ನವದೆಹಲಿ: ಈಶಾನ್ಯ, ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಭಾನುವಾರ ಧಾರಾಕಾರ ಮಳೆಯಾಗಿದ್ದು, ಈ ಸಂಬಂಧಿತ ಅವಘಡಗಳಲ್ಲಿ 28 ಮಂದಿ ಸತ್ತಿದ್ದಾರೆ. ಭೂಕುಸಿತ, ಮನೆಕುಸಿತ ಪ್ರಕರಣಗಳು ವರದಿಯಾಗಿವೆ.
ಧಾರಾಕಾರ ಮಳೆಯಿಂದಾಗಿ ಜಮ್ಮು ಮತ್ತು ಕಾಶ್ಮೀರದ ಆಡಳಿತವು ವಾರ್ಷಿಕ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಿದೆ.
ರಾಜಸ್ಥಾನದಲ್ಲಿ 2 ದಿನದಲ್ಲಿ 16 ಮಂದಿ ಸತ್ತಿದ್ದಾರೆ. ಕರೌಲಿ ಜಿಲ್ಲೆಯಲ್ಲಿ 38 ಸೆಂ.ಮೀ. ಮಳೆಯಾಗಿದೆ. ಹರಿಯಾಣದಲ್ಲಿ ಅಣೆಕಟ್ಟೆಯೊಂದಕ್ಕೆ ಹಾನಿಯಾಗಿದ್ದು, ಹಲವು ಗ್ರಾಮಗಳು ಜಲಾವೃತವಾಗಿವೆ.
ಪಂಜಾಬ್‌ನ ಹೋಶಿಯಾರ್‌ಪುರ್‌ನಲ್ಲಿ ಭಾನುವಾರ ವಾಹನವೊಂದು ಕೊಚ್ಚಿಹೋಗಿದ್ದು, ಒಂದೇ ಕುಟುಂಬದ 9 ಮಂದಿ ಮೃತಪಟ್ಟಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಭೂಕುಸಿತದಿಂದಾಗಿ ಮೂವರು ಬಾಲಕಿಯರು ಸತ್ತಿದ್ದು, ಒಬ್ಬ ನಾಪತ್ತೆಯಾಗಿದ್ದಾನೆ. ಎರಡು ದಿನ ಧಾರಾಕಾರ ಮಳೆಯಾಗಿದೆ. ರಾಜ್ಯದಲ್ಲಿ 280 ರಸ್ತೆಗಳು ಜಲಾವೃತವಾಗಿ ಸಂಚಾರ ಸ್ಥಗಿತವಾಗಿತ್ತು.
ಉತ್ತರ ಪ್ರದೇಶದ ಜಲೌನ್‌ನಲ್ಲಿ ಮನೆಯೊಂದು ಕುಸಿದು ಮಹಿಳೆ ಮತ್ತು ಆಕೆಯ ಏಳು ವರ್ಷದ ಪುತ್ರನೊಬ್ಬ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ರಾಜಧಾನಿ ನವದೆಹಲಿಯ ವಿವಿಧೆಡೆಯೂ ಭಾರಿ ಮಳೆಯಾಗಿದ್ದು, ಹಲವು ಪ್ರದೇಶಗಳು ಜಲಾವೃತವಾಗಿದ್ದವು. ಗುರುಗ್ರಾಮದಲ್ಲಿ ಗರಿಷ್ಠ ಅಂದರೆ 70 ಮಿ.ಮೀ. ಮಳೆ ಸುರಿದಿರುವುದು ದಾಖಲಾಗಿದೆ.