ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆಗೆ 19 ಅಭ್ಯರ್ಥಿಗಳ 6ನೇ ಪಟ್ಟಿಯನ್ನು ಆಮ್ ಆದ್ಮಿ ಪಕ್ಷ ಬಿಡುಗಡೆ ಮಾಡಿದೆ. ಹಿರಿಯ ನಾಯಕ ಪ್ರೇಮ್ ಗಾರ್ಗ್ ಅವರನ್ನು ಪಂಚಕುಲ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.
ಕಲ್ಕಾ, ಅಂಬಾಲಾ ಸಿಟಿ, ಮುಲಾನಾ, ಶಹಾಬಾದ್, ಪೆಹೋವಾ, ಗುಹ್ಲಾ, ಪಾಣಿಪತ್, ಜಿಂದ್, ಫತೇಹಾಬಾದ್, ಎಲೆನಾಬಾದ್, ನಲ್ವಾ, ಲೋಹರು, ಬಧ್ರಾ, ದಾದ್ರಿ, ಬವಾನಿ ಖೇರಾ, ಕೋಸ್ಲಿ, ಫರಿದಾಬಾದ್ ಎನ್‌ಐಟಿ ಮತ್ತು ಬಧಕಲ್ ಕ್ಷೇತ್ರಗಳಿಗೆ ಎಎಪಿ ಅಭ್ಯರ್ಥಿಗಳನ್ನು ಪ್ರಕಟಿಸಿದೆ.
ಎಲೆನಾಬಾದ್‌ನಿಂದ ಮನೀಶ್ ಅರೋರಾ ಅವರನ್ನು ಅಭ್ಯರ್ಥಿಯನ್ನಾಗಿ ಹೆಸರಿಸಲಾಗಿದೆ. ಅಲ್ಲಿ ಐಎನ್‌ಎಲ್‌ಡಿ ಪಕ್ಷವು ಹಿರಿಯ ನಾಯಕ ಅಭಯ್ ಸಿಂಗ್ ಚೌಟಾಲ ಅವರನ್ನು ಕಣಕ್ಕಿಳಿಸಿದೆ.
ಎಎಪಿಯ ಓಪಿ ಗುಜ್ಜರ್ ಕಲ್ಕಾದಿಂದ, ವಜೀರ್ ಸಿಂಗ್ ಧಂಡಾ ಜಿಂದ್‌ನಿಂದ, ಕಮಲ್ ಬಿಸ್ಲಾ ಫತೇಹಾಬಾದ್‌ನಿಂದ, ಗೀತಾ ಶೆರಾನ್‌ನಿಂದ ಲೋಹರು, ಓಪಿ ವರ್ಮಾ ಬದ್‌ಖಾಲ್‌ನಿಂದ ಮತ್ತು ಹಿಮ್ಮತ್ ಯಾದವ್ ಕೋಸ್ಲಿಯಿಂದ ಸ್ಪರ್ಧಿಸಲಿದ್ದಾರೆ.
ಅರವಿಂದ ಕೇಜ್ರಿವಾಲ್ ನೇತೃತ್ವದ ಪಕ್ಷವು ಈ ಹಿಂದೆ 70 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು.
ಬುಧವಾರ 30 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಎಎಪಿ, ಜುಲಾನಾ ಕ್ಷೇತ್ರದಲ್ಲಿ ಕುಸ್ತಿ ಪಟು ಕವಿತಾ ದಲಾಲ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿ, ಕುಸ್ತಿಪಟು ವಿನೇಶ್ ಫೋಗಟ್ ಮತ್ತು ಬಿಜೆಪಿಯ ಯೋಗೇಶ್ ಬೈರಾಗಿ ವಿರುದ್ಧ ಸ್ಪರ್ಧೆಗಿಳಿಸಿತ್ತು.
ಕಾಂಗ್ರೆಸ್ ಜೊತೆಗಿನ ಮೈತ್ರಿ ಮುರಿದುಬಿದ್ದ ಬಳಿಕ ಸೋಮವಾರ 20 ಅಭ್ಯರ್ಥಿಗಳ ಪಟ್ಟಿಯನ್ನು ಎಎಪಿ ಬಿಡುಗಡೆ ಮಾಡಿತ್ತು.
ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದ್ದು, ಅಕ್ಟೋಬರ್ 5ರಂದು ಮತದಾನ ನಡೆಯಲಿದೆ.