ಪ್ರಜಾವಾಣಿ ವಾರ್ತೆ
ನವದೆಹಲಿ: ಬಿಆರ್‌ಎಸ್ ಪಕ್ಷದ ನಾಯಕಿ ಕೆ. ಕವಿತಾ ಅವರಿಗೆ ಜಾಮೀನು ನೀಡಿದ ವಿಚಾರವಾಗಿ ಸುಪ್ರೀಂ ಕೋರ್ಟ್ ಬಗ್ಗೆ ಆಡಿದ ಮಾತುಗಳಿಗೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರಿಗೆ ನೋಟಿಸ್ ಜಾರಿಗೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.
2015ರಲ್ಲಿ ನಡೆದ ‘ಓಟಿಗಾಗಿ ನೋಟು’ ಹಗರಣಕ್ಕೆ ಸಂಬಂಧಿಸಿದಂತೆ ರೇವಂತ್ ರೆಡ್ಡಿ ಹಾಗೂ ಇತರರ ವಿರುದ್ಧ ನಡೆಯುತ್ತಿರುವ ವಿಚಾರಣೆಯನ್ನು ತೆಲಂಗಾಣದ ಆಚೆಗೆ ಸ್ಥಳಾಂತರ ಮಾಡಬೇಕು ಎಂಬ ಮನವಿಯನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್, ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುವಾಗ ಅವರು ಸಂಯಮ ಪ್ರದರ್ಶಿಸಬೇಕು ಎಂದು ಹೇಳಿತು.
ಬಿಆರ್‌ಎಸ್ ಶಾಸಕ ಗುಂತಕಂಡ್ಲ ಜಗದೀಶ ರೆಡ್ಡಿ ಮತ್ತು ಮೂವರು ಇತರರು ಸಲ್ಲಿಸಿದ ಅರ್ಜಿಯ ವಿಚಾರವಾಗಿ ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ರೇವಂತ್ ರೆಡ್ಡಿ ಮತ್ತು ಇತರರಿಗೆ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಹಾಗೂ ಕೆ.ವಿ. ವಿಶ್ವನಾಥನ್ ಅವರು ಇರುವ ವಿಭಾಗೀಯ ಪೀಠವು ಸೂಚಿಸಿದೆ.
ರೇವಂತ್ ರೆಡ್ಡಿ ವಿರುದ್ಧದ ವಿಚಾರಣೆಯನ್ನು ಭೋಪಾಲ್‌ಗೆ ಸ್ಥಳಾಂತರಿಸಬೇಕು ಎಂದು ಜಗದೀಶ ರೆಡ್ಡಿ ಕೋರಿದ್ದಾರೆ. ರಾಜ್ಯದ ಗೃಹ ಇಲಾಖೆಯ ಹೊಣೆಯನ್ನೂ ಹೊತ್ತಿರುವ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ತಮ್ಮ ವಿರುದ್ಧದ ಪ್ರಕರಣದ ಕುರಿತು ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಸುಪ್ರೀಂ ಕೋರ್ಟ್ ನೀಡಿದ ಆದೇಶದ ಬಗ್ಗೆ ಮಾತನಾಡಲು ರೇವಂತ್ ರೆಡ್ಡಿ ಧೈರ್ಯ ಮಾಡುವುದಾದಲ್ಲಿ, ಅವರಿಗೆ ಪೊಲೀಸರು ಹಾಗೂ ಪ್ರತ್ಯಕ್ಷದರ್ಶಿಗಳ ಮೇಲೆ ಪ್ರಭಾವ ಬೀರುವುದು ಕಷ್ಟವೇನೂ ಅಲ್ಲ ಎಂದು ಜಗದೀಶ ರೆಡ್ಡಿ ಅವರು ಅರ್ಜಿಯಲ್ಲಿ ಹೇಳಿದ್ದಾರೆ.
‘ಉನ್ನತ ಹುದ್ದೆಗಳಲ್ಲಿ ಇರುವವರು ಸಂಯಮ ತೋರಬೇಕು’ ಎಂದು ಹೇಳಿದ ಪೀಠವು, ‘ನ್ಯಾಯಮೂರ್ತಿಗಳು ಬರುತ್ತಾರೆ, ಹೋಗುತ್ತಾರೆ... ಆದರೆ, ದುರದೃಷ್ಟವಶಾತ್ ರೇವಂತ್ ರೆಡ್ಡಿ ಅವರ ಸ್ವಾತಂತ್ರ್ಯಕ್ಕೆ ಧಕ್ಕೆ ಎದುರಾದಲ್ಲಿ ಈ ನ್ಯಾಯಾಲಯವೇ ಅವರನ್ನು ರಕ್ಷಿಸಬೇಕು’ ಎಂದು ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.