ಪರಿಶಿಷ್ಟರಿಗೆ ತಲುಪದ ಅಡುಗೆ ಅನಿಲ ಸೇವೆ

7
‌ಅಧಿಕಾರಿಗಳ ಅಕ್ರಮ: ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆಂಜಿನಪ್ಪ ಕೆಂಡಾಮಂಡಲ

ಪರಿಶಿಷ್ಟರಿಗೆ ತಲುಪದ ಅಡುಗೆ ಅನಿಲ ಸೇವೆ

Published:
Updated:
ಪರಿಶಿಷ್ಟರಿಗೆ ತಲುಪದ ಅಡುಗೆ ಅನಿಲ ಸೇವೆ

ಕೋಲಾರ: ‘ಪರಿಶಿಷ್ಟ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಸೇವೆ ಕಲ್ಪಿಸದೆ ದುರುಪಯೋಗ ಪಡಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ಯಾಸ್ ಏಜೆನ್ಸಿಗಳ ವಿರುದ್ಧ ದೂರು ನೀಡಲಾಗುತ್ತದೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಹೇಳಿದರು.

ನಗರದಲ್ಲಿ ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ತಾಲ್ಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 750 ಫಲಾನುಭವಿಗಳಿಗೆ ಅಡುಗೆ ಅನಿಲ ಸೇವೆ ಮಂಜೂರಾಗಿತ್ತು. ಆದರೆ, ಅಧಿಕಾರಿಗಳು ಗ್ಯಾಸ್‌ ಸಂಪರ್ಕ ಕಲ್ಪಿಸದೆ ಅಕ್ರಮ ಎಸಗಿದ್ದಾರೆ’ ಎಂದು ಆರೋಪಿಸಿದರು.

‘ಅರಣ್ಯ ಇಲಾಖೆಯಿಂದ ಉಚಿತ ಗ್ಯಾಸ್ ಸಂಪರ್ಕಕ್ಕೆ 750 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ವರ್ಷದ ಹಿಂದೆಯೇ ಗ್ಯಾಸ್ ಏಜೆನ್ಸಿಯವರಿಗೆ ಇಲಾಖೆ ವತಿಯಿಂದ ಬಿಲ್ ಸಹ ಪಾವತಿಸಲಾಗಿದೆ. ಆದರೆ, ಈವರೆಗೂ ಫಲಾನುಭವಿಗಳಿಗೆ ಗ್ಯಾಸ್ ಸೇವೆ ಲಭ್ಯವಾಗಿಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿಯ ಪರಮಾವಧಿ’ ಎಂದು ಕೆಂಡಾಮಂಡಲರಾದರು.

ಮೌನಕ್ಕೆ ಶರಣು: ‘ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಆದೇಶ ಹೊರಡಿಸಿ ಖಾಸಗಿ ಶಾಲೆಗಳ ವಂತಿಗೆ ಹಾವಳಿಗೆ ಕಡಿವಾಣ ಹಾಕುವಂತೆ ಸೂಚಿಸಿದ್ದರು. ಆದರೆ, ಆ ಆದೇಶ ಕಡತಕ್ಕೆ ಸೀಮಿತವಾಗಿದೆ. ತಾಲ್ಲೂಕಿನಲ್ಲಿ ವಂತಿಗೆ ಹಾವಳಿ ಮಿತಿ ಮೀರಿದ್ದರೂ ಇಲಾಖೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅಧಿಕಾರಿಗಳು ಕೈಚೆಲ್ಲಿದ್ದರೂ ವಂತಿಗೆ ದಂಧೆ ಮಟ್ಟ ಹಾಕುತ್ತೇವೆ. ತಾ.ಪಂ ವತಿಯಿಂದ ತನಿಖಾ ತಂಡ ರಚಿಸಿ ಖಾಸಗಿ ಶಾಲೆಗಳು ವಂತಿಗೆ, ಶುಲ್ಕ ಮತ್ತು ಸರ್ಕಾರದ ನಿಯಮ ಪಾಲಿಸುತ್ತಿವೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತೇವೆ. ನಂತರ ಆ ಮಾಹಿತಿ ಆಧರಿಸಿ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳಿಗೆ ವರದಿ ಕಳುಹಿಸುತ್ತೇವೆ’ ಎಂದು ವಿವರಿಸಿದರು.

ಕಾರ್ಮಿಕರಿಗೆ ಕಿರುಕುಳ: ‘ಜಿಲ್ಲೆಯಲ್ಲಿ ಅತಿ ಹೆಚ್ಚು ಕೈಗಾರಿಕೆಗಳಿದ್ದು, ಈ ಪೈಕಿ ಸಿದ್ಧ ಉಡುಪು ಕಾರ್ಖಾನೆಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಈ ಕಾರ್ಖಾನೆಗಳಲ್ಲಿ ಕಾರ್ಮಿಕರಿಗೆ ಏಜೆನ್ಸಿಯವರು ಕಿರುಕುಳ ನೀಡುತ್ತಿರುವ ಬಗ್ಗೆ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸದಿರುವ ಸಂಬಂಧ ಸಾಕಷ್ಟು ದೂರು ಬಂದಿವೆ. ಈ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿ ಕಾರ್ಮಿಕರ ಹಿತ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಅಂಗನವಾಡಿಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸಿದರೆ ಮಾತ್ರ ಅವುಗಳಿಗೂ ಅರ್ಥ ಬರಲು ಸಾಧ್ಯ. ಮಕ್ಕಳನ್ನು ಕುರಿಗಳಂತೆ ತಂದು ಕೂರಿಸಿ, ಒಂದಿಷ್ಟು ಊಟ ಹಾಕಿ ಕಳುಹಿಸಿದರೆ ಪ್ರಯೋಜನವಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚಿನ ತರಬೇತಿ ನೀಡಿ ಶಿಕ್ಷಕರಂತೆ ಪರಿವರ್ತಿಸಬೇಕು. ಶಿಕ್ಷಕರ ಬೋಧನಾ ಕ್ರಮವನ್ನು ಅಂಗ

ನವಾಡಿಗಳಲ್ಲಿಅನುಸರಿಸಿ, ಇಂಗ್ಲಿಷ್‌ ಕಲಿಸಿದರೆ ಪೋಷಕರಿಗೂ ನಂಬಿಕೆ ಬರುತ್ತದೆ. ಜತೆಗೆ ಖಾಸಗಿ ಶಾಲೆಗಳ ಹಾವಳಿಯೂ ನಿಯಂತ್ರಣವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಎಲ್ಲಾ ಕಾರ್ಯಕ್ರಮಗಳಲ್ಲೂ ಶೇ 100ರಷ್ಟು ಪ್ರಗತಿ ಸಾಧಿಸಲಾಗಿದೆ. 320 ಹೆಕ್ಟೇರ್ ಹಿಪ್ಪುನೇರಳೆ ಬೆಳೆ ಹಾಗೂ 357 ಟನ್‌ ದ್ವಿತಳಿ ರೇಷ್ಮೆ ಉತ್ಪಾದನೆ ಗುರಿಗಿಂತಲೂ ಹೆಚ್ಚಿನ ಸಾಧನೆ ಮಾಡಲಾಗಿದೆ. ನರೇಗಾದಲ್ಲೂ ಗುರಿ ಮೀರಿದ ಸಾಧನೆ ಮಾಡುವ ಮೂಲಕ ರಾಜ್ಯದಲ್ಲಿ ತಾಲ್ಲೂಕು ಆರನೇ ಸ್ಥಾನ ಪಡೆದಿದೆ’ ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ವಿವರಿಸಿದರು.

‘ಅಂಗವಿಕಲರಿಗೆ 90 ಬೈಕ್‌ ವಿತರಿಸಬೇಕಿದ್ದು, 178 ಅರ್ಜಿ ಸಲ್ಲಿಕೆಯಾಗಿವೆ. ವಿಧಾನಸಭಾ ಚುನಾವಣಾ ನೀತಿಸಂಹಿತೆ ಕಾರಣ ಇನ್ನೂ ವಿತರಿಸಿಲ್ಲ. ಹಿಂದಿನ ವರ್ಷ ಉಳಿದಿದ್ದ 58 ಫಲಾನುಭವಿಗಳಿಗೂ ಬೈಕ್‌ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಹಿರಿಯ ನಾಗರಿಕರ ಮತ್ತು ಅಂಗವಿಕಲರ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ನಾಗಮಣಿ ಮಾಹಿತಿ ನೀಡಿದರು.

ತಾ.ಪಂ ಉಪಾಧ್ಯಕ್ಷೆ ಸಿ.ಲಕ್ಷ್ಮಿ, ಕಾರ್ಯ ನಿರ್ವಹಣಾಧಿಕಾರಿ ಎಂ.ಚಂದ್ರಪ್ಪ ಹಾಜರಿದ್ದರು.

ಫಲಾನುಭವಿಗಳಿಗೆ ಸರ್ಕಾರದ ಸವಲತ್ತು ತಲುಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಈ ಸಂಗತಿಯನ್ನು ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನಕ್ಕೆ ತಂದು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಪತ್ರ ಬರೆಯುತ್ತೇನೆ.

ಎಂ.ಆಂಜಿನಪ್ಪ, ತಾ.ಪಂ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !