ಬೆಂಗಳೂರು: ದೇಶದಲ್ಲಿ ಈ ಬಾರಿ ಮದುವೆ ಸಮಾರಂಭವು ದೊಡ್ಡ ಮಟ್ಟದಲ್ಲಿ ಇರುವ ನಿರೀಕ್ಷೆ ಮಾಡಲಾಗಿದೆ. ನವೆಂಬರ್ 23ರಿಂದ ಡಿಸೆಂಬರ್ 15ರವರೆಗಿನ ಅವಧಿಯಲ್ಲಿ 35 ಲಕ್ಷ ಮದುವೆಗಳು ನಡೆಯಲಿದ್ದು, ಅದರಿಂದ ಒಟ್ಟು ₹4.25 ಲಕ್ಷ ಕೋಟಿ ವರಮಾನ ಸೃಷ್ಟಿಯಾಗುವ ಅಂದಾಜು ಮಾಡಲಾಗಿದೆ.
ಅಖಿಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ನಡೆಸಿರುವ ಸಮೀಕ್ಷೆಯಿಂದ ಈ ಮಾಹಿತಿ ತಿಳಿದುಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೇ 3.5 ಲಕ್ಷ ಮದುವೆಗಳು ನಡೆಯಲಿದ್ದು, ₹1 ಲಕ್ಷ ಕೋಟಿ ಮೌಲ್ಯದ
ವಹಿವಾಟು ಆಗುವ ನಿರೀಕ್ಷೆ ಇದೆ ಎಂದು ಒಕ್ಕೂಟವು ತಿಳಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 32 ಲಕ್ಷ ಮದುವೆಗಳು ನಡೆದಿದ್ದು, ವಹಿವಾಟಿನ ಒಟ್ಟು ಮೌಲ್ಯವು ಒಟ್ಟು ₹3.75 ಲಕ್ಷ ಕೋಟಿ ಆಗಿತ್ತು ಎಂದು ತಿಳಿಸಿದೆ.
ಬಾಂಕ್ವೆಟ್ ಹಾಲ್, ಹೋಟೆಲ್, ಸಮುದಾಯ ಕೇಂದ್ರಗಳು ಸೇರಿದಂತೆ ಹಲವು ಸ್ಥಳಗಳಲ್ಲಿ ಮದುವೆ ಸಮಾರಂಭದ ಬೇಡಿಕೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ ಎಂದು ಮಹಾಸಂಘದ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ. ಭಾರ್ತಿಯಾ ಹೇಳಿದ್ದಾರೆ.
ಮದುವೆ ಸಮಾರಂಭದ ಬೇಡಿಕೆಗೆ ದೇಶದಾದ್ಯಂತ ವ್ಯಾಪಾರಿಗಳು ಭರದ ಸಿದ್ಧತೆ ನಡೆಸುತ್ರಿದ್ಧಾರೆ. ಮನೆಗೆ ಬಣ್ಣ ಬಳಿಯುವುದರಿಂದ ಹಿಡಿದು ಶುಭ ಕಾರ್ಯಕ್ರಮಗಳಿಗೆ ಖರೀದಿ, ಚಿನ್ನಾಭರಣ, ಅಲಂಕಾರ, ಆಹಾರ ತಿನಿಸು, ಕೇಟರಿಂಗ್ ಸೇವೆಗಳು, ಕ್ಯಾಬ್, ತರಕಾರಿ ವ್ಯಾಪಾರಿಗಳು, ಫೊಟೊಗ್ರಾಫರ್, ವಿಡಿಯೊಗ್ರಾಫರ್, ಡಿ.ಜೆ... ಹೀಗೆ ಪ್ರತಿಯೊಬ್ಬರೂ ಸಜ್ಜಾಗುತ್ತಿದ್ದಾರೆ ಎಂದು ಅವರು ತಿಳಿಸಿದ್ಧಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.