ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡಬೇಕು ಎಂದು ರೈತರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ರೈತ ನಾಯಕ ಜಗಜೀತ್ ಸಿಂಗ್ ಡಲ್ಲೇವಾಲ್ ಅವರು ಹೇಳಿದ್ದಾರೆ ಎನ್ನಲಾದ ಹೇಳಿಕೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ. ‘ರಾಮ ಮಂದಿರದ ನಿರ್ಮಾಣದ ನಂತರ ಪ್ರಧಾನಿ ಮೋದಿ ಅವರ ಜನಪ್ರಿಯತೆ ಗಗನಕ್ಕೇರಿದೆ. ರೈತ ಚಳವಳಿಯ ಉದ್ದೇಶವು ಈ ಜನಪ್ರಿಯತೆಯನ್ನು ಕೆಳಗಿಳಿಸುವುದು’ ಎಂದು ಜಗಜೀತ್ ಹೇಳಿದ್ದಾರೆ ಎನ್ನುವ ಮಾತುಗಳು ವಿಡಿಯೊದಲ್ಲಿದೆ. ರಾಷ್ಟ್ರೀಯ ಟಿ.ವಿ. ಮಾಧ್ಯಮದಲ್ಲಿ ಹಾಗೂ ಆ ಮಾಧ್ಯಮಗಳ ಪ್ರೈಂಟೈಮ್ ಕಾರ್ಯಕ್ರಮದ ನಿರೂಪಕರು ಈ ವಿಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ತಿರುಚಲಾದ ವಿಡಿಯೊ.
‘ದಿ ಅನ್‌ಮ್ಯೂಟ್’ ಎನ್ನುವ ಫೇಸ್‌ಬುಕ್ ಖಾತೆಯಲ್ಲಿ ಜಗಜೀತ್ ಅವರು ಮಾಡಿರುವ ಭಾಷಣದ 26 ನಿಮಿಷ ಪೂರ್ಣ ಪಾಠದ ವಿಡಿಯೊ ಇದೆ. ‘ರಾಮ ಮಂದಿರದ ವಿಚಾರದಲ್ಲಿ ಮೋದಿ ಅವರ ಜನಪ್ರಿಯತೆ ಈಗ ಹೆಚ್ಚೇ ಇದೆ. ಯಾವುದೇ ಬೇಡಿಕೆ ಇರಲಿ, ಆ ಬೇಡಿಕೆಯನ್ನು ಈಡೇರಿಸದಿದ್ದರೆ ತನಗೆ ರಾಜಕೀಯವಾಗಿ ಹಾನಿಯಾಗುತ್ತದೆ ಅಂತಾದರೆ ಮಾತ್ರವೇ, ಯಾವುದೇ ರಾಜಕಾರಣಿ ಆ ಬೇಡಿಕೆಯನ್ನು ಈಡೇರಿಸುತ್ತಾನೆ. ಒಂದು ವೇಳೆ ಬೇಡಿಕೆ ಈಡೇರಿಸದಿದ್ದರೆ ಹಾನಿಯಾಗುವುದಿಲ್ಲ ಎಂದಿರುವ ಯಾವುದೇ ಬೇಡಿಕೆಯನ್ನು ಈಡೇರಿಸುವುದಿಲ್ಲ. ಮೋದಿ ಅವರ ಜನಪ್ರಿಯತೆ ಇಳಿಸದೇ ಇದ್ದರೆ, ಅವರು ನಮ್ಮ ಬೇಡಿಕೆಯತ್ತ ಗಮನ ಹರಿಸುವುದಿಲ್ಲ’ ಎಂದು ಜಗಜೀತ್ ಅವರು ಹೇಳಿದ್ದರು. ಈ ಮಾತುಗಳನ್ನೇ ತಿರುಚಿ, ಎಡಿಟ್ ಮಾಡಿ, ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.