ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಒತ್ತಾಯ

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ ರೈತ ಸಂಘ– ಹಸಿರು ಸೇನೆ
Last Updated 19 ಜೂನ್ 2018, 13:53 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ವಿವಿಧೆಡೆ ಸರ್ಕಾರಿ ಭೂಮಿ ಒತ್ತುವರಿ ಯಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಈ ಒತ್ತುವರಿಯನ್ನು ಶೀಘ್ರ ತೆರವುಗೊಳಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ನಂಜುಂಡಸ್ವಾಮಿ ಬಣ) ಸದಸ್ಯರು ತಾಲ್ಲೂಕು ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.

‘ಸರ್ಕಾರಿ ರಕ್ಷಿಸಬೇಕಾದ ಕಂದಾಯ ಇಲಾಖೆ ಅಧಿಕಾರಿಗಳು ಭೂಗಳ್ಳರ ಜತೆ ಶಾಮೀಲಾಗಿದ್ದಾರೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಗೋಮಾಳ, ಗುಂಡು ತೋಪು, ಸ್ಮಶಾನ, ಕೆರೆ ಅಂಗಳ ಒತ್ತುವರಿಯಾಗಿವೆ. ಆದರೆ, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಕೋಲಾರ ತಾಲ್ಲೂಕಿನ ವೇಮಗಲ್, ನರಸಾಪುರ, ವಕ್ಕಲೇರಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಜಮೀನುಗಳು ಒತ್ತುವರಿಯಾಗಿವೆ. ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಿ ಜಮೀನುಗಳಿಗೆ ನಕಲಿ ದಾಖಲೆಪತ್ರ ಸೃಷ್ಟಿಸಿ ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಪರಭಾರೆ ಮಾಡಿದ್ದಾರೆ’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮುಶಿವಣ್ಣ ದೂರಿದರು.

‘ಬಗರ್‌ ಹುಕುಂ ಸಮಿತಿ ಮೂಲಕ ಸರ್ಕಾರಿ ಜಮೀನುಗಳನ್ನು ಅನರ್ಹರಿಗೆ ಮಂಜೂರು ಮಾಡಲಾಗಿದೆ. ಇದಕ್ಕೆ ಪ್ರತಿಯಾಗಿ ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ ಲಂಚ ಸಂದಾಯವಾಗಿದೆ. ತಾಲ್ಲೂಕು ಕಚೇರಿ, ಕಂದಾಯ ಹಾಗೂ ಭೂದಾಖಲೆ ಇಲಾಖೆ ಅಧಿಕಾರಿ
ಗಳು ಶಾಮೀಲಾಗಿ ಭೂ ಅಕ್ರಮ ಎಸಗಿದ್ದಾರೆ. ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಗೋಮಾಳಕ್ಕೆ ಜಮೀನು ಮೀಸಲಿಡಬೇಕೆಂಬ ನಿಯಮವಿದೆ. ಆದರೆ, ಅಧಿಕಾರಿಗಳು ಉಲ್ಲಂಘಿಸಿದ್ದಾರೆ’ ಎಂದು ಹೇಳಿದರು.

ಅನರ್ಹರಿಗೆ ಮಂಜೂರು: ‘ಬಗರ್‌ ಹುಕುಂ ಸಾಗುವಳಿ ಚೀಟಿಗೆ ಅರ್ಜಿ ಸಲ್ಲಿಸಿದ್ದವರ ಬದಲಿಗೆ ಅನರ್ಹರಿಗೆ ಜಮೀನು ಮಂಜೂರು ಮಾಡಲಾಗಿದೆ. 4.38 ಎಕರೆಗೂ ಹೆಚ್ಚು ಜಮೀನು ಹೊಂದಿರುವವರಿಗೆ ಹೊಸದಾಗಿ ಸರ್ಕಾರಿ ಭೂಮಿ ಕೊಡಬಾರದೆಂಬ ನಿಯಮವಿದೆ. ಆದರೆ, ಅಧಿಕಾರಿಗಳು ಈ ನಿಯಮ ಗಾಳಿಗೆ ತೂರಿ ಆರ್ಥಿಕವಾಗಿ ಸ್ಥಿತಿವಂತರಾದವರಿಗೂ ಸರ್ಕಾರಿ ಭೂಮಿ ಮಂಜೂರು ಮಾಡಿದ್ದಾರೆ’ ಎಂದು ಧರಣಿನಿರತರು ಆರೋಪಿಸಿದರು.

‘ಬಗರ್‌ ಹುಕುಂ ಸಮಿತಿಗೆ ಶಾಸಕರು ಅಧ್ಯಕ್ಷರಾಗಿರಬೇಕು. ಆದರೆ, ಈ ಹಿಂದೆ ಕೋಲಾರ ಕ್ಷೇತ್ರದ ಶಾಸಕರಾಗಿದ್ದ ವರ್ತೂರು ಪ್ರಕಾಶ್‌ ಸಮಿತಿಗೆ ತಮ್ಮ ಬೆಂಬಲಿಗ ಬೆಗ್ಲಿ ಪ್ರಕಾಶ್‌ರನ್ನು ನಿಯೋಜಿಸಿದ್ದರು. ಬೆಗ್ಲಿ ಪ್ರಕಾಶ್‌ ಅನರ್ಹರ ಅರ್ಜಿಗಳನ್ನು ಕಡತಕ್ಕೆ ಸೇರಿಸಿದ್ದರು. ಅಲ್ಲದೇ, ಅರ್ಜಿ ಸಲ್ಲಿಸದ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ದಾಖಲೆಪತ್ರ ಮತ್ತು ಕಡತ ಸೃಷ್ಟಿಸಿ ಹಕ್ಕು ಪತ್ರ ನೀಡಿದ್ದಾರೆ’ ಎಂದು ದೂರಿದರು.

ಮುತ್ತಿಗೆ ಹಾಕುತ್ತೇವೆ:‘2015ರಿಂದ 2018ರವರೆಗೆ ದರಖಾಸ್ತು ಸಮಿತಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಉನ್ನತ ತನಿಖೆ ನಡೆಸಬೇಕು. ಭೂಗಳ್ಳರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಅನರ್ಹರಿಂದ ಜಮೀನು ಹಿಂಪಡೆಯಬೇಕು. ಈಗಾಗಲೇ ವಿತರಣೆಯಾಗಿರುವ ಸಾಗುವಳಿ ಚೀಟಿಗಳನ್ನು ತಡೆ ಹಿಡಿಯಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಂಘದ ಜಿಲ್ಲಾ ಘಟಕದ ಸದಸ್ಯರಾದ ಎಲ್.ಎನ್.ಬಾಬು, ಶ್ರೀನಾಥ್, ನಾರಾಯಣಸ್ವಾಮಿ, ಧನಲಕ್ಷ್ಮಿ, ರೂಪಶ್ರೀ, ನಾರಾಯಣಮ್ಮ ಇದ್ದರು.

ಮಾಜಿ ಶಾಸಕ ವರ್ತೂರು ಪ್ರಕಾಶ್‌ ಹಾಗೂ ಅವರ ಪರಮಾಪ್ತ ಬೆಗ್ಲಿ ಸೂರ್ಯಪ್ರಕಾಶ್‌ ಸರ್ಕಾರಿ ಜಮೀನುಗಳನ್ನು ಬಗರ್‌ ಹುಕುಂ ಸಮಿತಿ ಮೂಲಕ ಅನರ್ಹರಿಗೆ ಮಂಜೂರು ಮಾಡಿದ್ದಾರೆ. ಅವರು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಈ ಅಕ್ರಮ ಎಸಗಿದ್ದಾರೆ.
ನಂದಕುಮಾರ್, ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT