ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೆ ತಡೆಯಲು ಮೊದಲ ಆದ್ಯತೆ

ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೇಸೂಗೂರ ಹೇಳಿಕೆ
Last Updated 19 ಜೂನ್ 2018, 14:25 IST
ಅಕ್ಷರ ಗಾತ್ರ

ಕನಕಗಿರಿ: ಮಾಜಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಗೆದ್ದು, ವಿಜಯೋತ್ಸಾಹದಲ್ಲಿರುವ ಬಸವರಾಜ ದಡೇಸೂಗೂರ ಅವರು ಕನಕಗಿರಿ ಕ್ಷೇತ್ರವನ್ನು ಮಾದರಿ ಮಾಡುವ ಸಂಕಲ್ಪವನ್ನು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡರು

ನೀವು ಗೆದ್ದಾಗಿದೆ, ತಕ್ಷಣ ಮಾಡುವ ಅಭಿವೃದ್ಧಿ ಕೆಲಸಗಳು ಏನು?

ಚುನಾವಣೆ ಹಾಗೂ ಇತರ ಸಮಯದಲ್ಲಿ ಭರವಸೆ ನೀಡಿದಂತೆ ಪ್ರತಿ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಒದಗಿಸುವುದು, ಸಿಸಿ ರಸ್ತೆ, ಚರಂಡಿ, ಇತರೆ ಮೂಲಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡುತ್ತೇನೆ. ಈಚೆಗೆ ಧಾರಾಕಾರ ಮಳೆ ಸುರಿದು ಅಲ್ಲಲ್ಲಿ ಜನರಿಗೆ ತೊಂದರೆಯಾಗಿದ್ದು, ಪರಿಹಾರ ಕೊಡಿಸಲಾಗುವುದು.

 ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಏನು ಯೋಜನೆ ಹಾಕಿಕೊಂಡಿದ್ದೀರಿ ?

ನವಲಿ, ಕನಕಗಿರಿ, ಹುಲಿಹೈದರ, ಹೋಬಳಿ ಪ್ರದೇಶದ ಬಹುತೇಕ ಗ್ರಾಮಗಳ ಜನ ಕೂಲಿ ಅರಸಿ ಉಡುಪಿ, ಶಹಾಪುರ, ಸುರಪುರ, ಬೆಂಗಳೂರು, ಮಂಗಳೂರು ಇತರ ನಗರ ಪ್ರದೇಶಗಳಿಗೆ ಗುಳೆ ಹೋಗಿದ್ದು, ಈ ಭಾಗದಲ್ಲಿ ಕೃಷಿಕರು, ಕೂಲಿಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲು ಕೈಗಾರಿಕೆ ಸ್ಥಾಪಿಸಲಾಗುವುದು. ಬಡವರು, ಶೋಷಿತರು, ರೈತರಿಗೆ ಗಂಗಾ ಕಲ್ಯಾಣ ಯೋಜನೆ ಲಾಭ ಮಾಡಿಕೊಡಲಾಗುವುದು. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಜನರಿಗೆ ನೀರು, ವಿದ್ಯುತ್ ಪೊರೈಕೆಯಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಬಡವರ ಮನೆ ಬಾಗಿಲಿಗೆ ತಲುಪಿಸಲಾಗುವುದು.

ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಾಧ್ಯವೆ?

ರಾಜ್ಯದಲ್ಲಿ ನಮ್ಮ ಸರ್ಕಾರ ಇಲ್ಲದಿದ್ದರೂ ಸಂಬಂಧಿಸಿದ ಸಚಿವರ ಮನೆ ಬಾಗಿಲಿಗೆ ಹೋಗಿ ಅನುದಾನ ಕೋರಲಾಗುವುದು. ಕನಕಗಿರಿ, ಕಾರಟಗಿ ತಾಲ್ಲೂಕಿನಲ್ಲಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ, ಕೃಷ್ಣಾ ‘ಬಿ’ ಸ್ಕೀಂ ಯೋಜನೆ ವ್ಯಾಪ್ತಿಯಲ್ಲಿ ಮತ್ತಷ್ಟು ಗ್ರಾಮಗಳನ್ನು ಸೇರಿಸಿ ನೀರಾವರಿ ಮಾಡುವುದು, ನದಿ ಪಾತ್ರದ ರೈತರಿಗೆ ನೀರು ಒದಗಿಸುವುದು, ತುಂಗಭದ್ರಾ ಎಡದಂಡೆ ಕಾಲುವೆ ನಂಬಿ ಕೃಷಿ ಮಾಡುತ್ತಿರುವ ರೈತಾಪಿ ವರ್ಗಕ್ಕೆ ಎರಡು ಬೆಳೆಗಳಿಗೆ ನೀರು ಒದಗಿಸಲಾಗುವುದು. ಕ್ಷೇತ್ರದಲ್ಲಿ ಒಟ್ಟು 52 ತಾಂಡಾ ಮತ್ತು ಕ್ಯಾಂಪ್‌ಗಳಿವೆ ಅವುಗಳನ್ನು ಕಂದಾಯ ಗ್ರಾಮಗಳನ್ನಾಗಿ ರೂಪಿಸಲು ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ.

ಓದು, ಬರಹ ಬರುವುದಿಲ್ಲ ಎಂಬ ಆರೋಪ ಇದೆಯಲ್ಲ?

ಅಭಿವೃದ್ಧಿ ಕೆಲಸ ಮಾಡಲು ಓದು ಬರಹ ಬೇಕಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಲು ಇಚ್ಛಾಶಕ್ತಿ ಬೇಕು. ಪ್ರತಿಯೊಬ್ಬರ ಸಲಹೆ, ಸಹಕಾರ ಪಡೆದು ಕ್ಷೇತ್ರ ಅಭಿವೃದ್ಧಿಗೊಳಿಸುವೆ.

ಗೆದ್ದವರು ಕಾರಟಗಿಯನ್ನು ಕೇಂದ್ರ ಸ್ಥಾನ ಮಾಡಿಕೊಂಡಿದ್ದಾರಲ್ಲ?

ಕನಕಗಿರಿಯಲ್ಲಿ ಶೀಘ್ರ ಬಾಡಿಗೆ ಮನೆ ಹುಡುಕಿ ಕಚೇರಿ ಆರಂಭಿಸಲಾಗುವುದು. ಕನಕಗಿರಿ, ಕಾರಟಗಿ ಸೇರಿ ಪ್ರತಿ ಗ್ರಾಮಗಳು ಅಭಿವೃದ್ಧಿ ಆಗುವುದು ಮುಖ್ಯ. ಜನರ ಕಲ್ಯಾಣ ವಿಷಯದಲ್ಲಿ ತಾರತಮ್ಯ ಮಾಡುವುದಿಲ್ಲ.

ಮೆಹಬೂಬಹುಸೇನ ಕನಕಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT