ನವದೆಹಲಿ: ಮುಂದಿನ ವರ್ಷ ದೆಹಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದರ ತಯಾರಿಯ ಭಾಗವಾಗಿ ಆಡಳಿತಾರೂಢ ಆಮ್ ಆದ್ಮಿ ಪಕ್ಷವು(ಎಎಪಿ) ‘ಕೇಜ್ರಿವಾಲ್ ಆಯೇಂಗೆ’ ಅಭಿಯಾನ ಆರಂಭಿಸಿದೆ.
ಕೇಂದ್ರೀಯ ತನಿಖಾ ದಳ(ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ(ಇ.ಡಿ) ತನಿಖೆ ನಡೆಸುತ್ತಿರುವ ದೆಹಲಿಯ ಅಬಕಾರಿ ನೀತಿ ಹಗರಣ ಸಂಬಂಧಿತ ಭ್ರಷ್ಟಾಚಾರ ಪ್ರಕರಣದಲ್ಲಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದ್ದು, ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.
‘ಪಕ್ಷವು ‘ಕೇಜ್ರಿವಾಲ್ ಆಯೇಂಗೆ’ ಅಭಿಯಾನ ಆರಂಭಿಸಿದೆ. ರಾಷ್ಟ್ರ ರಾಜಧಾನಿಯಾದ್ಯಂತ ಹಾಕಲಾಗಿರುವ ಕೇಜ್ರಿವಾಲ್ ಹೋರ್ಡಿಂಗ್ಸ್‌ಗಳಲ್ಲಿ ‘ಕೇಜ್ರಿವಾಲ್ ಆಯೇಂಗೆ’ ಟ್ಯಾಗ್ ಲೈನ್ ಹಾಕಲಾಗಿದೆ. ‘ಸಿಸೋಡಿಯಾ ಆ ಗಯೇ ಹೈ, ಕೇಜ್ರಿವಾಲ್ ಆಯೇಂಗೆ ಎಂಬುದು ಪಕ್ಷದ ಹೊಸ ಘೋಷವಾಕ್ಯವಾಗಿದೆ’ಎಂದು ಎಎಪಿ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
ಅಬಕಾರಿ ನೀತಿ ಪ್ರಕರಣದಲ್ಲಿ 17 ತಿಂಗಳಿಂದ ಜೈಲಿನಲ್ಲಿದ್ದ ಮನೀಶ್ ಸಿಸೋಡಿಯಾ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಕೇಜ್ರಿವಾಲ್ ಸಹ ಶೀಘ್ರ ಬರಲಿದ್ದಾರೆ ಎಂಬ ವಿಶ್ವಾಸವನ್ನು ಎಎಪಿ ಕಾರ್ಯಕರ್ತ ವ್ಯಕ್ತಪಡಿಸಿದ್ದಾರೆ.