ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಣಸಿನಕಾಯಿ ಬೆಳೆ ಕಿತ್ತು ಹಾಕಿದರು!

ಹೊಸೂರ ಯತ್ನಹಳ್ಳಿ ಗ್ರಾಮದಲ್ಲಿ ಕಾಯಿ ಬಿಡಲಿಲ್ಲ ದುಬಾರಿ ಜಿ4 ತಳಿ
Last Updated 19 ಜೂನ್ 2018, 13:13 IST
ಅಕ್ಷರ ಗಾತ್ರ

ಶಿಗ್ಗಾವಿ: ಉತ್ತಮ ಫಲ ಬರುವ ನಿರೀಕ್ಷೆಯಿಂದ ಬೀಜ ಗೊಬ್ಬರಕ್ಕಾಗಿ ಸಾಲಸೋಲ ಮಾಡಿ ಬಿತ್ತನೆ ಮಾಡಿರುವ ಮೆಣಸಿನಕಾಯಿ ಬೆಳೆ ಫಲ ನೀಡದ್ದರಿಂದ ತಾಲ್ಲೂಕಿನ ಹೊಸೂರಯತ್ನಹಳ್ಳಿ ಗ್ರಾಮದ ಅನೇಕ ರೈತರು ಮೆಣಸಿನಕಾಯಿ ಬೆಳೆಯನ್ನೇ ಟ್ರ್ಯಾಕ್ಟರ್‌ ಮೂಲಕ ನಾಶ ಪಡಿಸಿದರು.

ಮೂರು ತಿಂಗಳ ಹಿಂದೆ ಬಿತ್ತನೆ ಮಾಡಿರುವ ಜಿ4 ತಳಿಯ ಮೆಣಸಿನಕಾಯಿ ಬೀಜವನ್ನು ಇಲ್ಲಿನ ರೈತರು ಬಿತ್ತನೆ ಮಾಡಿದ್ದಾರೆ. ಚಂದಾಪುರ ಏಜೆಂಟರಾದ ಮುತ್ತನಗೌಡ ಪಾಟೀಲ, ಮಲ್ಲೇಶ ಅರ್ಕಸಾಲಿ ಎಂಬುವವರು ಕುಷ್ಟಗಿ ಮೂಲದಿಂದ ಮೆಣಸಿನಕಾಯಿ ಬೀಜ ವಿತರಣೆ ಮಾಡಿದ್ದಾರೆ. ಪ್ರತಿ ಕೆ.ಜಿಗೆ ₹ 10 ಸಾವಿರ ಹಣ ನೀಡಿದ್ದಾರೆ. ಹೀಗೆ ಸುಮಾರು 15ರಿಂದ 20 ಎಕರೆ ಭೂಮಿಯಲ್ಲಿ ಈ ಬೀಜ ಬಿತ್ತಿದ್ದಾರೆ. ಬೀಜ ಬಿತ್ತನೆ ಮಾಡಿರುವ ಸಂದರ್ಭದಲ್ಲಿ ಉತ್ತಮವಾಗಿ ಬೆಳೆದು ನಿಂತಿವೆ.

ಅದರಿಂದ ಉತ್ತಮ ಫಲ ಬರಲಿದೆ ಎಂಬ ಬಹು ನಿರೀಕ್ಷೆಯಲ್ಲಿ ರೈತರು ಗೊಬ್ಬರ, ನೀರು ಹಾಯಿಸಿದ್ದಾರೆ. ಆದರೆ ಬೆಳೆದು ನಿಂತಿರುವ ಮೆಣಸಿನಕಾಯಿ ಗಿಡದಲ್ಲಿ ಹೂಕಾಯಿ ಬಿಟ್ಟಿಲ್ಲ. ಪ್ರತಿ ಗಿಡಕ್ಕೆ ಕನಿಷ್ಠ 60ರಿಂದ 70ಕಾಯಿ ಬಿಡಬೇಕಾಗಿತ್ತು. ಆದರೆ ಬರೀ 8ರಿಂದ10ಕಾಯಿಗಳಿವೆ. ಅವು ಸಹ ಸದೃಢವಾಗಿಲ್ಲ. ಇದ್ದ ಕಾಯಿಗಳು ಸಂಪೂರ್ಣ ಕಪ್ಪುಗಾಗಿವೆ. ಅದರಿಂದ ಇಡೀ ರೈತ ಸಮೂಹವೇ ಕಂಗಾಲಾಗಿದ್ದಾರೆ. ಮುಂದೆ ಏನು ಮಾಡಬೇಕು ಎಂಬುವುದು ತಿಳಿಯದಾಗಿದೆ’ ಎಂದು ರೈತ ಚಂದ್ರಗೌಡ ಪಾಟೀಲ ಅಳಲು ವ್ಯಕ್ತಪಡಿಸಿದರು.

ಹೊಸೂರಯತ್ನಹಳ್ಳಿ ಗ್ರಾಮದಲ್ಲಿನ ರೈತರಾದ ಚನ್ನಬಸನಗೌಡ ಪಾಟೀಲ, ಬಸನಗೌಡ ಪಾಟೀಲ, ಅಶೋಕ ತಟ್ಟಿ, ಲಕ್ಷ್ಮಣ ಕಠಾರಿ, ಫಕ್ಕೀರಗೌಡ ಪಾಟೀಲ, ನಾಗಪ್ಪ ಕುಲಕರ್ಣಿ, ವೀರಪ್ಪ ಸುಣಗಾರ, ಧರ್ಮಪ್ಪ ಶ್ಯಾಬಳ, ಮಹೇಶ ಸುಣಗಾರ, ಈರಪ್ಪ ಅವಕ್ಕನವರ, ಮುತ್ತಪ್ಪ ವೀರಾಪುರ, ಬಾಹುಬಲಿ ವೀರಾಪುರ ಸೇರಿದಂತೆ ಅನೇಕ ರೈತರು ಈ ಬೀಜ ಬಿತ್ತಿ ಫಲವಿಲ್ಲದೇ ಆತಂಕಕ್ಕೆ ಸಿಲುಕಿದ್ದಾರೆ.
ಕಳಪೆ ಬೀಜ ವಿತರಿಸಿದ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬಂಕಾಪುರ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ತಹಶೀಲ್ದಾರರಿಗೆ, ಕೃಷಿ ಅಧಿಕಾರಿಗಳಿಗೆ ಮೌಖಿಕವಾಗಿ ವಿಷಯ ತಿಳಿಸಲಾಗಿದೆ. ಆದರೆ ಈವರೆಗೆ ಯಾವುದೇ ಅಧಿಕಾರಿಗಳು ಬಂದು ಭೇಟಿ ನೀಡಿ ಪರಿಶೀಲನೆ ಮಾಡಿಲ್ಲ. ಬಿತ್ತನೆ ಮಾಡಿರುವ ಬೆಳೆ ಸಂಪೂರ್ಣವಾಗಿ ಕೈಕೊಟ್ಟಿರುವ ಕಾರಣ. ಕುಟುಂಬ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಬಿತ್ತನೆಗೆ ಮಾಡಿರುವ ಖರ್ಚು ವೆಚ್ಚದ ಹಣವೂ ಬರದಂತಾಗಿದೆ. ಮತ್ತೆ ಬೀಜಗೊಬ್ಬರ ಖರೀದಿಗೆ ಸಾಲ ಮಾಡಲೆಬೇಕಾದ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಬೆಳೆದು ನಿಂತಿರುವ ಮೆಣಸಿಕಾಯಿ ಗಿಡಗಳನ್ನು ಕಿತ್ತು ಹಾಕಿ ಪರ್ಯಾಯ ಬೆಳೆ ಬೆಳೆಯಲು ಮುಂದಾಗಿದ್ದೇವೆ ಎಂದು ರೈತ ಆಶೋಕ ತಟ್ಟಿ ಹೇಳಿದರು.

ಮೆಣಸಿನಕಾಯಿ ಬೆಳೆಹಾನಿಯಾದ ಹೊಲಗಳಿಗೆ ಭೇಟಿ ನೀಡಿ ತಕ್ಷಣ ಪರಿಶೀಲನೆ ಮಾಡಿ ರೈತರಿಗೆ ಪರಿಹಾರಧನ ವಿತರಿಸಲು ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ
ವಿ.ಕೆ. ಶಿವಲಿಂಗಪ್ಪ, ಕೃಷಿ ಸಹಾಯಕ ನಿರ್ದೇಶಕ, ಶಿಗ್ಗಾವಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT