ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ಮೂಲಕ ಸಮಗ್ರ ಅಭಿವೃದ್ಧಿ

ಹಿರೇಕೆರೂರ ಅಭಿವೃದ್ಧಿಯ ನೀಲನಕ್ಷೆ ಬಿಚ್ಚಿಟ್ಟ ಶಾಸಕ ಬಿ.ಸಿ. ಪಾಟೀಲ
Last Updated 19 ಜೂನ್ 2018, 13:27 IST
ಅಕ್ಷರ ಗಾತ್ರ

ಹಾವೇರಿ: ಈ ಬಾರಿಯ ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಕೊನೆ ತನಕ ರೋಚಕತೆ ಉಳಿಸಿಕೊಂಡ ಕ್ಷೇತ್ರ ಹಿರೇಕೆರೂರ. ಇದು, ರಾಜ್ಯ ರಾಜಕಾರಣದ ಮೇಲೂ ಪ್ರಭಾವ ಬೀರಿದ್ದು, ವಿಜಯಮಾಲೆಯು ಬಿ.ಸಿ.ಪಾಟೀಲ ಕೊರಳಿಗೆ ಬಿತ್ತು. ಪೊಲೀಸ್ ಅಧಿಕಾರಿಯಾಗಿ, ರಂಗ–ಸಿನಿಮಾ ನಟರಾಗಿ, ರೈತ–ಸಾಮಾಜಿಕ ಹೋರಾಟಗಾರಾಗಿ ವಿಭಿನ್ನ ಕ್ಷೇತ್ರಗಳಲ್ಲಿ ಅವರು ಛಾಪು ಬೀರಿದ್ದಾರೆ. ಸ್ಪಂದನೆಯ ಜೊತೆ ಖಡಕ್ ಖದರ್, ನಿಷ್ಠುರ ನಿಲುವು, ದಿಟ್ಟ ಹಾವಭಾವಗಳ ಮೂಲಕವೇ ರಾಜ್ಯದಲ್ಲಿ ಹೆಸರು ಮಾಡಿದ್ದಾರೆ. ತಮ್ಮ ಕ್ಷೇತ್ರದ ಯೋಚನೆ ಮತ್ತು ಯೋಜನೆಗಳನ್ನು ಅವರು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ.

 ಕ್ಷೇತ್ರದಲ್ಲಿ ಪ್ರಮುಖ ಆದ್ಯತಾ ಕೆಲಸಗಳು ಯಾವುವು?

ನಮ್ಮ ಕ್ಷೇತ್ರವು ಕೃಷಿ ಪ್ರಧಾನವಾಗಿದ್ದು, ರೈತರ ಅಭ್ಯುದಯದ ಯೋಜನೆಗಳಿಗೆ ಪ್ರಮುಖ ಪ್ರಾಶಸ್ತ್ಯ ನೀಡಲಾಗುವುದು. ಈ ಪೈಕಿ ನೀರಾವರಿ ಯೋಜನೆಗಳು ಬಹುಮುಖ್ಯ. ಕೃಷಿಗೆ ವಿದ್ಯುತ್ ಅಗತ್ಯ. ಅದಕ್ಕಾಗಿ ನೀರಾವರಿ ಮತ್ತು ವಿದ್ಯುತ್ ಸೇರಿದಂತೆ ರೈತರ ಅಗತ್ಯಗಳಿಗೆ ಹೆಚ್ಚಿನ ಮುತುವರ್ಜಿ ವಹಿಸಲಾಗುವುದು. ವರದಾ ನದಿ ಮೂಲಕ ಮಡ್ಲೂರು ಏತ ನೀರಾವರಿ, ಕುಮುದ್ವತಿ ನದಿ ನೀರು ಬಳಸಿಕೊಂಡು ದುರ್ಗಾ ದೇವಿ ಏತ ನೀರಾವರಿ, ತುಂಗಭದ್ರಾ ನದಿ ನೀರಿನಿಂದ ಗುಡ್ಡದ ಮಾದಾಪುರ ಹಾಗೂ ಅಸುಂಡಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವ ಚಿಂತನೆ ಇದೆ. ಸುಮಾರು 82 ಕೆರೆಗಳನ್ನು ತುಂಬಿಸುವ ಮೂಲಕ ಹಿರೇಕೆರೂರ ಮತ್ತು ರಟ್ಟೀಹಳ್ಳಿ ತಾಲ್ಲೂಕುಗಳನ್ನು ನೀರಾವರಿ ಕ್ಷೇತ್ರವಾಗಿ ಪರಿವರ್ತಿಸಬೇಕು ಎಂಬ ಆಶಯವಿದೆ.

 ನಿರುದ್ಯೋಗ ನಿವಾರಣೆ ಹಾಗೂ ಆರ್ಥಿಕ ಅಭಿವೃದ್ಧಿ ಬಗ್ಗೆ ಯೋಚನೆಗಳೇನು?

ಸಣ್ಣ ಮತ್ತು ಗುಡಿ ಕೈಗಾರಿಕೆಗಳಿಗೆ ಒತ್ತು ನೀಡಿ, ಮಹಿಳೆಯರು, ಬಡವರು, ತಳವರ್ಗಗಳ ಅಭಿವೃದ್ಧಿಗೆ ಶ್ರಮಿಸಲಾಗುವುದು. ತಾಲ್ಲೂಕಿನಲ್ಲಿ ಖಾಸಗಿ ಸಕ್ಕರೆ ಕಾರ್ಖಾನೆಯೊಂದು ಆರಂಭಗೊಳ್ಳಲಿದೆ. ಅಲ್ಲದೇ, ಮಧ್ಯಮ ವರ್ಗದ ಮಹಿಳೆಯರ ಆದಾಯ ವೃದ್ಧಿಗೆ ಗೃಹ ಕೈಗಾರಿಕೆಗಳನ್ನು ಉತ್ತೇಜಿಸುವ ಚಿಂತನೆ ಇದೆ. ಇದರ ಜೊತೆಗೆ ಜವಳಿ, ಸಿದ್ಧ ಉಡುಪು ಘಟಕಗಳನ್ನು ಸ್ಥಾಪಿಸಲು ಪ್ರಯತ್ನಿಸಲಾಗುವುದು. ಅದಕ್ಕಾಗಿ ಒಂದು ಕೈಗಾರಿಕಾ ವಸಾಹತುವನ್ನು ಆರಂಭಿಸಬೇಕಾಗಿದೆ.

 ಶೈಕ್ಷಣಿಕ ಅಭಿವೃದ್ಧಿಗೆ ನಿಮ್ಮ ಚಿಂತನೆಗಳೇನು?

ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಶಾಲಾ–ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿ ಪಡಿಸಬೇಕು. ಆಧುನಿಕ ಅಗತ್ಯಕ್ಕೆ ತಕ್ಕಂತೆ ಶಿಕ್ಷಣ ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ನೀಡಬೇಕು. ಪಿಯುಸಿ, ಐಟಿಐ, ಪಾಲಿಟೆಕ್ನಿಕ್, ಪ್ರೌಢಶಾಲೆಗಳು, ಪ್ರಥಮ ದರ್ಜೆ ಕಾಲೇಜುಗಳನ್ನು ಆರಂಭಿಸಬೇಕು. ದೂದಿಹಳ್ಳಿಯಲ್ಲಿ ಡಿಪ್ಲೊಮಾ ಕಾಲೇಜು ಹಾಗೂ ಇತರೆಡೆ ವಸತಿ ಶಾಲೆಗಳನ್ನು ಆರಂಭಿಸುವ ಚಿಂತನೆ ಇದೆ. ಕೌಶಲ ಅಭಿವೃದ್ಧಿಗೆ ಒತ್ತು ನೀಡಿ, ಉದ್ಯೋಗ ಸೃಜಿಸುವ ಕೋರ್ಸ್‌ಗಳನ್ನೂ ತರಬೇಕು ಎಂಬ ಆಶಯ ಇದೆ.

 ಪ್ರವಾಸೋದ್ಯಮ, ಆರೋಗ್ಯ ವ್ಯವಸ್ಥೆಗಳ ಕುರಿತು

ಕಾಗಿನೆಲೆ ಮಾದರಿಯಲ್ಲಿ ಸರ್ವಜ್ಞರಿಗೆ ಸಂಬಂಧಿಸಿದ ಸ್ಥಳ, ವಸ್ತುಳು, ಐತಿಹ್ಯಗಳನ್ನು ಪ್ರಾಧಿಕಾರದ ಮೂಲಕ ಅಭಿವೃದ್ಧಿ ಪಡಿಸುವುದು, ಮದಗದ ಕೆಂಚಮ್ಮನವರ ಕೆರೆ, ಪಟ್ಟಣದ ದುರ್ಗಾದೇವಿ ಕೆರೆಗಳನ್ನೂ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕು. ಪ್ರವಾಸೋದ್ಯಮಕ್ಕೆ ಪೂರಕವಾದ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಅದು ಪರೋಕ್ಷ ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ.

 ಆರೋಗ್ಯ ಮತ್ತು ವಸತಿ ಯೋಜನೆಗಳು

ಹಿರೇಕೆರೂರಿನ ವಡ್ಡಿನಕಟ್ಟಿ, ರಟ್ಟೀಹಳ್ಳಿಯ ಕವಳಿಕುಪ್ಪಿ, ಮಾಸೂರಿನ ಸಿದ್ದಪ್ಪನ ಗುಡ್ಡ ಪ್ರದೇಶದಲ್ಲಿ ಸರ್ಕಾರಿ ಜಮೀನು ಪಡೆದು ಬಡವರಿಗೆ ವಸತಿ ನೀಡುವ ಚಿಂತನೆ ಇದೆ. ಮೆಕ್ಕೆಜೋಳದ ಸಂಸ್ಕರಣಾ ಘಟಕ ಆರಂಭಿಸಬೇಕು ಎಂಬ ಚಿಂತನೆ ಇದೆ. ವೈದ್ಯಕೀಯ ಸಿಬ್ಬಂದಿ ಕೊರತೆಯನ್ನು ನೀಗಿಸುವುದು ಹಾಗೂ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಪ್ರಯತ್ನಿಸಲಾಗುವುದು.

 ಸಿನಿಮಾ ಕ್ಷೇತ್ರದ ನಂಟು ಹೊಂದಿದ ನಿಮ್ಮ ಭವಿಷ್ಯದ ಉದ್ದೇಶಗಳೇನು?

ನಾನು, ರಂಗಭೂಮಿ ಹಾಗೂ ಸಿನಿಮಾ ರಂಗದ ಜೊತೆ ನಿಕಟ ಸಂಪರ್ಕ ಹೊಂದಿದ್ದೇನೆ. ಹೀಗಾಗಿ ಭವಿಷ್ಯದ ಕಲಾವಿದರಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ರಂಗ ಶಿಕ್ಷಣ ಅಥವಾ ಫಿಲ್ಮ್‌ ಇನ್‌ಸ್ಟಿಟ್ಯೂಟ್ ಆರಂಭಿಸುವ ಇರಾದೆ ಇದೆ. ಈ ಭಾಗದಲ್ಲಿ ಲೋಕೇಶನ್ ಹಾಗೂ ಕಲಾವಿದರು ಹೇರಳವಾಗಿದ್ದರೂ, ಅವಕಾಶಗಳು ದೊರೆತಿರುವುದು ಕಡಿಮೆ. ಅದಕ್ಕಾಗಿ ಇಂತಹ ಸಂಸ್ಥೆಯನ್ನು ಆರಂಭಿಸಿದರೆ, ಪೂರಕವಾಗಲಿದೆ. ಒಟ್ಟಾರೆ, ಎರಡೂ ತಾಲ್ಲೂಕುಗಳ ಅಭಿವೃದ್ಧಿ, ನೀರಾವರಿಗೆ ಆದ್ಯತೆ, ಸಾಕ್ಷರತೆ ಪ್ರಮಾಣ ಹೆಚ್ಚಳ, ಶೈಕ್ಷಣಿಕವಾಗಿ, ಸಾಮಾಜಿಕ, ಆರ್ಥಿಕ, ಔದ್ಯೋಗಿಕ, ಅಭಿವೃದ್ಧಿಯೇ ನನ್ನ ಗುರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT