ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯ ರಾಜಕೀಯ ಪ್ರಹಸನ ಸುಖಾಂತ್ಯ

ಪ್ರತಿಭಟನೆ ಕೈಬಿಟ್ಟ ಕೇಜ್ರಿವಾಲ್
Last Updated 19 ಜೂನ್ 2018, 18:19 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರ ಮತ್ತು ಪ್ರತಿಭಟನಾ ನಿರತ ಐಎಎಸ್‌ ಅಧಿಕಾರಿಗಳ ಮಧ್ಯೆ ಮಂಗಳವಾರ ನಡೆದ ಸಂಧಾನ ಯಶಸ್ವಿಯಾಗಿದೆ. ಒಂಬತ್ತು ದಿನಗಳಿಂದ ಲೆಫ್ಟಿನೆಂಟ್‌ ಗವರ್ನರ್‌ ಕಚೇರಿಯಲ್ಲಿ ‘ಬಿಡಾರ’ ಹೂಡಿದ್ದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಧರಣಿ ಕೈಬಿಟ್ಟು ಹೊರಬಂದಿದ್ದಾರೆ.

ಇದರೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿದ್ದ ರಾಜಕೀಯ ಪ್ರಹಸನಕ್ಕೆ ತೆರೆ ಬಿದ್ದಿದೆ.

ಪ್ರತಿಭಟನೆ ಕೈಬಿಡಲು ಐಎಎಸ್‌ ಅಧಿಕಾರಿಗಳಿಗೆ ಸೂಚಿಸುವಂತೆ ಒತ್ತಾಯಿಸಿ ಗವರ್ನರ್‌ ಕಚೇರಿಯಲ್ಲಿಮೂವರು ಸಂಪುಟ ಸಹೋದ್ಯೋಗಿಗಳ ಜತೆ ಕಳೆದ ಸೋಮವಾರದಿಂದ ಕೇಜ್ರಿವಾಲ್ ಧರಣಿ ಆರಂಭಿಸಿದ್ದರು.

ದೆಹಲಿಯಲ್ಲಿ ಉದ್ಭವಿಸಿದ್ದ ಈ ರಾಜಕೀಯ ಬಿಕ್ಕಟ್ಟು ಇಡೀ ದೇಶದ ಗಮನ ಸೆಳೆದಿತ್ತು. ಕಾಂಗ್ರೆಸ್‌ ಬಿಟ್ಟು ಉಳಿದೆಲ್ಲ ವಿರೋಧ ಪಕ್ಷಗಳು ಎಎಪಿಯ ಬೆನ್ನಿಗೆ ನಿಂತಿದ್ದವು. ಸಂಘರ್ಷ ಬಿಟ್ಟು, ಸಂಧಾನಕ್ಕೆ ಮುಂದಾದರು:ಮುಖ್ಯಮಂತ್ರಿಯು ಸುರಕ್ಷತೆ ಮತ್ತು ಭದ್ರತೆಯ ಭರವಸೆ ನೀಡಿದ ನಂತರ ಮನಸು ಬದಲಾಯಿಸಿದ್ದ ಪ್ರತಿಭಟನಾನಿರತ ಐಎಎಸ್‌ ಅಧಿಕಾರಿಗಳು ಸರ್ಕಾರದ ಜತೆಗಿನ ಸಂಘರ್ಷ ತೊರೆದು ಮಾತುಕತೆಗೆ ಮುಂದಾಗಿದ್ದರು. ಈ ನಡುವೆ, ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್ ಅವರು ಕೂಡ ಐಎಎಸ್‌ ಅಧಿಕಾರಿಗಳ ಜತೆ ಮಾತುಕತೆ ನಡೆಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಆಸ್ಪತ್ರೆಯಿಂದ ಮರಳಿದ ಸಿಸೋಡಿಯಾ ಮತ್ತು ಎಎಪಿ ನಾಯಕರು ಐಎಎಸ್‌ ಅಧಿಕಾರಿಗಳ ಜತೆ ನಡೆಸಿದ ಮಾತುಕತೆ ಫಲ ನೀಡಿತು.

ಸರ್ಕಾರದೊಂದಿಗೆ ಸಂಘರ್ಷಕ್ಕಿಳಿದಿದ್ದ ಐಎಎಸ್‌ ಅಧಿಕಾರಿಗಳು ನಾಲ್ಕು ತಿಂಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಕೈಬಿಟ್ಟು ಕೆಲಸಕ್ಕೆ ಮರಳಿದರು. ಸಚಿವರು ನಡೆಸಿದ ಸಭೆಗಳಿಗೆ ಹಾಜರಾದರು.

ಅತ್ತ ಒಂಬತ್ತು ದಿನಗಳ ನಂತರ ಗವರ್ನರ್‌ ಕಚೇರಿಯಿಂದ ಹೊರಬಂದ ಕೇಜ್ರಿವಾಲ್‌ ಅವರಿಗೆ ಎಎಪಿ ಕಾರ್ಯಕರ್ತರು ಮತ್ತು ನಾಯಕರು ಭವ್ಯ ಸ್ವಾಗತ ನೀಡಿದರು. ಅಲ್ಲಿಂದ ನೇರವಾಗಿ ತಮ್ಮ ನಿವಾಸಕ್ಕೆ ತೆರಳಿದ ಅವರು, ನಂತರ ಪಕ್ಷದ ನಾಯಕರ ಜತೆಗೂಡಿ ಸುದ್ದಿಗೋಷ್ಠಿ ನಡೆಸಿದರು. ಬೈಜಾಲ್‌ ವಿರುದ್ಧ ಕಿಡಿ:ಈ ಎಲ್ಲ ಬೆಳವಣಿಗೆಗಳ ಮೊದಲು ಕೇಜ್ರಿವಾಲ್‌ ಅವರು ಗವರ್ನರ್‌ ಅನಿಲ್‌ ಬೈಜಾಲ್‌ ವಿರುದ್ಧ ಕಿಡಿ ಕಾರಿದ್ದರು. ‘ಲೆಫ್ಟಿನೆಂಟ್‌ ಗವರ್ನರ್‌ಗೆ ಈ ಎಂಟು ದಿನದಲ್ಲಿ ನಮ್ಮನ್ನು ಭೇಟಿಯಾಗಲು ಎಂಟು ನಿಮಿಷ ಕೂಡ ಸಮಯ ಸಿಗಲಿಲ್ಲವೇ’ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಬೈಜಾಲ್ ಭೇಟಿಗೆ ತೆರಳಿದ್ದ ತಮ್ಮನ್ನು ಪೊಲೀಸರು ಬಲವಂತವಾಗಿ ಹೊರದಬ್ಬಿದ್ದಾರೆ ಎಂದು ಎಎಪಿಯ ಇಬ್ಬರು ಶಾಸಕರು ಆರೋಪಿಸಿದ್ದರು. ಈ ಘಟನೆ ಕೂಡ ಕೇಜ್ರಿವಾಲ್‌ರನ್ನು ಕೆರಳಿಸಿತ್ತು.

‘ಶಾಸಕರು, ಸಂಸದರು, ಮುಖ್ಯಮಂತ್ರಿಯನ್ನು ಭೇಟಿಯಾಗಲು ಗವರ್ನರ್‌ ಏಕೆ ನಿರಾಕರಿಸುತ್ತಿದ್ದಾರೆ? ಅದು ಅವರ ಸಾಂವಿಧಾನಿಕ ಕರ್ತವ್ಯ ಅಲ್ಲವೇ’ ಎಂದು ಪ್ರಶ್ನಿಸಿದ್ದರು.

ತುರ್ತು ವಿಚಾರಣೆಗೆ ‘ಸುಪ್ರೀಂ’ ನಕಾರ

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನಡೆಸುತ್ತಿರುವ ಧರಣಿ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.

ಕೇಜ್ರಿವಾಲ್‌ ಧರಣಿಯನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ರಜಾ ಅವಧಿ ಮುಗಿದ ನಂತರ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ದ್ವಿಸದಸ್ಯ ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT