ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹ

ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘ, ಹಸಿರುಸೇನೆ ಪ್ರತಿಭಟನೆ
Last Updated 19 ಜೂನ್ 2018, 12:57 IST
ಅಕ್ಷರ ಗಾತ್ರ

ಹಾಸನ : ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಅತ್ಯಂತ ಸಂಕಷ್ಟ ಸ್ಥಿತಿಯಲ್ಲಿರುವ ರೈತರಿಗೆ ರಾಜ್ಯ ಸರ್ಕಾರ ನೆರವಾಗಬೇಕು. ಸತತ ನಾಲ್ಕು ವರ್ಷಗಳ ತೀವ್ರ ಬರಗಾಲದಿಂದ ಅನ್ನದಾತರ ಸ್ಥಿತಿ ಚಿಂತಾಜನಕವಾಗಿದೆ. ಕೃಷಿಗಾಗಿ ಮಾಡಿದ ಸಾಲ ಹೆಚ್ಚಿದ್ದು, ಬ್ಯಾಂಕ್ ಗಳಿಂದ ನೋಟಿಸ್ ನೀಡಲಾಗುತ್ತಿದೆ. ನಿತ್ಯ ಜೀವನ ಸಾಗಿಸುವುದೇ ದುಸ್ತರವಾಗಿರುವಾಗ ಸಾಲ ಮರುಪಾವತಿ ಕಷ್ಟವಾಗುತ್ತಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.

ರಾಜ್ಯದ ಸಮ್ಮಿಶ್ರ ಸರ್ಕಾರ ರೈತರ ಎಲ್ಲಾ ರೀತಿಯ ಸಾಲವನ್ನು ಕೂಡಲೇ ಮನ್ನಾ ಮಾಡಿ ಹೊಸ ಸಾಲ ವಿತರಣೆಗೆ ಕ್ರಮ ಕೈಗೊಳ್ಳಬೇಕು. ತಂಬಾಕು ಬೆಳೆಗಾರರಿಗೆ ಪರವಾನಗಿ ನವೀಕರಣಕ್ಕಾಗಿ ನಿಗದಿಪಡಿಸಿರುವ ₹ 4,500 ಶುಲ್ಕ ರದ್ದುಪಡಿಸಬೇಕು. ಜಿಲ್ಲೆಯ ಆಲೂಗೆಡ್ಡೆ, ತರಕಾರಿ ಸೇರಿದಂತೆ ಎಲ್ಲ ಬೆಲೆಗಳು ಅಧಿಕ ಮಳೆಯಿಂದ ನಾಶ ಹೊಂದಿದ್ದು, ಬೆಳೆ ಹಾನಿ ಸಮೀಕ್ಷೆ ನಡೆಸಿ ರೈತರಿಗೆ ತಕ್ಷಣವೇ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಕಳೆದ ವರ್ಷ ದೃಢಿಕೃತ ಆಲೂಗೆಡ್ಡೆ ಬೀಜ ಖರೀದಿಸಿದ್ದ ರೈತರಿಗೆ ಇಲ್ಲಿವರೆಗೆ ವಿಮೆ ಪಾವತಿಸಿಲ್ಲ. ಬೆಳೆಗಾರರಿಗೆ ಮಾಹಿತಿ ನೀಡುವಲ್ಲಿ ತೋಟಗಾರಿಕೆ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಆಗ್ರಹಿಸಿದರು.

ತಾಲ್ಲೂಕಿನ ಸೋಮನಹಳ್ಳಿ ಕಾವಲಿನಲ್ಲಿರುವ ಆಲೂಗಡ್ಡೆ ಸಂಶೋಧನಾ ಘಟಕ ಸಂಪೂರ್ಣ ನಿಷ್ಕ್ರಿಯವಾಗಿದ್ದು, ಅದನ್ನು ಸದೃಢಗೊಳಿಸಿದರೆ ಹಾಸನದಲ್ಲಿಯೇ ಬಿತ್ತನೆ ಆಲೂಗೆಡ್ಡೆ ಪಡೆಯಬಹುದು. ಇದರಿಂದ ಹೊರ ರಾಜ್ಯದ ಅವಲಂಬನೆ ಕಡಿಮೆಯಾಗುತ್ತದೆ. ಆದರೆ, ಈ ಸಂಬಂಧ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಹೇಮಾವತಿ ಜಲಾಶಯದಿಂದ ನದಿಗೆ ನಿಗದಿಗಿಂತ ಅಧಿಕ ನೀರು ಬಿಡಲಾಗುತ್ತಿದ್ದು, ಇದನ್ನು ಸರಿಪಡಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಕೊಟ್ಟೂರು ಶ್ರೀನಿವಾಸ್, ಮುಖಂಡರಾದ ಬಳ್ಳೂರು ಸ್ವಾಮಿಗೌಡ, ಎಚ್.ಕೆ.ರಘು, ರಾಮಸ್ವಾಮಿ, ನಿಂಗೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT