ನವದೆಹಲಿ: ಅದಾನಿ ಸಮೂಹವು ಚೀನಾದಲ್ಲಿ ‘ಅದಾನಿ ಎನರ್ಜಿ ರಿಸೋರ್ಸಸ್ (ಶಾಂಘೈ)’ ಎನ್ನುವ ಕಂಪನಿಯನ್ನು ತೆರೆದಿದೆ. ಈ ಬಗ್ಗೆ ಸಮೂಹವು ಸೆಪ್ಟೆಂಬರ್ 2ರಂದು ಸೆಬಿಗೆ ಮಾಹಿತಿ ನೀಡಿದ್ದು ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಮಂಗಳವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
‘ಅದಾನಿ ಅವರು ಚೀನಾದಲ್ಲಿ ಕಂಪನಿ ತೆರೆದಿರುವುದು ದೇಶದ ಭದ್ರತೆ ಹಾಗೂ ಭೌಗೋಳಿಕ ಸಾರ್ವಭೌಮತೆಗೆ ಬೆದರಿಕೆ ಒಡ್ಡಿದಂತಾಗಿದೆ. ಮೋದಿ ಹಾಗೂ ಅದಾನಿ ಅವರ ‘ವಿಶೇಷ ಸ್ನೇಹ’ಕ್ಕಾಗಿ ದೇಶದ ಹಿತಾಸಕ್ತಿಯನ್ನು ಬಲಿ ಕೊಟ್ಟ ದೃಷ್ಟಾಂತಗಳ ಪಟ್ಟಿ ಬೆಳೆಯುತ್ತಲೇ ಇದೆ’ ಎಂದು ಜೈರಾಮ್ ರಮೇಶ್ ಹೇಳಿದರು.
‘2020ರ ಜೂನ್ 19ರಂದು ಚೀನಾವು ದೇಶದೊಳಗೆ ನುಗ್ಗಿಯೇ ಇಲ್ಲ ಎಂದು ಅತಿಮಾನುಷ ಪ್ರಧಾನಿ ಮೋದಿ ಅವರು ಚೀನಾವು ನಿರ್ದೋಷಿ ಎಂದು ಹೇಳಿದ್ದರು. ಈಗ ಅದಾನಿ ಸಮೂಹವು ಚೀನಾದಲ್ಲಿ ಕಂಪನಿ ತೆರೆಯುತ್ತಿದೆ. ಬಹುಶಃ ಚೀನಾ ನಿರ್ದೋಷಿ ಎಂದು ಹೇಳಿದ್ದು ಈ ಕಂಪನಿ ಆರಂಭಕ್ಕೆ ಅನುಕೂಲವಾಯಿತು’ ಎಂದರು.
‘ಅದಾನಿ ಸಮೂಹವು ಈ ಹಿಂದೆ ಚೀನಾ ಹಾಗೂ ಪೂರ್ವ ಏಷ್ಯಾದಲ್ಲಿ ಕೆಲವು ವ್ಯವಹಾರಗಳನ್ನು ನಡೆಸಿದೆ. ಇವೆಲ್ಲವೂ ಅನುಮಾನಾಸ್ಪದವಾಗಿ ಕಂಡಿವೆ. ಚಾಂಗ್ ಚುಂಗ್ ಲೀ ಎನ್ನುವ ಥೈವಾನ್ ಉದ್ಯಮಿಯು ಅದಾನಿ ಸಮೂಹದ ಹಲವು ಕಂಪನಿಗಳಲ್ಲಿ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಈ ಉದ್ಯಮಿಯ ಕುಟುಂಬಸ್ಥರಿಗೆ ಸೇರಿದ ಹಡಗಿನಲ್ಲಿ ಅಕ್ರಮವಾಗಿ ತೈಲವನ್ನು ಉತ್ತರ ಕೋರಿಯಾಕ್ಕೆ ರವಾನಿಸಲಾಗುತ್ತಿತ್ತು. ಇದು ವಿಶ್ವಸಂಸ್ಥೆಯ ನಿರ್ದೇಶನಕ್ಕೆ ವಿರುದ್ಧವಾದ ನಡೆಯಾಗಿತ್ತು. ಈ ಅಕ್ರಮ ತೈಲ ಸಾಗಣೆಯಲ್ಲಿ ಶಾಂಘೈ ಅದಾನಿ ಶಿಪ್ಪಿಂಗ್ ಕಂಪನಿಯ ಭಾಗಶಃ ಪಾಲೂ ಇತ್ತು’ ಎಂದು ಆರೋಪಿಸಿದರು.
‘ಚುಂಗ್ ಲಿಂಗ್ ಅವರ ‘ಹೀ ಲಿಂಗೋಸ್’ ಕಂಪನಿಯೊಂದಿಗೆ ವ್ಯವಹಾರ ನಡೆಸಿದ ಅದಾನಿ ಶಾಂಘೈ ಶಿಪ್ಪಿಂಗ್ ಕಂಪನಿ, ಅದಾನಿ ಗ್ಲೋಬಲ್ ಕಂಪನಿ– ಈ ಎಲ್ಲ ಕಂಪನಿಗಳು ಹಲವು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿವೆ’ ಎಂದು ದೂರಿದರು.
ರಾಷ್ಟ್ರೀಯ ಭದ್ರತೆಗೆ ಕಂಟಕ
‘ಶ್ರೀಲಂಕಾ ಕೆನ್ಯಾ ಹಾಗೂ ಆಸ್ಟ್ರೇಲಿಯಾದಲ್ಲಿನ ಉದ್ಯಮಿ ಗೌತಮ್ ಅದಾನಿ ಅವರ ಉದ್ಯಮವು ಭಾರತಕ್ಕೆ ಕಂಟಕವನ್ನೇ ತಂದೊಡ್ಡಿದೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಚಳವಳಿಗೆ ಅದಾನಿ ವಿದ್ಯುತ್ ಯೋಜನೆಯೂ ಒಂದು ಕಾರಣ. ಆದ್ದರಿಂದ ಅದಾನಿ ಸಮೂಹದ ವ್ಯಾವಹಾರಿಕ ಹಿತಾಸಕ್ತಿಗೆ ಅನುಗುಣವಾಗಿ ಭಾರತವು ವಿದೇಶಿ ನೀತಿಯನ್ನು ಅಳವಡಿಸಿಕೊಳ್ಳುತ್ತಿದೆ. ಇದರಿಂದ ದೇಶಕ್ಕೆ ಶತ್ರುಗಳು ಹೆಚ್ಚುತ್ತಿದ್ದಾರೆ’ ಎಂದು ಜೈರಾಮ್ ರಮೇಶ್ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.