ಸಮರೋಪಾದಿಯಲ್ಲಿ ಪರಿಹಾರಕ್ಕೆ ಸೂಚನೆ

7
ಮಳೆ ಹಾನಿ ಪರಿಣಾಮವನ್ನು ಕಣ್ಣಾರೆ ಕಂಡ ಸಚಿವರು

ಸಮರೋಪಾದಿಯಲ್ಲಿ ಪರಿಹಾರಕ್ಕೆ ಸೂಚನೆ

Published:
Updated:
ಸಮರೋಪಾದಿಯಲ್ಲಿ ಪರಿಹಾರಕ್ಕೆ ಸೂಚನೆ

ಮಡಿಕೇರಿ: ‘ಕೊಡಗು ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಭಾರಿ ಮಳೆಗೆ ಜೀವಹಾನಿ ಸೇರಿದಂತೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಸಂಭವಿಸಿದ್ದು ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ನಡೆಸಬೇಕು’ ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಸೂಚಿಸಿದರು.

ಸೋಮವಾರ ಬೆಳಿಗ್ಗೆ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಕೊಣನೂರು– ಮಾಕುಟ್ಟ ಅಂತರ ರಾಜ್ಯ ಹೆದ್ದಾರಿಯಲ್ಲಿ ಉಂಟಾದ ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದರು.

‘ಹೆದ್ದಾರಿಯಲ್ಲಿ ಉಂಟಾದ ಮಳೆ ಹಾನಿಯನ್ನು ಕಣ್ಣಾರೆ ಕಂಡು, ಅಬ್ಬಾ ಎಂದು ಉದ್ಗರಿಸಿದರು. ಕೆಲವು ಕಡೆ ಗುಡ್ಡ ಕುಸಿತ ಹಾಗೂ ಬೀಳುವ ಹಂತದಲ್ಲಿರುವ ಮರಗಳನ್ನು ಕಂಡು ತಕ್ಷಣವೇ ತೆರವು ಮಾಡಬೇಕು’ ಎಂದು ಖಡಕ್‌ ಸೂಚನೆ ನೀಡಿದರು.

‘ಹೆದ್ದಾರಿಯು ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿದ್ದು, ಮಾನವೀಯ ನೆಲೆಯಲ್ಲಿ ಮರಗಳನ್ನು ತೆರವು ಮಾಡಲು ಅನುಮತಿ ನೀಡಬೇಕು’ ಎಂದು ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಜಿಲ್ಲೆಗೆ ಭೇಟಿ ನೀಡುವ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಅವರಿಗೆ ರಸ್ತೆ ಹಾನಿಯ ಫೋಟೊ ಸಹಿತ ಸಮಗ್ರ ವರದಿ ನೀಡಬೇಕು. ಜತೆಗೆ, ಮತ್ತೆ ಹೆದ್ದಾರಿಯಲ್ಲಿ ಇಂತಹ ಅನಾಹುತ ಸಂಭವಿಸದಂತೆ ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಮಳೆಯಿಂದ ಬಹಳ ದೊಡ್ಡ ಅನಾಹುತ ಉಂಟಾಗಿದೆ. 60 ಕಡೆ ಗುಡ್ಡ ಕುಸಿದಿದೆ. ಸೇತುವೆಗೂ ಹಾನಿಯಾಗಿದೆ. ತಕ್ಷಣವೇ ಇವೆಲ್ಲವನ್ನೂ ದುರಸ್ತಿ ಪಡಿಸಬೇಕಿದೆ. ಹೆದ್ದಾರಿಯಲ್ಲಿ ಆಗಿರುವ ಅನಾಹುತವನ್ನು ಲೋಕೋಪಯೋಗಿ ಸಚಿವರ ಗಮನಕ್ಕೂ ತರುತ್ತೇನೆ. ಹಣಕ್ಕೂ ಕೊರತೆಯಿಲ್ಲ. ಮಣ್ಣು, ಗಿಡಗಳನ್ನು ಮೊದಲು ತೆರವು ಮಾಡಬೇಕು’ ಎಂದು ಹೇಳಿದರು.

ಪರಿಹಾರ – ವಿಳಂಬ ಧೋರಣೆ ಸಲ್ಲದು:

ನಂತರ, ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಳೆ ಹಾನಿ ಕುರಿತು ಸಭೆ ನಡೆಸಿದರು. ಕೊಡಗಿನ ಮಳೆಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಬಳಿ ಸಾಕಷ್ಟು ಅನುದಾನ ಲಭ್ಯವಿದೆ. ಅನುದಾನ ಕೊರತೆ ಉಂಟಾದರೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದರು.

‘ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ವರದಿ ತಯಾರಿಸಬೇಕು. ಹಾನಿಗೆ ಒಳಗಾದವರನ್ನು ಗುರುತಿಸಿ ತಕ್ಷಣ ಪರಿಹಾರ ವಿತರಣೆ ಮಾಡಬೇಕು. ಪೂರ್ಣ ಮನೆ ಬಿದ್ದಿದ್ದರೂ ₹ 5 ಸಾವಿರ ಪಾವತಿಸುವ ಕ್ರಮ ಸರಿಯಲ್ಲ. ಮನೆ ಪರಿಹಾರಕ್ಕೆ ಹೊಸ ಆದೇಶವಿದ್ದು, ಅದರಂತೆ ಪರಿಹಾರ ವಿತರಣೆ ಮಾಡ ಬೇಕು’ ಎಂದು ಸೂಚನೆ ನೀಡಿದರು.

‘ಒಂದು ವೇಳೆ ಅಧಿಕಾರಿಗಳ ವಿರುದ್ಧ ದೂರುಗಳು ಬಂದಲ್ಲಿ ಅವರನ್ನೇ ನೇರ ಹೊಣೆ ಮಾಡಲಾಗುವುದು. ಮೂರು ದಿನಗಳ ಒಳಗೆ ಪರಿಹಾರ ವಿತರಣೆ ಮಾಡಬೇಕು. ಎರಡು ದಿನಗಳ ಒಳಗೆ ವಿದ್ಯುತ್‌ ಪೂರೈಸಬೇಕು’ ಎಂದು ಹೇಳಿದರು.

ವಿದ್ಯುತ್ ಇಲ್ಲ: ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಮಾತನಾಡಿ, ‘ಕಾಲೂರು, ಹಮ್ಮಿಯಾಲ, ಕುಮಾರಹಳ್ಳಿಯಲ್ಲಿ 25 ರಿಂದ 30 ವಿದ್ಯುತ್‌ ಕಂಬಗಳು ಬಿದ್ದಿವೆ. ವಾರ ಕಳೆದರೂ ವಿದ್ಯುತ್‌ ಇಲ್ಲ. ಲೈನ್‌ಮನ್‌ಗಳು ತುರ್ತಾಗಿ ಸ್ಪಂದಿಸಬೇಕು’ ಎಂದು ಸೂಚಿಸಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ‘ಸೆಸ್ಕ್‌ನಲ್ಲಿ ಸಿಬ್ಬಂದಿ ಕೊರತೆಯಿದೆ. ಮಳೆ ಹಾಗೂ ಗಾಳಿಗೆ ಸಾಕಷ್ಟು ಕಂಬಗಳು ಮುರಿದು ಬೀಳುತ್ತಿವೆ. ವಿದ್ಯುತ್‌ ಇಲ್ಲದ ಗ್ರಾಮಗಳಿಗೆ ತಕ್ಷಣ ವಿದ್ಯುತ್‌ ಪೂರೈಸಬೇಕು. ಸಿಬ್ಬಂದಿ ನೇಮಕಕ್ಕೂ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ದೇಶಪಾಂಡೆ, ‘ಇಲ್ಲಾ ಇಲಾಖೆಯ ಮೇಲಾಧಿಕಾರಿಗಳು ಸಿಬ್ಬಂದಿಗಳನ್ನು ಬಳಸಿಕೊಂಡು ಕಾರ್ಯ ನಿರ್ವಹಿಸಬೇಕು’ ಎಂದು ಹೇಳಿದರು.

ಭತ್ತದ ಬೆಳೆಗೆ ಪ್ರೋತ್ಸಾಹ ನೀಡಿ:

‘ಭತ್ತ ಬೆಳೆಯಲು ಸರ್ಕಾರ ಪ್ರೋತ್ಸಾಹ ನೀಡಬೇಕು. 25 ವರ್ಷಗಳಿಂದ ಆಗದ ಮಳೆ ಈ ಬಾರಿ ಆಗಿ ಜಿಲ್ಲೆಯ ರೈತರಲ್ಲಿ ಆತಂಕವಾಗಿದೆ. ಭತ್ತ ಹಾಗೂ ಮುಸುಕಿನ ಜೋಳ ಬೆಳೆಯುವ ರೈತರಿಗೆ ಸಹಾಯಧನ ನೀಡಬೇಕು’ ಎಂದು ಬೋಪಯ್ಯ ಕೋರಿದರು.

ಕೃಷಿ ಇಲಾಖೆ ಅಧಿಕಾರಿ ಕೆ. ರಾಜು ಮಾತನಾಡಿ, ‘30,500 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಹಾಗೂ 4,000 ಹೆಕ್ಟೇರ್‌ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯಲಾಗುತ್ತಿದೆ. 2,800 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬಿತ್ತನೆ ಕಾರ್ಯ ನಡೆದಿದೆ’ ಎಂದು ವಿವರಿಸಿದರು.

ವಿಧಾನ ಪರಿಷತ್‌ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್‌, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಹಾಜರಿದ್ದರು.

ಅತಿವೃಷ್ಟಿಯಿಂದ ಉಂಟಾದ ಮನೆ ಹಾನಿ ಸಂಬಂಧ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಮಾಹಿತಿ ನೀಡುವ ವೇಳೆ ‘ವಿರಾಜಪೇಟೆ ತಾಲ್ಲೂಕಿನಲ್ಲಿ ತೀವ್ರಹಾನಿಯಾದ ಮನೆಗಳು ಯಾವುವೂ ಇಲ್ಲ’ ಎಂದು ಹೇಳಿದರು. ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಶಾಸಕ ಬೋಪಯ್ಯ, ‘ತಾಲ್ಲೂಕಿನಲ್ಲಿ 6 ಮನೆಗಳಿಗೆ ತೀವ್ರ ಹಾನಿಯಾಗಿದೆ. ಒಬ್ಬರು ಸಾವನ್ನಪ್ಪಿದ್ದಾರೆ. ಇದುವರೆಗೂ ಪರಿಹಾರ ನೀಡಿಲ್ಲ. ಕೆದಮುಳ್ಳೂರು, ಪೆರಾಜೆಯಲ್ಲಿ ಕೆಲವು ಮನೆಗಳು ಬಿದ್ದಿದ್ದು, ಇಲ್ಲಿಗೆ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡಿಲ್ಲ. ಇನ್ನು ತಿತಿಮತಿ, ಬಿ. ಬಾಡಗ ಭಾಗದಲ್ಲಿ ಮೂರು ಕಿ.ಮೀ. ಗುಡ್ಡ ಕುಸಿದಿದೆ. ವಿರಾಜಪೇಟೆ ತಹಶೀಲ್ದಾರ್ ಅತ್ಯಂತ ನಿಷ್ಕ್ರಿಯವಾಗಿದ್ದು, ಇಲ್ಲಿರುವ ಸಿಬ್ಬಂದಿಯಿಂದ ಯಾವುದೇ ಕೆಲಸ ಆಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ತಹಶೀಲ್ದಾರ್‌ ಅವರನ್ನು ದೇಶಪಾಂಡೆ ತರಾಟೆಗೆ ತೆಗೆದುಕೊಂಡರು.

ತುರ್ತು ಪರಿಹಾರಕ್ಕೆ ಅನುದಾನದ ಕೊರತೆಯಿಲ್ಲ. ಹಣವಿಲ್ಲವೆಂದು ಪರಿಹಾರ ಕಾಮಗಾರಿ ನಡೆಸಲು ವಿಳಂಬ ಮಾಡಿದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು

ಆರ್‌.ವಿ. ದೇಶಪಾಂಡೆ, ಕಂದಾಯ ಸಚಿವ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !