ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಗಂಗೆ ಬೆಟ್ಟ ಸಮೀಪದ ಕಾಡಿಗೆ ಹುಲಿ, 4 ಮರಿಗಳು ಬಂದಿವೆ ಎಂಬುದು ಸುಳ್ಳು ಸುದ್ದಿ

Published : 11 ಸೆಪ್ಟೆಂಬರ್ 2024, 19:30 IST
Last Updated : 11 ಸೆಪ್ಟೆಂಬರ್ 2024, 19:30 IST
ಫಾಲೋ ಮಾಡಿ
Comments

ಮೈಲನಹಳ್ಳಿ (ರಾಮನಗರ)/ಬೆಂಗಳೂರು: ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಗಡಿ ಪ್ರದೇಶದಲ್ಲಿರುವ ಶಿವಗಂಗೆ ಬೆಟ್ಟ, ಕೌಚುಗಲ್‌ ಬೆಟ್ಟದ ಸಮೀಪದ ಕಾಡಿಗೆ ಹೆಣ್ಣು ಹುಲಿ ಮತ್ತು ನಾಲ್ಕು ಮರಿಗಳು ಬಂದಿವೆ ಎಂಬ ಸುಳ್ಳು ಸುದ್ದಿ ಹಂಚಿಕೊಳ್ಳಲಾಗುತ್ತಿದೆ.

ಹೆಣ್ಣು ಹುಲಿಯೊಂದು ನಾಲ್ಕು ಮರಿಗಳೊಂದಿಗೆ ರಸ್ತೆಯಲ್ಲಿ ಓಡಾಡುತ್ತಿರುವ ಎರಡು ವಿಡಿಯೊ ತುಣುಕುಗಳನ್ನು, ‘ಮಾಗಡಿ ತಾಲ್ಲೂಕಿನ ಉಡುಕುಂಟೆ ಗ್ರಾಮದಲ್ಲಿ ಹುಲಿಬಂದಿದೆ’ ಎಂಬ ವಿವರದೊಂದಿಗೆ ಹಂಚಿಕೊಳ್ಳಲಾಗಿದೆ. ‘ಉಡುಕುಂಟೆಗೆ ಸಮೀಪದಲ್ಲೇ ಇರುವ ಸೋಂಪುರ ಕೈಗಾರಿಕಾ ಪ್ರದೇಶದ ರಸ್ತೆಯಲ್ಲಿ ಹುಲಿ ಓಡಾಡುತ್ತಿತ್ತು’ ಎಂದೂ ಇದೇ ವಿಡಿಯೊ ತುಣುಕುಗಳನ್ನು ಹಂಚಿಕೊಳ್ಳಲಾಗಿದೆ.

ಹೀಗೆ ಹಂಚಿಕೊಂಡ ವಿಡಿಯೊವು ‘ಪ್ರಜಾವಾಣಿ’ಗೆ ಲಭ್ಯವಾಗಿತ್ತು. ಈ ಸಂಬಂಧ ಮೈಲನಹಳ್ಳಿ ಮತ್ತು ಉಡುಕುಂಟೆ ಗ್ರಾಮಸ್ಥರನ್ನು ಮಾತನಾಡಿಸಲಾಯಿತು. ಹುಲಿಯನ್ನು ಪ್ರತ್ಯಕ್ಷವಾಗಿ ನೋಡಿದ್ದಾಗಿ ಯಾರೂ ಹೇಳಲಿಲ್ಲ. ಬದಲಿಗೆ, ‘ಇನ್ನೊಬ್ಬರು ನೋಡಿ ನಮಗೆ ಹೇಳಿದ್ದು’ ಎಂದು ಮಾಹಿತಿ ನೀಡಿದರು.

ಹೀಗಾಗಿ ವಿಡಿಯೊ ತುಣುಕುಗಳ ಸತ್ಯಾಸತ್ಯತೆಯನ್ನು ‘ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌’ ಮೂಲಕ ಪರಿಶೀಲಿಸಲಾಯಿತು. ವಿಡಿಯೊ ತುಣುಕಿನ ‘ಸ್ಕ್ರೀನ್‌ಶಾಟ್‌’ ಅನ್ನು ಹಾಕಿ, ‘ಇಮೇಜ್‌ ಸರ್ಚ್‌’ನಲ್ಲಿ ಹುಡುಕಿದಾಗ ಮೂಲ ವಿಡಿಯೊ ತುಣುಕು ಸಿಕ್ಕಿತು. ಐಎಫ್‌ಎಸ್‌ ಅಧಿಕಾರಿ ರಮೇಶ್ ಪಾಂಡೆ ಅವರು 2020ರ ನವೆಂಬರ್ 9ರಂದು 87 ಸೆಕೆಂಡ್‌ಗಳಷ್ಟು ಅವಧಿಯ ಈ ವಿಡಿಯೊವನ್ನು ಮೊದಲ ಬಾರಿಗೆ ‘ಎಕ್ಸ್‌’ನಲ್ಲಿ ಅಪ್‌ಲೋಡ್‌ ಮಾಡಿದ್ದರು. 

‘ಎಕ್ಸ್‌’ ಮೂಲಕ ಅವರನ್ನು ಸಂಪರ್ಕಿಸಿದಾಗ, ‘ಉತ್ತರ ಪ್ರದೇಶದ ದುದುವಾ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ರಾತ್ರಿ ಗಸ್ತು ತಿರುಗುವ ವೇಳೆ ಅರಣ್ಯ ಸಿಬ್ಬಂದಿಯೊಬ್ಬರಿಗೆ ಈ ಹುಲಿ ಮತ್ತು ಅದರ ನಾಲ್ಕು ಮರಿಗಳು ಎದುರಾಗಿದ್ದವು. ಅವರು ನೀಡಿದ್ದ ವಿಡಿಯೊವನ್ನು ನಾನೇ ಅಪ್‌ಲೋಡ್‌ ಮಾಡಿದ್ದೆ’ ಎಂದು ಮಾಹಿತಿ ನೀಡಿದರು.

ಹೀಗೆ ಉತ್ತರ ಪ್ರದೇಶಕ್ಕೆ ಸಂಬಂಧಿಸಿದ ಮತ್ತು ನಾಲ್ಕು ವರ್ಷಗಳಷ್ಟು ಹಳೆಯದಾದ ವಿಡಿಯೊ ತುಣುಕುಗಳನ್ನು ಶಿವಗಂಗೆ ಮತ್ತು ಕೌಚುಗಲ್‌ ಬೆಟ್ಟದ್ದು ಎಂದು ಹಂಚಿಕೊಳ್ಳಲಾಗುತ್ತಿದೆ.

‘ಗಾಬರಿಯಾಗುವ ಅವಶ್ಯಕತೆ ಇಲ್ಲ’
‘ಶಿವಗಂಗೆ ಕೌಚುಗಲ್‌ ಬೆಟ್ಟಗಳಿಗೆ ಹೊಂದಿಕೊಂಡಿರುವ ಅರಣ್ಯವು ಹುಲಿಯ ಆವಾಸಕ್ಕೆ ಹೇಳಿಮಾಡಿಸಿದಂತಿಲ್ಲ. ಇಲ್ಲಿ ಹುಲಿಗಳೂ ಇಲ್ಲ. ಹೀಗಿದ್ದೂ ಈ ಸುದ್ದಿ ಹಂಚಿಕೆಯಾದ ಬೆನ್ನಲ್ಲೇ ಅರಣ್ಯ ಕಾವಲುಗಾರರಿಂದ ಮಾಹಿತಿ ಪಡೆದುಕೊಳ್ಳಲಾಯಿತು. ಯಾವುದೇ ಹುಲಿಗಳು ಬಂದಿಲ್ಲ ಎಂಬುದು ಖಚಿತವಾಯಿತು. ಯಾರೋ ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ’ ಎಂದು ಮಾಗಡಿ ಅರಣ್ಯ ವಲಯ ಅಧಿಕಾರಿ ಚೈತ್ರಾ ಜಿ.ಕೆ. ಹೇಳಿದರು. ‘ಉಡುಕುಂಟೆ ಮೈಲನಹಳ್ಳಿ ಗೊಲ್ಲರಹಟ್ಟಿ ಬೈರಸಂದ್ರ ಗ್ರಾಮಗಳ ಎಲ್ಲರ ಮೊಬೈಲ್‌ಗಳಿಗೂ ವಿಡಿಯೊ ತುಣುಕುಗಳನ್ನು ಹಂಚಿಕೊಳ್ಳಲಾಗಿದೆ. ಆದರೆ ಇದು ಸುಳ್ಳಾಗಿರುವ ಕಾರಣ ಜನರು ಗಾಬರಿಯಾಗುವ ಅವಶ್ಯಕತೆ ಇಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT