ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಹಣ ವಾಪಸ್‌ಕೇಂದ್ರದ ಪಣ

Last Updated 21 ಫೆಬ್ರವರಿ 2011, 18:25 IST
ಅಕ್ಷರ ಗಾತ್ರ


ನವದೆಹಲಿ (ಪಿಟಿಐ):
ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಸಮಗ್ರತೆ ಮಾಯವಾಗಿರುವುದರ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರವು, ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪು ಹಣವನ್ನು ವಾಪಸ್ ತರಲು ಬದ್ಧ ಎಂದು ಘೋಷಿಸಿದೆ.

 ಚುನಾವಣೆ ಸುಧಾರಣೆ, ನ್ಯಾಯಾಂಗ ಹೊಣೆಗಾರಿಕೆಯಂತಹ ಕ್ರಮಗಳ ಮೂಲಕ ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಆಡಳಿತದಲ್ಲಿ ಪಾರದರ್ಶಕತೆ ತಂದು ಗುಣಮಟ್ಟ ಸುಧಾರಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದೆ.

ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಮಾಡಿದ ಭಾಷಣದಲ್ಲಿ ಸರ್ಕಾರ ಈ ವಿಚಾರಗಳನ್ನು ತಿಳಿಸಿದೆ.

ಸುಮಾರು 50 ನಿಮಿಷಗಳ ಕಾಲ ಭಾಷಣ ಮಾಡಿದ ರಾಷ್ಟ್ರಪತಿ, ವಿದೇಶಿ ಬ್ಯಾಂಕುಗಳಲ್ಲಿನ ಕಪ್ಪು ಹಣದ ವಿಚಾರವನ್ನು ಪ್ರಸ್ತಾಪಿಸಿದರು. ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮವಾಗಿ ಇರಿಸಲಾಗಿರುವ ಹಣವನ್ನು ದೇಶಕ್ಕೆ ಮರಳಿ ತರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದರು.

ಸರ್ಕಾರ ಈಗಾಗಲೇ ಆರಂಭಿಸಿರುವ ಕೆಲವು ಕ್ರಮಗಳು ಉತ್ತಮ ಪರಿಣಾಮ ಬೀರುತ್ತಿದ್ದು 34,601 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ ಹಾಗೂ 48,784 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಹಣವನ್ನು ಪತ್ತೆ ಹಚ್ಚಲಾಗಿದೆ ಎಂದು ರಾಷ್ಟ್ರಪತಿ ತಿಳಿಸಿದರು.

ಹೆಚ್ಚುತ್ತಿರುವ ಹಣದುಬ್ಬರದ ಬಗ್ಗೆ ಅವರು ತೀವ್ರ ಆತಂಕ ವ್ಯಕ್ತಪಡಿಸಿದರು. ಮುಂದಿನ ಹಣಕಾಸು ವರ್ಷದಲ್ಲಿ ಹಣದುಬ್ಬರವನ್ನು ನಿಯಂತ್ರಣಕ್ಕೆ ತಂದು ಆಹಾರಧಾನ್ಯಗಳ ಬೆಲೆಯನ್ನು ನಿಯಂತ್ರಿಸಿ ಸಾಮಾನ್ಯ ಜನರ ಜೀವನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.

ಆಡಳಿತದಲ್ಲಿ ಭ್ರಷ್ಟಾಚಾರವನ್ನು ತಡೆಯಲು ಮತ್ತು ಪಾರದರ್ಶಕತೆಯನ್ನು ಜಾರಿಗೆ ತರಲು ರಚಿಸಲಾಗಿರುವ ಸಚಿವರ ತಂಡವು ಕಾನೂನು ಮತ್ತು ಆಡಳಿತಾತ್ಮಕ ಕ್ರಮದ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ಆಹಾರಧಾನ್ಯ ಸಂಗ್ರಹದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಸಚಿವರ ತಂಡವು ಹೊಸ ಆಹಾರಧಾನ್ಯ ಸಂಗ್ರಹ ನೀತಿಯನ್ನು ರೂಪಿಸುವುದರ ಬಗ್ಗೆ ಚಿಂತನೆ ನಡೆಸುತ್ತಿದೆ ಮತ್ತು ಸಚಿವರ ವಿವೇಚನಾ ಅಧಿಕಾರವನ್ನು ರದ್ದುಪಡಿಸುವ ಬಗ್ಗೆಯೂ ಗಂಭೀರ ಚಿಂತನೆ ನಡೆದಿದೆ ಎಂದು ರಾಷ್ಟ್ರಪತಿ ತಿಳಿಸಿದರು.

ಆರ್ಥಿಕಾಭಿವೃದ್ಧಿ ವೇಗವನ್ನು ಹೆಚ್ಚಿಸುವುದು, ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಯ ಮೇಲೆ ಸತತ ನಿಗಾ ಇಡುವುದು ಹಾಗೂ ಜಾಗತಿಕ ಮಟ್ಟದಲ್ಲಿ ಭಾರತದ ಹಿತ ಕಾಪಾಡುವಂತಹ ವಿದೇಶಾಂಗ ನೀತಿಯನ್ನು ಅನುಸರಿಸುವುದು ಕೇಂದ್ರ ಸರ್ಕಾರದ ಇತರ ಆದ್ಯತೆಗಳಾಗಿವೆ.

ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆಗೆ ಮುಕ್ತ ಮತ್ತು ಸ್ಪರ್ಧಾತ್ಮಕ ವ್ಯವಸ್ಥೆಯನ್ನು ಜಾರಿ ಮಾಡುವುದು, ಸರ್ಕಾರಿ ನೌಕರರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ತ್ವರಿತ ವಿಲೇವಾರಿಗೆ ಕಾನೂನು ತಿದ್ದುಪಡಿ ಮಾಡುವ ಬಗ್ಗೆ ಸಚಿವರ ತಂಡ ಸೂಕ್ತ ಶಿಫಾರಸುಗಳನ್ನು ಮಾಡಲಿದೆ.

ಚುನಾವಣಾ ವೆಚ್ಚ: ಸರ್ಕಾರವೇ ಚುನಾವಣಾ ವೆಚ್ಚ ಭರಿಸುವ ಬಗ್ಗೆ ಸಹ ಸಚಿವರ ತಂಡ ವರದಿಯನ್ನು ಸಿದ್ಧಪಡಿಸುತ್ತಿದೆ. ಶೀಘ್ರದಲ್ಲಿಯೇ ಈ ವರದಿ ಸರ್ಕಾರದ ಕೈಸೇರಲಿದೆ ಎಂದು ಅವರು ತಿಳಿಸಿದರು.

ಚುನಾವಣೆ ಸುಧಾರಣೆ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳೂ ಒಲವು ತೋರಿರುವುದರಿಂದ ಸರ್ಕಾರ ಚುನಾವಣೆ ಸುಧಾರಣೆಗೆ ಂಬಂಧಿಸಿದಂತೆ ಸಮಿತಿಯೊಂದನ್ನು ರಚಿಸಿದ್ದು, ಈ ಸಮಿತಿ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಈಗಾಗಲೇ ಸಮಿತಿಯು ಪ್ರದೇಶವಾರು ಸಮ್ಮೇಳನಗಳನ್ನು ನಡೆಸಿ ಚುನಾವಣೆ ಸುಧಾರಣೆಗೆ ಸಂಬಂಧಿಸಿದ ಸಲಹೆ ಸೂಚನೆಗಳನ್ನು ಪಡೆದಿದೆ. ಏಪ್ರಿಲ್‌ನಲ್ಲಿ ರಾಷ್ಟ್ರಮಟ್ಟದ ಸಮ್ಮೇಳನವನ್ನು ನಡೆಸಿ ಅಂತಿಮವಾಗಿ ವರದಿಯನ್ನು ಸಲ್ಲಿಸಲಿದೆ ಎಂದು ಹೇಳಿದರು.

ಅದೇ ರೀತಿ ನ್ಯಾಯಾಂಗ ಸುಧಾರಣೆಗೂ ಸರ್ಕಾರ ಕ್ರಮ ತೆಗೆದುಕೊಂಡಿದ್ದು, ಮಾಹಿತಿ ತಂತ್ರಜ್ಞಾನವನ್ನು ಸಮರ್ಕವಾಗಿ ಬಳಸಿಕೊಂಡು ತ್ವರಿತ ನ್ಯಾಯದಾನಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಹಿಂಸಾಚಾರ; ಕಳವಳ: ಆಂತರಿಕ ಭದ್ರತೆಯ ವಿಚಾರವನ್ನು ಪ್ರಸ್ತಾಪಿಸಿದ ಅವರು, ಇತ್ತೀಚಿನ ದಿನಗಳಲ್ಲಿ ದೇಶದ ಕೆಲವು ಭಾಗಗಳಲ್ಲಿ ಅದರಲ್ಲೂ ಕಾಶ್ಮೀರ ಮತ್ತು ನಕ್ಸಲ ಉಪಟಳವಿರುವ ಪ್ರದೇಶಗಳಲ್ಲಿ ಹಿಂಸಾಚಾರ ಹೆಚ್ಚಿ ಸಾವು ನೋವುಗಳು ಸಂಭವಿಸಿವೆ ಎಂದು ಹೇಳಿದರು.

ಆದರೆ ದೇಶದ ಬಹುತೇಕ ಕಡೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ ಉತ್ತಮವಾಗಿದೆ ಎಂದು ಅವರು ಸಮಾಧಾನ ವ್ಯಕ್ತಪಡಿಸಿದರು. ನಕ್ಸಲೀಯರ ಹಾವಳಿ ಜಾಸ್ತಿ ಇರುವ ರಾಜ್ಯಗಳಲ್ಲಿ ಪೊಲೀಸ್ ಪಡೆ ಬಲವರ್ಧನೆಗೆ ತೆಗೆದುಕೊಂಡಿರುವ ಕ್ರಮಗಳು ಕ್ರಮೇಣ ಫಲಿತಾಂಶ ನೀಡುತ್ತಿದೆ ಎಂದು ಪಾಟೀಲ್ ತೃಪ್ತಿ ವ್ಯಕ್ತಪಡಿಸಿದರು.

9 ರಾಜ್ಯಗಳ 60 ಜಿಲ್ಲೆಗಳಲ್ಲಿಯ ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ ಸಮಗ್ರ ಕ್ರಿಯಾ ಯೋಜನೆಯನ್ನು ಮಂಜೂರು ಮಾಡಲಾಗಿದ್ದು, ಸ್ಥಳೀಯ ಅಗತ್ಯಗಳನ್ನು ಪೂರೈಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದರು.

ಪರಿಸ್ಥಿತಿ ಸುಧಾರಣೆ: ಕೇಂದ್ರ ಸರ್ಕಾರ ತೆಗೆದುಕೊಂಡ ಸಕಾರಾತ್ಮಕ ಕ್ರಮಗಳಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಿದೆ. ಅದೇ ರೀತಿ ದೇಶದ ಈಶಾನ್ಯ ಭಾಗದಲ್ಲಿಯೂ ಬಂಡುಕೋರ ಗುಂಪುಗಳು ಹಿಂಸಾಕೃತ್ಯವನ್ನು ತ್ಯಜಿಸಿದ್ದಾರೆ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT