ಮಧುರೈ (ತಮಿಳುನಾಡು): ಶ್ರೀ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನದ ಅಧಿಕಾರಿಗಳ ನಡವಳಿಕೆ ಕುರಿತು ನಟಿ, ಬಿಜೆಪಿಯ ರಾಜ್ಯ ಕಾರ್ಯಕಾರಿ ಸದಸ್ಯೆ ನಮಿತಾ ಅವರು ಸೋಮವಾರ ಆಕ್ಷೇಪ ವ್ಯಕ್ತಪಡಿಸಿದರು. ‘ನಾನು ಹಿಂದೂ ಎನ್ನುವುದಕ್ಕೆ ದೇವಸ್ಥಾನದ ಅಧಿಕಾರಿಗಳು ಸಾಕ್ಷ್ಯ ಕೇಳಿದರು’ ಎಂದು ದೂರಿದರು.
‘ನಾನು ಹಿಂದೂ ಎನ್ನುವುದಕ್ಕೆ ಸಾಕ್ಷ್ಯ ಕೇಳಿದರಲ್ಲದೆ, ನನ್ನ ಜಾತಿ ಪ್ರಮಾಣಪತ್ರವನ್ನೂ ಕೇಳಿದರು. ಇಂಥ ಅವಮಾನವನ್ನು ನಾನು ಎಂದೂ ದೇಶದ ಯಾವ ದೇವಸ್ಥಾನದಲ್ಲಿಯೂ ಅನುಭವಿಸಿರಲಿಲ್ಲ. ನನ್ನ ಜೊತೆ ಬಹಳ ಒರಟಾಗಿ ಮಾತನಾಡಿದರು’ ಎಂದು ಆರೋಪಿಸಿದರು.
ಘಟನೆ ಕುರಿತು ಹಿಂದೂ ಧಾರ್ಮಿಕ ಹಾಗೂ ದತ್ತಿ ಸಚಿವ ಪಿ.ಕೆ. ಸೇಖರ್ ಬಾಬು ಅವರನ್ನು ಕುರಿತ ವಿಡಿಯೊವೊಂದನ್ನು ಪೋಸ್ಟ್ ಮಾಡಿರುವ ಅವರು, ದೇವಸ್ಥಾನದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿಕೊಂಡರು.
ನಮಿತಾ ಅವರ ಆರೋಪಗಳನ್ನು ಅಲ್ಲಗಳೆದಿರುವ ದೇವಸ್ಥಾನದ ಹಿರಿಯ ಅಧಿಕಾರಿಗಳು, ‘ನಮಿತಾ ಹಾಗೂ ಅವರ ಪತಿ ಮಾಸ್ಕ್ ಧರಿಸಿದ್ದರು. ಆದ್ದರಿಂದ ಅವರನ್ನು ವಿಚಾರಿಸಬೇಕಾಯಿತು. ಅವರು ವಿವರಣೆ ನೀಡಿದ ಬಳಿಕ ಅವರಿಗೆ ತಿಲಕವಿಟ್ಟು ದರ್ಶನಕ್ಕೆ ಅವಕಾಶ ನೀಡಲಾಯಿತು’ ಎಂದಿದ್ದಾರೆ.