ನವದೆಹಲಿ(ಪಿಟಿಐ): ಮಹಾಮಳೆಯಿಂದ ಹಾನಿಗೊಳಗಾಗಿರುವ ಉತ್ತರಾಖಂಡದ ಮರು ನಿರ್ಮಾಣ ಹಾಗೂ ಪುನರ್‌ವಸತಿ ಕಾರ್ಯಕ್ಕೆ ವಿಶ್ವಬ್ಯಾಂಕ್ ಹಾಗೂ ಏಷ್ಯಾ ಅಭಿವೃದ್ಧಿ ಬ್ಯಾಂಕ್ ನೆರವು ಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
`ಪ್ರವಾಹದಿಂದಾಗಿ ಹಾನಿಯಾಗಿರುವ ಆಸ್ತಿಪಾಸ್ತಿ ಸರಿಪಡಿಸಲು ಹಾಗೂ ಪರಿಹಾರ ಕಾರ್ಯ ಕೈಗೊಳ್ಳಲು ಹಣದ ಕೊರತೆಯಾಗಬಾರದು. ಈ ಹಿಂದೆ ಸುನಾಮಿ ಸಂಭವಿಸಿದ್ದ ವೇಳೆ ವಿಶ್ವಬ್ಯಾಂಕ್ ಹಾಗೂ ಏಷ್ಯಾ ಅಭಿವೃದ್ಧಿ ಬ್ಯಾಂಕಿನಿಂದ ಹಣಕಾಸಿನ ನೆರವು ಪಡೆಯಲಾಗಿತ್ತು. ಅದೇ ರೀತಿ ಹಿಮಾಲಯ ಸುನಾಮಿಗೂ ಹಣಕಾಸು ನೆರವು ಪಡೆಯಲಾಗುವುದು' ಎಂದು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
`ಈಗಾಗಲೇ ಪ್ರಧಾನಿ ರೂ1000 ಕೋಟಿ ನೆರವು ಘೋಷಿಸಿದ್ದಾರೆ. ವಿವಿಧ ಸಚಿವರು ಸಹ ತಮ್ಮ ಅಭಿವೃದ್ಧಿ ನಿಧಿಯನ್ನು ಪರಿಹಾರ ಕಾರ್ಯಕ್ಕೆ ಬಳಸುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆ ರೂ 100 ಕೋಟಿ ನೀಡುವುದಾಗಿ ಹೇಳಿದೆ. ಯಾವುದೇ ಕಾರಣಕ್ಕೂ ಮರುನಿರ್ಮಾಣ ಕೆಲಸಕ್ಕೆ ಹಣದ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತದೆ' ಎಂದು ವಿವರಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಉತ್ತರಾಖಂಡದಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಲು ಗೃಹ ಸಚಿವಾಲಯ ಹಾಗೂ ಹಣಕಾಸು ಸಚಿವಾಲಯದ ಜಂಟಿ ತಂಡ ಭೇಟಿ ನೀಡಿ ಆ ರಾಜ್ಯದ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದೆ. ಪ್ರಧಾನಿ ಘೋಷಿಸಿರುವ ರೂ 1000 ಕೋಟಿ ಹಣಕಾಸು ನೆರವಿನಲ್ಲಿ ರೂ 145 ಕೋಟಿಯನ್ನು ಕೂಡಲೇ ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.
ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ರೂ 2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ರೂ 50,000 ನೆರವನ್ನು ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ನೀಡುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಕಳೆದ ತಿಂಗಳು ತಿಳಿಸಿದ್ದರು.
ಇನ್ನೊಂದು ಸುದ್ದಿ, ಚಿತ್ರ ಪುಟ 7
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.