಿಗೆ ಅಳಿಲು ಸೇವೆ’

7
ಶಿಕ್ಷಣ ಖಾಸಗೀಕರಣದ ವಿರುದ್ಧ ಪ್ರಕಾಶ್‌ ರೈ ಆಕ್ರೋಶ; ಮಕ್ಕಳು, ಗ್ರಾಮಸ್ಥರೊಂದಿಗೆ ಶೈಕ್ಷಣಿಕ ಸಂವಾದ

‘ಸರ್ಕಾರಿ ಶಾಲೆ ಅಭಿವೃದ್ಧಿಗೆ ಅಳಿಲು ಸೇವೆ’

Published:
Updated:
‘ಸರ್ಕಾರಿ ಶಾಲೆ ಅಭಿವೃದ್ಧಿಗೆ ಅಳಿಲು ಸೇವೆ’

ಗೌರಿಬಿದನೂರು: 'ಸರ್ಕಾರಿ ಶಾಲೆ ದತ್ತು ತೆಗೆದುಕೊಳ್ಳೋಕೆ ನಾನ್ಯಾರು? ನಾನು ಕೇವಲ ನನ್ನ ಕೈಲಾದ ಅಳಿಲು ಸೇವೆಯನ್ನಷ್ಟೇ ಮಾಡುತ್ತಿದ್ದೇನೆ' ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು.

ಸೋಮವಾರ ತಾಲ್ಲೂಕಿನ ನಂಜಯ್ಯಗಾರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಗೆದರೆ ಸರ್ಕಾರಿ ಪ್ರೌಢಶಾಲೆ ಶಾಲೆಗೆ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು.

'ಪ್ರಕಾಶ್ ರೈ ಸರ್ಕಾರಿ ಶಾಲೆಗಳನ್ನ ದತ್ತು ತೆಗೆದುಕೊಳ್ತಾರೆ ಅನ್ನೋದು ಮಾರ್ಖತನದ ಮಾತು. ಯಾರಪ್ಪನ ಆಸ್ತಿಯನ್ನು ಯಾರು ದತ್ತು ತೆಗೆದುಕೊಳ್ಳೋದು? ಇದು ದತ್ತು ತೆಗೆದುಕೊಳ್ಳುವ ವಿಚಾರ ಅಲ್ಲ’ ಎಂದು ತಿಳಿಸಿದರು.

‘ಈಗಾಗಲೇ ಹಲವು ಶಿಕ್ಷಕರು, ಸಂಘ ಸಂಸ್ಥೆಗಳ ಪ್ರಮುಖರು ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡಿದ್ದಾರೆ. ಅವರ ಕೆಲಸಕ್ಕೆ ನಾನು ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತೇನೆ. ನನ್ನಿಂದ ಆಗುವ ಅಳಿಲು ಸೇವೆ ಮಾಡಲು ಬಂದಿದ್ದೇನೆ' ಎಂದರು.

'ಶಿಕ್ಷಣ ಎಲ್ಲರ ಹಕ್ಕು, ಪ್ರತಿ ಮಗುವಿಗೂ ಶಿಕ್ಷಣ ಸಿಗಬೇಕು. ಆದರೆ ಇತ್ತೀಚೆಗೆ ಶಿಕ್ಷಣ ವ್ಯವಸ್ಥೆ ಸಂಪೂರ್ಣ ವ್ಯಾಪಾರೀಕರಣವಾಗಿದೆ. ಇದರಿಂದ ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಆಗಲಿದೆ ಎಂಬ ಅಸಮಾಧಾನ ನನ್ನನ್ನು ಕಾಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟದ ಕೊರತೆ ಕಾಣುತ್ತಿದೆ. ಮಕ್ಕಳಿಗೆ ಸಾಮಾಜಿಕವಾಗಿ ನ್ಯಾಯಯುತ ಶಿಕ್ಷಣದ ಅವಶ್ಯಕತೆಯಿದೆ. ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಕನ್ನಡದ ಉಳಿವಿಗಾಗಿ ಶ್ರಮಿಸಲು ಸದಾ ಸಿದ್ಧನಿದ್ದೇನೆ’ ಎಂದು ಹೇಳಿದರು.

ತರಗತಿಯಲ್ಲಿ ವಿದ್ಯಾರ್ಥಿಗಳ ಜೊತೆ ಕುಳಿತು ಕೆಲಕಾಲ ಸಂವಾದ ನಡೆಸಿದರು. ತಮ್ಮ ಬರವಣಿಗೆಯ ಶೈಲಿ ಮತ್ತು ಓದುವ ಪರಿ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ನಂತರ ಶಾಲಾ ಕೊಠಡಿಯ ಒಳಗಿನ ವ್ಯವಸ್ಥೆ ಮತ್ತು ಸೌಲಭ್ಯಗಳನ್ನು ಗಮನಿಸಿದರು. ಪೋಷಕರೊಡನೆ ಸರ್ಕಾರಿ ಶಾಲೆಗಳ ಸ್ಥಿತಿಗತಿ ಮತ್ತು ಸ್ಥಳೀಯರ ಸಹಕಾರದ ಬಗ್ಗೆಯೂ ಚರ್ಚಿಸಿದರು.

ಕಾರ್ಯಕ್ರಮದ ನಂತರ ಪ್ರಕಾಶ್‌ ರೈ ಅವರು ಡಾ.ಎಚ್. ನರಸಿಂಹಯ್ಯ ಸಮಾಧಿ 'ಅಮರಧಾಮ'ಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಮಾತನಾಡಿ, ' ಆಧುನಿಕ ಜಗತ್ತಿನಲ್ಲಿ ಶಿಕ್ಷಣ ವ್ಯವಸ್ಥೆ ಉಳಿಸಬೇಕಾದರೆ ಸರ್ಕಾರಿ ಶಾಲೆಗಳ ಸಬಲೀಕರಣ ಅನಿವಾರ್ಯವಾಗಿದೆ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಸ್ಥಳೀಯ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕರಿಸಬೇಕು. ಶಿಕ್ಷಕರ ಜೊತೆಗೆ ಪೋಷಕರೂ ಕೈಜೋಡಿಸಿ ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ನೆರವಾಗಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಪ್ರಕಾಶ್, ಮುಖಂಡ ಕೆ.ಎನ್.ಕೇಶವರೆಡ್ಡಿ, ಮಂಜುನಾಥ್, ಜಿ.ಸಿ.ಸತೀಶ್, ನಾಗೇಶ್, ನಾಗರಾಜು, ಜಿ.ಸಿ.ರಾಮಚಂದ್ರಯ್ಯ, ಜಿ.ಬಾಲಾಜಿ ಭಾಗವಹಿಸಿದ್ದರು.

ಅಪವಾದ ಹೊರಿಸುವುದು ಸಲ್ಲ

ಪತ್ರಕರ್ತೆ ಗೌರಿ ಲಂಕೇಶ್‌ ಹಂತಕರ ತನಿಖೆ ಅಂತಿಮ ಹಂತದಲ್ಲಿದೆ. ಎಸ್‌ಐಟಿ ನಡೆಸುತ್ತಿರುವ ತನಿಖೆ ಪೂರ್ಣಗೊಂಡ ನಂತರ ಸತ್ಯ ಹೊರಬರಲಿದೆ. ತಪ್ಪಿತಸ್ಥರು ಯಾರು ಎಂಬುದು ಗೊತ್ತಾಗಲಿದೆ. ಅಲ್ಲಿಯವರೆಗೆ ಯಾರ ಮೇಲೂ ಅಪವಾದ ಹೊರಿಸುವುದು ಸರಿಯಲ್ಲ ಎಂದು ನಟ ಪ್ರಕಾಶ್‌ ರೈ ಹೇಳಿದರು.

‘ಸ್ವತಃ ಎಸ್‍ಐಟಿಯೇ ಒಂದು ಸಂಸ್ಥೆಯ ಮೇಲೆ ಸಂಶಯ ವ್ಯಕ್ತಪಡಿಸಿದೆ. ಆದರೆ ನಾನು ಯಾರ ಮೇಲೂ ಆರೋಪ ಮಾಡುವುದಿಲ್ಲ. ತನಿಖೆ ಮುಗಿಯಲಿ ಅಂತಿಮವಾಗಿ ಸತ್ಯ ತಿಳಿದು ಹಂತಕ ಯಾರು? ಏಕೆ ಹತ್ಯೆ ಮಾಡಿದ್ದಾರೆ ಅಂತ ಗೊತ್ತಾಗಲಿದೆ. ಸಮಾಜದಲ್ಲಿ ಮುಂದೆ ಗೌರಿಯಂತೆ ಮತ್ತೊಂದು ಹತ್ಯೆ ಆಗದಂತೆ ಯೋಚನೆ ಮಾಡಬೇಕು’ ಎಂದು ಸಲಹೆ ನೀಡಿದರು.

ಗುಣಮಟ್ಟದ ಶಿಕ್ಷಣ ಜೊತೆಗೆ ಸಬಲೀಕರಣದಿಂದ ಸರ್ಕಾರಿ ಶಾಲೆಗಳನ್ನು ಉಳಿಸಲು ಸಾಧ್ಯವಿದೆ. ಇದಕ್ಕೆ ಸರ್ಕಾರದ ಜೊತೆ ಪಾಲಕರು, ಸಂಘ ಸಂಸ್ಥೆಗಳ ಸಹಭಾಗಿತ್ವ ಅಗತ್ಯ

- ಪ್ರಕಾಶ್‌ ರೈ, ಚಲನಚಿತ್ರ ನಟ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !