ನವದೆಹಲಿ: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಪೈಶಾಚಿಕ ಕೃತ್ಯದ ಹೊಣೆಯನ್ನು ಕೇಂದ್ರ ಸರ್ಕಾರವೇ ಹೊರಬೇಕು ಎಂದು ಗುರುವಾರ ಆಕ್ರೋಶ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಾರ್ಟಿ (ಎಎಪಿ), ಬಿಜೆಪಿ ಎಂದರೆ 'ಬ್ರಿಜ್‌ಭೂಷಣ್ ಜನತಾ ಪಕ್ಷ' ಎಂದು ಟೀಕಿಸಿದೆ.
ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಎಪಿ ವಕ್ತಾರೆ ಪ್ರಿಯಾಂಕಾ ಕಕ್ಕರ್, ತಪ್ಪಿತಸ್ಥರನ್ನು ಪತ್ತೆ ಹಚ್ಚಲು ವಿಳಂಬವಾಗುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.
'ಘಟನೆ ಕುರಿತು ಇಂದು ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಆಘಾತಕ್ಕೊಳಗಾಗಿರುವುದಾಗಿ ತಿಳಿಸಿದ್ದಾರೆ. ಸುಮಾರು 77 ದಿನಗಳಿಂದ ಹಿಂಸಾಚಾರಕ್ಕೆ ಮಣಿಪುರ ಸಾಕ್ಷಿಯಾಗಿದೆ. 'ಈ ಆಘಾತ' ವ್ಯಕ್ತಪಡಿಸಲು ಅವರು ಇಷ್ಟು ಸಮಯ ತೆಗೆದುಕೊಂಡದ್ದು ಏಕೆ?' ಎಂದು ಕೇಳಿದ್ದಾರೆ.
ಇದನ್ನೂ ಓದಿ: ಮಹಿಳೆಯರಿಬ್ಬರ ಬೆತ್ತಲೆ ಮೆರವಣಿಗೆ ವಿಡಿಯೊ ಬಿಡುಗಡೆ: ಮಣಿಪುರ ಉದ್ವಿಗ್ನ
ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಮೇ 4ರಂದು ನಡೆದಿದ್ದ ಹಿಂಸಾಚಾರದ ವೇಳೆ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದ ವಿಡಿಯೊವೊಂದು ಬುಧವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಇದರ ಬೆನ್ನಲ್ಲೇ ಮಣಿಪುರದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿದೆ.
'ವಿಡಿಯೊ ಹರಿದಾಡುತ್ತಿದ್ದಂತೆ ಎಫ್‌ಐಆರ್ ದಾಖಲಿಸಿಕೊಂಡಿರುವುದಾಗಿ ಮತ್ತು ಆರೋಪಿಗಳ ಪತ್ತೆಗೆ ಪ್ರಯತ್ನಿಸುತ್ತಿರುವುದಾಗಿ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕೃತ್ಯದಲ್ಲಿ ಭಾಗಿಯಾದವರ ಮುಖಗಳು ವಿಡಿಯೊದಲ್ಲಿ ಕಾಣಿಸುತ್ತವೆ. ಆದಾಗ್ಯೂ ಅವರನ್ನು ಗುರುತಿಸಲು ಪೊಲೀಸರಿಗೆ ಇನ್ನೆಷ್ಟು ಸಮಯ ಬೇಕು?' ಎಂದಿದ್ದಾರೆ.
'ಈ ವಿಷಯದಲ್ಲಿ ಪ್ರಧಾನಿಯನ್ನು ಟ್ಯಾಗ್ ಮಾಡಿ ಪ್ರತಿಯೊಬ್ಬರೂ ಧ್ವನಿ ಎತ್ತಬೇಕು ಎಂದು ಒಬ್ಬ ಮಹಿಳೆಯಾಗಿ ಎಲ್ಲರನ್ನೂ ಒತ್ತಾಯಿಸುತ್ತೇನೆ. ಕೇಂದ್ರ ಸರ್ಕಾರವೇ ಇದಕ್ಕೆ ಉತ್ತರದಾಯಿ' ಎಂದು ಗುಡುಗಿದ್ದಾರೆ.
ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಕುಸ್ತಿಪಟುಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಆ ಪ್ರಕರಣವನ್ನು ಉಲ್ಲೇಖಿಸಿ, ಕೇಂದ್ರದ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ಕಕ್ಕರ್, 'ಬಿಜೆಪಿಯು ಬ್ರಿಜ್‌ಭೂಷಣ್ ಜನತಾ ಪಕ್ಷವಾಗಿ ಬದಲಾಗಿದೆ' ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಮಣಿಪುರ: ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿದವರನ್ನು ಸುಮ್ಮನೆ ಬಿಡಲ್ಲ- ಮೌನ ಮುರಿದ ಮೋದಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.