ಬದೌನ್(ಉತ್ತರ ಪ್ರದೇಶ): ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಶಾಲಾ ವಾಹನ ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮಕ್ಕಳು ಮತ್ತು ಡ್ರೈವರ್ ಸೇರಿ ಐದು ಮಂದಿ ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿದ್ದಾರೆ.
ಗೌತ್ರಾದ ಎಸ್‌ಆರ್‌ಪಿಎಸ್ ಇಂಗ್ಲೀಷ್ ಮಾಧ್ಯಮ ಶಾಲೆಯ ಮಾರುತಿ ವ್ಯಾನ್ ಮತ್ತು ಸತ್ಯದೇವ್ ಇಂಟರ್ ಕಾಲೇಜ್ ಬಸ್ ನಡುವೆ ಅಪಘಾತ ಸಂಭವಿಸಿದೆ ಎಂದು ಬದೌನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಮನೋಜ್ ಕುಮಾರ್ ಹೇಳಿದ್ದಾರೆ.
ವ್ಯಾನ್ ಚಾಲಕ ಒಮೇಂದ್ರ(28), ವಿದ್ಯಾರ್ಥಿಗಳಾದ ಖುಷಿ(6), ಪಾರುಲ್(9), ಹರ್ಷಿತ್(9) ಮತ್ತು ಇನ್ನೂ ಗುರುತು ಪತ್ತೆಯಾಗದ ವಿದ್ಯಾರ್ಥಿಯೊಬ್ಬ ಅಸುನೀಗಿದ್ದಾನೆ.
ಗಾಯಗೊಂಡ ವಿದ್ಯಾರ್ಥಿಗಳಲ್ಲಿ 6 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಸುಮಾರು 20 ವಿದ್ಯಾರ್ಥಿಗಳು ಮಾರುತಿ ವ್ಯಾನ್‌ನಲ್ಲಿದ್ದರು. ಗುಂಡಿ ಬಿದ್ದ ರಸ್ತೆಯಲ್ಲಿ ಚಲಿಸುವಾಗ ವಾಹನ ನಿಯಂತ್ರಣ ಕಳೆದುಕೊಂಡು ಅವಘಡ ಸಂಭವಿಸಿದೆ ಎಂದೂ ಅಧಿಕಾರಿ ತಿಳಿಸಿದ್ಧಾರೆ. ಘಟನೆ ಕುರಿತಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.