ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಮನೀಶ್ ಸಿಸೋಡಿಯಾ ಜಾಮೀನು ಪಡೆದು ಹೊರಬರುತ್ತಿದ್ದಂತೆ ಆಮ್ ಆದ್ಮಿ ಪಕ್ಷ ‘ಸತ್ಯಮೇವ ಜಯತೆ’ ಅಭಿಯಾನವನ್ನು ಆರಂಭಿಸಿದೆ.
ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಫೈಲ್ ಫೋಟೊ ಬದಲಿಸಿ, ಪೋಸ್ಟರ್ ಹಂಚಿಕೊಳ್ಳುವ ಮೂಲಕ ಸಚಿವೆ ಅತಿಶಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ‘ನಮಗೆ ಎಷ್ಟು ಕಿರುಕುಳ ನೀಡಿದರೂ, ನಮ್ಮ ನಾಯಕರನ್ನು ದೀರ್ಘಕಾಲ ಜೈಲಿನಲ್ಲಿ ಇರಿಸಿದರೂ ಕೊನೆಯಲ್ಲಿ ಸತ್ಯವೇ ಜಯ ಸಾಧಿಸಲಿದೆ ಎಂದು ಈ ಮೂಲಕ ಬಿಜೆಪಿಯವರಿಗೆ ತಿಳಿಸುತ್ತೇವೆ’ ಎಂದು ಹೇಳಿದರು.
17 ತಿಂಗಳ ಬಳಿಕ ಜೈಲಿನಿಂದ ಹೊರಬಂದ ಸಿಸೋಡಿಯಾ ಅವರನ್ನು ಉಲ್ಲೇಖಿಸಿ, ‘ಸುಪ್ರೀಂ ಕೋರ್ಟ್ ಸಿಸೋಡಿಯಾ ಅವರಿಗೆ ಜಾಮೀನು ನೀಡಿರುವುದು ಸತ್ಯಕ್ಕೆ ಸಂದ ಜಯವಾಗಿದೆ. ಈ ಗೆಲುವನ್ನು ಸಂಭ್ರಮಿಸಲು, ಎಎಪಿ ಸಾಮಾಜಿಕ ಜಾಲತಾಣಗಳಲ್ಲಿ ‘ಸತ್ಯಮೇವ ಜಯತೆ’ ಅಭಿಯಾನವನ್ನು ಆರಂಭಿಸಿದೆ’ ಎಂದು ಅತಿಶಿ ಹೇಳಿದ್ದಾರೆ.
ಪೋಸ್ಟರ್‌ನಲ್ಲಿ ಅರವಿಂದ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರ ಫೋಟೊಗಳನ್ನು ಹಾಕಲಾಗಿದ್ದು, ಹಿಂದಿಯಲ್ಲಿ ‘ಸತ್ಯಮೇವ ಜಯತೆ’ ಎಂದು ಬರೆಯಲಾಗಿದೆ.