ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕಲ್ಪಕ್ಕೆ ಕಾದಿರುವ ಮೇಡ್ಲೇರಿ ಕೆರೆ

Last Updated 19 ಜೂನ್ 2018, 13:17 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಸತತ ಬರದಿಂದ ಬತ್ತಿ ಹೋಗಿದ್ದ ತಾಲ್ಲೂಕಿನ ನೆಲದಲ್ಲಿ ಈ ಬಾರಿಯ ಮುಂಗಾರು ಜೀವಕಳೆ ಮೂಡಿಸಿದೆ. ನಿರಂತರ ಮಳೆಯಿಂದ ತಾಲ್ಲೂಕಿನ ಮೇಡ್ಲೇರಿ, ಅಸುಂಡಿ, ಸುಣಕಲ್ಲಬಿದರಿ, ಆರೆಮಲ್ಲಾಪುರ, ಗುಡಗೂರ, ಹೊನ್ನತ್ತಿ ಕೆರೆ ಕಟ್ಟೆಗಳಿಗೆ ಅಲ್ಪ ಪ್ರಮಾಣದಲ್ಲಿ ನೀರು ಬಂದಿದೆ. ತಾಲ್ಲೂಕಿನ ಜನತೆಗೆ ಹರ್ಷ ತಂದಿದೆ.

ತಾಲ್ಲೂಕಿನ ಮೇಡ್ಲೇರಿ ದೊಡ್ಡ ಕೆರೆಯು ಈ ಭಾಗದ ರೈತರ ಜೀವನಾಡಿಯಾಗಿದೆ. ಇಲ್ಲಿನ ಕೆರೆ ತುಂಬಿದರೆ ಸುತ್ತಲಿನ ಗ್ರಾಮಗಳ ಕೊಳವೆಬಾವಿಗಳ ಅಂತರ್ಜಲ ಹೆಚ್ಚಾಗಿ ಕುಡಿಯುವ ನೀರಿನ ಅಭಾವ ಕಡಿಮೆಯಾಗುತ್ತದೆ.

ಗ್ರಾಮದ ದೊಡ್ಡ ಕೆರೆಯ ಅಚ್ಚುಕಟ್ಟು ಪ್ರದೇಶವು ಸುಮಾರು 110 ಹೆಕ್ಟೇರ್‌ ಇದೆ. ಈ ಪೈಕಿ ನೀರು ನಿಲ್ಲುವ ಪ್ರದೇಶವು 68.45 ಹೆಕ್ಟೇರ್ ಇದೆ. ಕೆರೆಯಲ್ಲಿ ನೀರು ಸಂಗ್ರಹವಾಗುವ ಸಾಮರ್ಥ್ಯ 61.60 ಎಂಸಿಎಫ್‌ಟಿ ಇದೆ. ಕೆರೆಯ ಉದ್ದ 700 ಮೀಟರ್‌ಗಳಿದ್ದು, ನೀರಾವರಿ ಕ್ಷೇತ್ರವವು 219 ಹೆಕ್ಟೇರ್‌ ಇದೆ. ಕೆರೆಯ ಸುತ್ತಲೂ ನೀಲಗಿರಿ ನೆಡು ತೋಪಿನ ಅರಣ್ಯವಿದೆ. ಒಂದಿಷ್ಟು ಒತ್ತುವರಿಯಾಗಿದೆ.

ಹಿಂದಿನ ಶಾಸಕರ (ಕೆ.ಬಿ. ಕೋಳಿವಾಡ) ಅವಧಿಯಲ್ಲಿ ತುಂಗಾ ಮೇಲ್ದಂಡೆ ಯೋಜನೆ (ಯುಟಿಪಿ) ಕಾಲುವೆ ಮೂಲಕ ತಾಲ್ಲೂಕಿನ ಕೆರೆಗಳನ್ನು ತುಂಬಿಸಲಾಗಿತ್ತು. ಅದರಲ್ಲಿ ಮೇಡ್ಲೇರಿ ಕೆರೆಯೂ ಒಂದು ಎನ್ನುತ್ತಾರೆ ಮೆಡ್ಲೇರಿ ಎಪಿಎಂಸಿ ನಾಮನಿರ್ದೇಶಿತ ಸದಸ್ಯ ಗಣೇಶ ಬಿಲ್ಲಾಳ.

ಕೆರೆಗೆ ಯುಟಿಪಿ, ಯಕ್ಲಾಸಪುರ ಏತನೀರಾವರಿ ಮತ್ತು ಗುಡ್ಡದ ಮೇಲಿಂದ ಮಳೆ ನೀರು ಹರಿದು ಬರುತ್ತದೆ. ರೈತರು ನೀರಾವರಿಗೂ ಬಳಸುವುದು ಕಡಿಮೆ. ಕೆರೆಯಲ್ಲಿ ನೀರು ತುಂಬಿ ಅಂತರ್ಜಲ ಹೆಚ್ಚಳವಾಗಿದೆ. ಸಣ್ಣ ನೀರಾವರಿ ಇಲಾಖೆಯಿಂದ ₹ 19 ಲಕ್ಷ ಹಣ ಖರ್ಚು ಮಾಡಿ ಹೂಳು ತೆಗೆಸಲಾಗಿದೆ. ಕೆರೆ ನೀರು ಕಡಿಮೆಯಾದ ಮೇಲೆ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗುವುದು ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ವಿನಾಯಕ ಪವಾರ.

1992ರಲ್ಲಿ ಮಹಾಪೂರ ಬಂದಾಗ ಕೆರೆ ತುಂಬಿತ್ತು. ಅಲ್ಲಿಂದ ಈವರೆಗೂ ಕೆರೆಗೆ ಪೂರ್ಣ ಪ್ರಮಾಣದಲ್ಲಿ ನೀರು ಬಂದಿಲ್ಲ. ರೈತರ ನಿರಂತರ ಹೋರಾಟದ ಪರಿಣಾಮ ಯುಟಿಪಿ ಕಾಲುವೆ ಕೆರೆಗೆ ನೀರು ಹರಿಸಲಾಯಿತು. 2017ರಲ್ಲಿ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಕೆರೆಗೆ ನೀರು ಭರ್ತಿಯಾಗಿದ್ದರಿಂದ ಕೆರೆಯ ಒಡ್ಡು ಒಡೆದು ಹೋಗಿ ನೀರು ಪೋಲಾಗುವ ಸಂಭವ ಇತ್ತು. ರೈತರ ಸಹಕಾರದಿಂದ ಸಣ್ಣ ನೀರಾವರಿ ಇಲಾಖೆ ದುರಸ್ತಿ ಮಾಡಿತ್ತು ಎನ್ನುತ್ತಾರೆ ರೈತ ಸಂಘದ ಮೇಡ್ಲೇರಿ ಗ್ರಾಮ ಘಟಕದ ಅಧ್ಯಕ್ಷ ಸುರೇಶಪ್ಪ ಮೈದೂರು ಹಾಗೂ ರೈತ ಮುಖಂಡ
ನಾಗಪ್ಪ ಯಲಿಗಾರ.

ಕೆರೆಗೆ ತೆರಳುವ ರಸ್ತೆಯು ಹದಗೆಟ್ಟಿದ್ದು, ಜಾಲಿ ಮುಳ್ಳು ರಸ್ತೆಗೆ ಚಾಚಿಕೊಂಡಿವೆ. ಜಾಲಿ ತೆಗೆಸಿ ರಸ್ತೆ ದುರಸ್ತಿ ಪಡಿಸಬೇಕು. ರಸ್ತೆಯ ಎರಡೂ ಬದಿಗೆ ಗಿಡಗಳನ್ನು ನೆಡಬೇಕು. ಗುಡ್ಡದಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಬರಲು ಕಾಲುವೆ ಮಾಡಬೇಕು. ಈ ನಿಟ್ಟಿನಿಲ್ಲಿ ಸಣ್ಣ ನೀರಾವರಿ ಇಲಾಖೆ ಕ್ರಮಕೈಗೊಳ್ಳಬೇಕು ಎನ್ನುತ್ತಾರೆ ದಿಳ್ಳೆಪ್ಪ ಕಂಬಳಿ, ಯಲ್ಲಪ್ಪ ಯಲಿಗಾರ, ಹುಚ್ಚಪ್ಪ ಅಂತರವಳ್ಳಿ, ಎಂ.ಡಿ.ಮೀನಕಟ್ಟಿ, ಶೇಖಪ್ಪ ಚಕ್ರಸಾಲಿ, ಹನುಮಂತ ಹು. ಮೀನಕಟ್ಟಿ, ಹುಚ್ಚಪ್ಪ ಎಲ್‌. ಪೂಜಾರ.

ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆ ಮೂಲಕ ನೀರು ತುಂಬಿಸುವ ರೂಪುರೇಷೆ ಸಿದ್ಧಪಡಿಸುವಂತೆ ಸಣ್ಣ ನೀರಾವರಿ ಇಲಾಖೆಗೆ ಸೂಚಿಸಲಾಗಿದೆ
ಆರ್‌.ಶಂಕರ್‌, ಅರಣ್ಯ ಹಾಗೂ ಪರಿಸರ ವಿಜ್ಞಾನ ಸಚಿವ

ಮುಕ್ತೇಶ್ವರ ಪಿ. ಕೂರಗುಂದಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT