ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ ಫಲಿತಾಂಶ ಬಿಜೆಪಿಗೆ ಎಚ್ಚರಿಕೆಯ ಗಂಟೆ

Last Updated 7 ಜೂನ್ 2018, 8:04 IST
ಅಕ್ಷರ ಗಾತ್ರ

ಲೋಕಸಭೆ ಮತ್ತು ವಿಧಾನಸಭಾ ಉಪಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷದ ಸೋಲಿನ ಸರಣಿ ಮುಂದುವರೆದಿದೆ. ಗುರುವಾರ ಹೊರಬಿದ್ದಿರುವ ದೇಶದ ನಾನಾ ರಾಜ್ಯಗಳ ಉಪಚುನಾವಣಾ ಫಲಿತಾಂಶಗಳು ಆಳುವ ಪಕ್ಷ ಬಿಜೆಪಿ ಪಾಲಿಗೆ ನುಂಗಲಾರದ ತುತ್ತುಗಳು. ವರ್ಷಾಂತ್ಯದ ಹೊತ್ತಿಗೆ ಜರುಗಲಿರುವ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸಗಡ ವಿಧಾನಸಭಾ ಚುನಾವಣೆಗಳು ಮತ್ತು ಸರಿಯಾಗಿ ವರ್ಷದಾಚೆಗೆ ಲೋಕಸಭಾ ಚುನಾವಣೆಗಳು ಕದ ಬಡಿದಿರುವ ಹಿನ್ನೆಲೆಯಲ್ಲಿ ಇಂತಹ ಹಿನ್ನಡೆಯನ್ನು ಯಾವ ಆಳುವ ಪಕ್ಷವೂ ಇಷ್ಟಪಡುವುದಿಲ್ಲ. 2014ರಲ್ಲಿ ಗೆದ್ದಿದ್ದ ಇನ್ನೂ ಎರಡು ಲೋಕಸಭಾ ಸ್ಥಾನಗಳು ಗುರುವಾರ ಬಿಜೆಪಿಯ ಕೈ ತಪ್ಪಿದವು. ಕಳೆದ ಎರಡು ವರ್ಷಗಳಲ್ಲಿ ಹೀಗೆ ಬಿಜೆಪಿ ಕಳೆದುಕೊಂಡಿರುವ ಲೋಕಸಭಾ ಸ್ಥಾನಗಳ ಒಟ್ಟು ಸಂಖ್ಯೆ ಎಂಟು. ಲೋಕಸಭೆಯಲ್ಲಿ ಎನ್‌ಡಿಎ ಬಹುಮತಕ್ಕೆ ಕುಂದು ಬಂದಿಲ್ಲ. ಆದರೆ ಖುದ್ದು ಬಿಜೆಪಿಯ ಬಹುಮತ ಸೊರಗತೊಡಗಿರುವುದು ಹೌದು. ಉತ್ತರಪ್ರದೇಶದ ಕೈರಾನಾ, ಮಹಾರಾಷ್ಟ್ರದ ಪಾಲ್ಘರ್ ಮತ್ತು ಭಂಡಾರ– ಗೋಂದಿಯಾ ಹಾಗೂ ನಾಗಾಲ್ಯಾಂಡ್‌ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಸೋಮವಾರ ನಡೆದಿತ್ತು. ಬಿಹಾರ, ಜಾರ್ಖಂಡ್‌, ಕೇರಳ, ಉತ್ತರಪ್ರದೇಶ, ಉತ್ತರಾಖಂಡ, ಮಹಾರಾಷ್ಟ್ರ, ಮೇಘಾಲಯ, ಪಂಜಾಬ್, ಪಶ್ಚಿಮ ಬಂಗಾಳದ ಒಟ್ಟು ಹತ್ತು ವಿಧಾನಸಭಾ ಕ್ಷೇತ್ರಗಳಿಗೆ ಉಪಚನಾವಣೆಗಳು ನಡೆದಿದ್ದವು. ಮುಂದೂಡಲಾಗಿದ್ದ ಬೆಂಗಳೂರಿನ ರಾಜರಾಜೇಶ್ವರಿನಗರ ಕ್ಷೇತ್ರದ ಮತದಾನವೂ ಈ ಕ್ಷೇತ್ರಗಳ ಜೊತೆಗೆ ಜರುಗಿತು. ಫಲಿತಾಂಶ ಹೊರಬಿದ್ದ ನಾಲ್ಕು ಲೋಕಸಭಾ ಕ್ಷೇತ್ರಗಳ ಪೈಕಿ ಮಹಾರಾಷ್ಟ್ರದ ಪಾಲ್ಘರ್‌ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದೆ. ವಿಶೇಷವಾಗಿ ಉತ್ತರಪ್ರದೇಶದ ಕೈರಾನಾ ಲೋಕಸಭಾ ಕ್ಷೇತ್ರದ ಸೋಲು ಬಿಜೆಪಿಗೆ ನೋವು ನೀಡುವಂತಹುದು. ಅಖಿಲೇಶ್ ಯಾದವ್‌ ಅವರ ಸಮಾಜವಾದಿ ಪಾರ್ಟಿ ಮತ್ತು ಮಾಯಾವತಿ ಅವರ ಬಹುಜನ ಸಮಾಜ ಪಾರ್ಟಿ ಒಗ್ಗಟ್ಟಿನಿಂದ ಸೆಣಸಿದ ಗೋರಖಪುರ ಮತ್ತು ಫೂಲ್ಪುರ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗಳು ಇತ್ತೀಚೆಗಷ್ಟೇ ಉಂಟು ಮಾಡಿದ್ದ ಸೋಲಿನ ಗಾಯದ ಮೇಲೆ ಇದೀಗ ಕೈರಾನಾ ಮತ್ತೊಂದು ಸೋಲಿನ ಉಪ್ಪು ಉಜ್ಜಿದೆ. ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳದ ಅಭ್ಯರ್ಥಿಯನ್ನು ಸಮಾಜವಾದಿ ಪಾರ್ಟಿ ಬೆಂಬಲಿಸಿತ್ತು. ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರಲಿಲ್ಲ. ಬಹುಜನ ಸಮಾಜ ಪಾರ್ಟಿ ಕೂಡ ತನ್ನ ಪರೋಕ್ಷ ಬೆಂಬಲ ಸೂಚಿಸಿತ್ತು. ನಿಷಾದ್ ಪಾರ್ಟಿ ಮತ್ತು ಪೀಸ್ ಪಾರ್ಟಿಯಂತಹ ಸಣ್ಣ ಪಕ್ಷಗಳೂ ಪ್ರತಿಪಕ್ಷಗಳೊಡನೆ ನಿಂತವು. ಪರಿಣಾಮವಾಗಿ ಬಿಜೆಪಿಯ ಅಭ್ಯರ್ಥಿ ಭಾರಿ ಅಂತರದಿಂದ ಸೋತಿದ್ದಾರೆ. ಹನ್ನೊಂದು ವಿಧಾನಸಭಾ ಕ್ಷೇತ್ರಗಳ ಪೈಕಿ ಉತ್ತರಾಖಂಡದ ಏಕೈಕ ಗೆಲುವಿಗೆ ಬಿಜೆಪಿ ಸಮಾಧಾನಪಟ್ಟುಕೊಳ್ಳಬೇಕಾದ ಸ್ಥಿತಿ ಒದಗಿದೆ.

2013ರ ಮುಜಫ್ಫರ್‌ನಗರ ಕೋಮು ಗಲಭೆಗಳು ಪಶ್ಚಿಮ ಉತ್ತರಪ್ರದೇಶದ ಜಾಟರು ಮತ್ತು ಮುಸಲ್ಮಾನರ ನಡುವೆ ಆಳದ ಕಂದಕ ತೋಡಿದ್ದವು. ಈ ಕಂದಕದ ಲಾಭವನ್ನು ಬಿಜೆಪಿ 2014ರ ಲೋಕಸಭಾ ಚುನಾವಣೆಗಳಲ್ಲಿ ಯಥೇಚ್ಛವಾಗಿ ಪಡೆದಿತ್ತು. ಜಾಟರು ತಾವು ಪರಂಪರಾಗತವಾಗಿ ಬೆಂಬಲಿಸುತ್ತ ಬಂದಿದ್ದ ಚರಣಸಿಂಗ್ ಅವರ ರಾಷ್ಟ್ರೀಯ ಲೋಕದಳವನ್ನು ತೊರೆದು ಬಿಜೆಪಿಯ ತೆಕ್ಕೆಗೆ ಜಾರಿದ್ದರು. ರೈತ ನಾಯಕರಾಗಿದ್ದ ಚರಣಸಿಂಗ್ ಅವರು ಪ್ರಯಾಸಪಟ್ಟು ಕಟ್ಟಿದ್ದ ಜಾಟ್‌-ಮುಸ್ಲಿಂ ಮೈತ್ರಿ ಈ ಕೋಮು ಗಲಭೆಗಳ ಫಲವಾಗಿ ಮುರಿದು ಬಿದ್ದಿತ್ತು. ಪ್ರಧಾನಮಂತ್ರಿಯವರ ರೋಡ್ ಷೋ- ರ‍್ಯಾಲಿ ಸೇರಿದಂತೆ ಉತ್ತರಪ್ರದೇಶದಲ್ಲಿ ಲೋಕಸಭೆ ಉಪಚುನಾವಣೆ ಸೋಲಿನ ಸರಣಿಯನ್ನು ತಪ್ಪಿಸಲು ಬಿಜೆಪಿ ಕೈಲಾದ ಎಲ್ಲ ಪ್ರಯತ್ನಗಳನ್ನೂ ಮಾಡಿತ್ತು. ಆದರೆ ಪ್ರತಿಪಕ್ಷಗಳ ಒಗ್ಗಟ್ಟಿನ ಮುಂದೆ ಬಿಜೆಪಿಯ ಹರಸಾಹಸವೂ ಸೋಲೊಪ್ಪಿದೆ. ವಿರೋಧಪಕ್ಷಗಳು ಒಂದಾಗಿ ನಿಂತರೆ ಬಿಜೆಪಿಯ ಹಿಂದೂ-ಮುಸ್ಲಿಂ ಧ್ರುವೀಕರಣದ ರಾಜಕಾರಣವನ್ನು ಹಿಮ್ಮೆಟ್ಟಿಸುವುದು ಸಾಧ್ಯ ಎಂಬ ವಾಸ್ತವವನ್ನು ಉಪಚುನಾವಣೆಗಳು ಮತ್ತೊಮ್ಮೆ ರುಜುವಾತು ಮಾಡಿವೆ. ಉಪಚುನಾವಣೆಗಳ ಈ ವಾಸ್ತವವು ಮಿತ್ರಪಕ್ಷಗಳನ್ನು ದೂರ ಮಾಡಿಕೊಳ್ಳತೊಡಗಿರುವ ಬಿಜೆಪಿಯ ಪಾಲಿಗೆ ಎಚ್ಚರಿಕೆಯ ಗಂಟೆಯೇನೋ ಹೌದು. ಆದರೆ 2019ರ ಸಾರ್ವತ್ರಿಕ ಚುನಾವಣೆಗಳ ಫಲಿತಾಂಶವೂ ಇದೇ ಸ್ವರೂಪದಲ್ಲಿ ಬಂದೀತು ಎಂದು ನಿರೀಕ್ಷಿಸುವುದು ತಪ್ಪಾದೀತು. ಉಪಚುನಾವಣೆಗಳು ಬಹುತೇಕ ಸ್ಥಳೀಯ ವಿಷಯಗಳನ್ನು ಆಧರಿಸಿರುತ್ತವೆ. ದೇಶದ ನಾಯಕತ್ವದ ವಿರುದ್ಧ ಹೊರಬಿದ್ದ ಜನಾದೇಶ ಎಂದು ಪರಿಗಣಿಸಲು ಬರುವುದಿಲ್ಲ. ಪ್ರತಿಪಕ್ಷಗಳ ನೈಜ ಒಗ್ಗಟ್ಟು ಮತ್ತು ಅವುಗಳು ನೀಡಬಹುದಾದ ನಾಯಕತ್ವವೂ ಸಾರ್ವತ್ರಿಕ ಚುನಾವಣೆಗಳಲ್ಲಿ ಪರೀಕ್ಷೆಗೆ ಒಳಗಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT