ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕ ಧ್ವಜ ಅಪವಿತ್ರ ಆರೋಪ: ಘರ್ಷಣೆ, ಬಿಜೆಪಿ ಮುಖಂಡ ಸೇರಿ ಹಲವರ ಬಂಧನ

ಜಾರ್ಖಂಡ್‌ನ ಜಮ್‌ಷೆಡ್‌ಪುರದ ಶಾಸ್ತ್ರಿನಗರದಲ್ಲಿ ನಡೆದ ಘಟನೆ
Last Updated 10 ಏಪ್ರಿಲ್ 2023, 14:17 IST
ಅಕ್ಷರ ಗಾತ್ರ

ಜಮ್‌ಷೆಡ್‌ಪುರ (ಜಾರ್ಖಂಡ್‌): ‘ಇಲ್ಲಿನ ಶಾಸ್ತ್ರಿನಗರದಲ್ಲಿ ಧಾರ್ಮಿಕ ಧ್ವಜವನ್ನು ಅಪವಿತ್ರಗೊಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ನಡೆದ ಘರ್ಷಣೆಯಲ್ಲಿ ಬಿಜೆಪಿ ರಾಜ್ಯ ಘಟಕದ ಮುಖಂಡ ಅಭಯ್ ಸಿಂಗ್ ಸೇರಿದಂತೆ 50ಕ್ಕೂ ಹೆಚ್ಚಿನ ಜನರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

‘ಭಾನುವಾರ ಸಂಜೆ ಸ್ಥಳೀಯ ಎರಡು ಗುಂಪುಗಳ ನಡುವೆ ಇಟ್ಟಿಗೆ ತೂರಾಟ ಹಾಗೂ ಬೆಂಕಿ ಹಚ್ಚಿದ ಪ್ರಕರಣ ನಡೆದಿದ್ದು, ಘಟನಾ ಸ್ಥಳದಲ್ಲಿ ಸಿಆರ್‌ಪಿಸಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ’ ಎಂದೂ ಮಾಹಿತಿ ನೀಡಿದ್ದಾರೆ.

‘ಶಾಸ್ತ್ರೀನಗರದಲ್ಲಿ ಶನಿವಾರ ರಾತ್ರಿ ರಾಮನವಮಿಯ ಧ್ವಜಕ್ಕೆ ಮಾಂಸದ ತುಂಡೊಂದನ್ನು ಜೋಡಿಸಿದ್ದನ್ನು ಸ್ಥಳೀಯ ಸಂಘಟನೆಯೊಂದರ ಸದಸ್ಯರು ಕಂಡಿದ್ದರು. ಈ ಘಟನೆಯ ಬಳಿಕ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಭಾನುವಾರ ಸಂಜೆಯ ವೇಳೆಗೆ ಘರ್ಷಣೆಯಲ್ಲಿ ತೊಡಗಿದ್ದ ಎರಡು ಗುಂಪುಗಳು ಎರಡು ಅಂಗಡಿಗಳು ಹಾಗೂ ಆಟೊ ರಿಕ್ಷಾಗಳನ್ನು ಸುಟ್ಟು ಹಾಕಿದಾಗ ಪರಿಸ್ಥಿತಿಯು ಹಿಂಸಾಚಾರಕ್ಕೆ ತಿರುಗಿತು. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು’ ಎಂದು ಪೂರ್ವ ಸಿಂಗ್‌ಭೂಮ್‌ನ ಜಿಲ್ಲಾಧಿಕಾರಿ ವಿಜಯ್ ಜಾಧವ್ ವಿವರಿಸಿದ್ದಾರೆ.

‘ಅಭಯ್ ಸಿಂಗ್ ಸೇರಿದಂತೆ 50ಕ್ಕೂ ಹೆಚ್ಚಿನ ಜನರನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಪೊಲೀಸರು ಸೋಮವಾರ ಬೆಳಿಗ್ಗೆ ಪಥಸಂಚಲನ ನಡೆಸಿದ್ದಾರೆ. ಶಾಸ್ತ್ರಿನಗರದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಗೆ ಪೊಲೀಸ್ ಭದ್ರತಾ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ’ ಎಂದು ಎಸ್ಎಸ್‌ಪಿ ಪ್ರಭಾತ್ ಕುಮಾರ್ ತಿಳಿಸಿದ್ದಾರೆ.

ಇಂಟರ್‌ನೆಟ್ ಸೇವೆಗೆ ಅಡ್ಡಿಪಡಿಸಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT