ಭುವನೇಶ್ವರ: ಸೇನಾಧಿಕಾರಿ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಹಾಗೂ ಆತನ ಭಾವಿ ಪತ್ನಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಂಬಂಧಿಸಿ ಒಡಿಶಾ ಸರ್ಕಾರವು ನ್ಯಾಯಾಂಗ ತನಿಖೆಗೆ ಆದೇಶಿಸಿದೆ.
ತನಿಖೆ ನಡೆಸುವುದಾಗಿ ಸರ್ಕಾರವು ಭಾನುವಾರವೇ ಆದೇಶ ಹೊರಡಿಸಿತ್ತು. ಹೀಗಾಗಿ, ಸೋಮವಾರ ಮಹಿಳೆಯ ತಂದೆ ನಿವೃತ್ತ ಸೇನಾಧಿಕಾರಿ, ದೌರ್ಜನ್ಯಕ್ಕೆ ಒಳಗಾದ ಸೇನಾಧಿಕಾರಿ ಹಾಗೂ ಮಹಿಳೆಯು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರನ್ನು ಭೇಟಿ ಮಾಡಿದರು.
ಭೇಟಿ ಬಳಿಕ ಮಾತನಾಡಿದ ಮಹಿಳೆಯ ತಂದೆ, ‘ನ್ಯಾಯಾಂಗ ತನಿಖೆ ನಡೆಸಿ ಎಂದು ನಾವು ಸರ್ಕಾರವನ್ನು ಒತ್ತಾಯಿಸಿದ್ದೆವು. ಅದರಂತೆಯೇ ಸರ್ಕಾರವು ನಡೆದುಕೊಂಡಿದೆ. ಇದಕ್ಕಾಗಿ ಮುಖ್ಯಮಂತ್ರಿ ಅವರಿಗೆ ಧನ್ಯವಾದ ತಿಳಿಸುತ್ತೇವೆ’ ಎಂದರು.
ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಚಿತ್ತರಂಜನ್ ದಾಸ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, 60 ದಿನಗಳ ಒಳಗಾಗಿ ವರದಿ ನೀಡಬೇಕು ಎಂದು ಸರ್ಕಾರ ಹೇಳಿದೆ.