ಬಿಸಿಯೂಟಕ್ಕೂ ನೀರಿಲ್ಲದೆ ಪರದಾಟ

7
ಚನ್ನಬಸಯ್ಯನಹಟ್ಟಿ ಶಾಲೆಯಲ್ಲಿ ಸಮಸ್ಯೆಗಳದ್ದೆ ಕಾರುಬಾರು

ಬಿಸಿಯೂಟಕ್ಕೂ ನೀರಿಲ್ಲದೆ ಪರದಾಟ

Published:
Updated:
ಬಿಸಿಯೂಟಕ್ಕೂ ನೀರಿಲ್ಲದೆ ಪರದಾಟ

ನಾಯಕನಹಟ್ಟಿ: ಈ ಶಾಲೆಯಲ್ಲಿ ಬಿಸಿಯೂಟ ತಯಾರಿಕೆಗೂ ನೀರಿಲ್ಲ. ಶಿಕ್ಷಕರೇ ಕೊಡಗಳನ್ನು ಹಿಡಿದು ನೀರು ತರಬೇಕು.ಪಟ್ಟಣದ ವ್ಯಾಪ್ತಿಯ ಚನ್ನಬಸಯ್ಯನಹಟ್ಟಿ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಪರಿಸ್ಥಿತಿ ಇದು.

ನಾಯಕನಹಟ್ಟಿ ಪಟ್ಟಣದ ಸಮೀಪದಲ್ಲೇ ಇರುವ ಪುಟ್ಟಗ್ರಾಮದ ಮಧ್ಯಭಾಗದಲ್ಲಿ ರಾಜ್ಯ ಹೆದ್ದಾರಿ 45 ಹಾದುಹೋಗಿದೆ. ಈ ಶಾಲೆಯಲ್ಲಿ 1ರಿಂದ 8ನೇ ತರಗತಿಯವರೆಗೂ 160ಕ್ಕೂ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಿದ್ದು, ಶಾಲೆಯಲ್ಲಿ ಕ್ರಿಯಾಶೀಲ ಶಿಕ್ಷಕ ಬಳಗವಿದೆ. ಕಲಿಕೆಗೆ ಬೇಕಾದ ಪೂರಕ ವಾತವರಣವಿದ್ದರೂ ಶಾಲೆಗೆ ಬೇಕಾದ ಅಗತ್ಯ ಮೂಲಸೌಕರ್ಯಗಳ ಕೊರತೆ ಇದೆ. ಸುಸಜ್ಜಿತವಾದ ಅಡುಗೆಕೋಣೆ, ಆಧುನಿಕ ಅಡುಗೆ ತಯಾರಿಕೆಯ ಸಾಮಗ್ರಿಗಳಿವೆ ಹಾಗೂ ಕುಡಿಯುವ ನೀರಿಗೆ ಪ್ರತ್ಯೇಕ ನಳದ ವ್ಯವಸ್ಥೆಯಿದೆ. ಆದರೆ ನಳದಲ್ಲಿ ನೀರಿಲ್ಲ.

ಸ್ಥಳೀಯ ಆಡಳಿತ ವೈಫಲ್ಯ:

ಶಾಲೆಯ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರ ಬಳಿ ಹಲವು ಬಾರಿ ಚರ್ಚಿಸಿದರೂ ಪ್ರಯೋಜನವಾಗಿಲ್ಲ. ನೀರು ಸರಬರಾಜು ಮಾಡುವಲ್ಲಿ ಪಟ್ಟಣ ಪಂಚಾಯಿತಿ ವಿಫಲವಾಗಿದೆ. ಶಾಲೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುತ್ತಾರೆ. ನೀರಿಲ್ಲದ ವೇಳೆ ಅನೇಕ ಬಾರಿ ಮಕ್ಕಳೇ ರಾಜ್ಯ ಹೆದ್ದಾರಿಯನ್ನು ದಾಟಿ ಗ್ರಾಮದಿಂದ ನೀರು ಹೊತ್ತುತಂದು ಬಿಸಿಯೂಟಕ್ಕೆ ನೀಡಿದ್ದಾರೆ. ಇದನ್ನು ಗ್ರಾಮಸ್ಥರು ವಿರೋಧಿಸಿದಾಗ ಅನಿವಾರ್ಯವಾಗಿ ಶಿಕ್ಷಕರೇ ಕೊಡಗಳನ್ನು ತೆಗೆದುಕೊಂಡು ಹೋಗಿ ಗ್ರಾಮದ ಮಧ್ಯಭಾಗದಲ್ಲಿರುವ ಟ್ಯಾಂಕರ್‌ನಿಂದ ನೀರು ತಂದು ಅಡುಗೆಗೆ ನೀಡಿದ್ದಾರೆ.

ಶಿಕ್ಷಕರ ಈ ಕಾಳಜಿಯನ್ನು ಮೆಚ್ಚಬೇಕೋ ಅಥವಾ ಸ್ಥಳಿಯ ಆಡಳಿತ ವೈಫಲ್ಯವನ್ನು ಪ್ರತಿಭಟಿಸಬೇಕೋ ಒಂದೂ ತಿಳಿಯುತ್ತಿಲ್ಲ ಎನ್ನುತ್ತಾರೆ ಗ್ರಾಮದ ಡಿ.ಬಿ. ಬೋಸಯ್ಯ.

ಶಾಲೆಗೆ ಅಭಿವೃದ್ಧಿ ಸಮಿತಿಯೇ ಇಲ್ಲ:

ರಾಜ್ಯದಲ್ಲಿರುವ ಪ್ರತಿಯೊಂದು ಸರ್ಕಾರಿ ಶಾಲೆಗೂ ಸ್ಥಳೀಯವಾಗಿ ಶಾಲಾ ಅಭಿವೃದ್ಧಿ ಸಮಿತಿಗಳು ಅಸ್ತಿತ್ವದಲ್ಲಿರುತ್ತವೆ. ಆದರೆ

ಈ ಶಾಲೆಗೆ ನಾಲ್ಕು ವರ್ಷಗಳಿಂದಲೂ ಶಾಲಾ ಅಭಿವೃದ್ಧಿ ಸಮಿತಿಯೇ ಇಲ್ಲ. ಇದರಿಂದ ಶಾಲೆಯ ಕುಂದುಕೊರತೆಗಳನ್ನು ವಿಚಾರಿಸುವವರೇ ಇಲ್ಲದಂತಾಗಿದೆ.

‘ರಾತ್ರಿ ವೇಳೆ ಕಿಟಕಿಗಳನ್ನು ಒಡೆಯುವುದು, ಬೋಧನಾ ಕೊಠಡಿ ಗಳೊಳಗೆ ತ್ಯಾಜ್ಯ ಬಿಸಾಡುವುದು. ಅಕ್ರಮ ಚಟುವಟಿಕೆ ನಡೆಯುವುದರಿಂದ ಮಕ್ಕಳ ಕಲಿಕಾ ಪ್ರಕ್ರಿಯೆಗೆ ಸಮಸ್ಯೆಯಾಗಿದೆ’ ಎಂದು ಶಾಲೆಯ ಶಿಕ್ಷಕರು ಅಳಲು ತೋಡಿಕೊಂಡರು. ಹಲವು ಬಾರಿ ಶಾಲಾ ಅಭಿವೃದ್ಧಿ ಸಮಿತಿ ರಚನೆಗೆ ಗ್ರಾಮಸ್ಥರಿಗೆ ಮನವಿಪತ್ರ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ.

ಸಂಬಂಧಪಟ್ಟ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿಸಮರ್ಪಕವಾಗಿ ನೀರು ಸರಬರಾಜು ಮಾಡುವಂತೆ ಶಿಕ್ಷಕರು ಒತ್ತಾಯಿಸಿದ್ದಾರೆ.

ವಿ. ಧನಂಜಯ ನಾಯಕನಹಟ್ಟಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !